ಅರಭಾವಿ ಪಟ್ಟಣ ಪಂಚಾಯತಿಗೆ ನೂತನ ಅಧ್ಯಕ್ಷರಾಗಿ ಬಿಜೆಪಿಯ ರೇಣುಕಾ ಸಂಜು ಮಾದರ ಹಾಗೂ ಉಪಾಧ್ಯಕ್ಷರಾಗಿ ಬಿಜೆಪಿಯ ರಾಜಶ್ರೀ ಅಪ್ಪಯ್ಯ ಗಂಗನ್ನವರ ಅವಿರೋಧವಾಗಿ ಅಯ್ಕೆ
ಮೂಡಲಗಿ- ತಾಲ್ಲೂಕಿನ ಅರಭಾವಿ ಪಟ್ಟಣ ಪಂಚಾಯತಿಯ ನೂತನ ಅಧ್ಯಕ್ಷರಾಗಿ ಬಿಜೆಪಿಯ ರೇಣುಕಾ ಸಂಜು ಮಾದರ ಹಾಗೂ ಉಪಾಧ್ಯಕ್ಷರಾಗಿ ಬಿಜೆಪಿಯ ರಾಜಶ್ರೀ ಅಪ್ಪಯ್ಯ ಗಂಗನ್ನವರ ಅವರು ಅವಿರೋಧವಾಗಿ ಅಯ್ಕೆಯಾಗಿದ್ದಾರೆ.
ತಾಲ್ಲೂಕಿನ ಅರಭಾವಿ ಪಟ್ಟಣ ಪಂಚಾಯತಿಯ ಸಭಾ ಭವನದಲ್ಲಿ ಜರುಗಿದ ನೂತನ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆಯಲ್ಲಿ ಎರಡೂ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ನಡೆದಿದೆ.
ಅಧ್ಯಕ್ಷ ಸ್ಥಾನವು ಪರಿಶಿಷ್ಟ ಜಾತಿ ಮಹಿಳೆ ಮತ್ತು ಉಪಾಧ್ಯಕ್ಷ ಸ್ಥಾನವು ಹಿಂದುಳಿದ ಅ ವರ್ಗ ಮಹಿಳೆಗೆ ಮೀಸಲಿದ್ದರಿಂದ ಉಭಯ ಸ್ಥಾನಗಳಿಗೆ ತಲಾ ಒಂದೊಂದು ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳು ಅವಿರೋಧವಾಗಿ ಆಯ್ಕೆ ನಡೆದಿದೆ ಎಂದು ಚುನಾವಣಾಧಿಕಾರಿಯಾಗಿದ್ದ ಮೂಡಲಗಿ ತಹಶೀಲ್ದಾರ ಮಹಾದೇವ ಸನ್ಮುರಿ ಅವರು ಪ್ರಕಟಿಸಿದರು.
ಈ ಮೂಲಕ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಪಟ್ಟಣ ಪಂಚಾಯತಿಯಲ್ಲಿ ಸಂಪೂರ್ಣ ಮೇಲುಗೈ ಸಾಧಿಸಿದ್ದು, ಇಡೀ ,16 ಜನ ಸದಸ್ಯರು ಬಾಲಚಂದ್ರ ಜಾರಕಿಹೊಳಿ ಅವರೊಂದಿಗೆ ಗುರುತಿಸಿಕೊಂಡಿದ್ದಾರೆ. ಶಾಸಕರ ಸೂಚನೆಯ ಹಿನ್ನೆಲೆಯಲ್ಲಿ ಎರಡೂ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ನಡೆದಿರುವುದು ಬಾಲಚಂದ್ರ ಜಾರಕಿಹೊಳಿ ಪ್ರಭಾವಕ್ಕೆ ಹೆಚ್ಚಿನ ಮಾನ್ಯತೆ ಬಂದಂತಾಗಿದೆ.
ನೂತನವಾಗಿ ಆಯ್ಕೆಯಾಗಿರುವ ಅಧ್ಯಕ್ಷ- ಉಪಾಧ್ಯಕ್ಷರನ್ನು ಚುನಾವಣಾಧಿಕಾರಿಯಾಗಿದ್ದ ಸನ್ಮುರಿ ಅವರು ಹೂ-ಗುಚ್ಚ ನೀಡಿ ಅಭಿನಂದಿಸಿದರು. ಸ್ಥಳೀಯ ಮುಖಂಡರು, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕರಾದ ದಾಸಪ್ಪ ನಾಯಿಕ ಮತ್ತು ಸಿ.ಪಿ. ಯಕ್ಷಂಬಿ ಉಪಸ್ಥಿತರಿದ್ದರು.
ಇನ್ನು ಪಟ್ಟಣ ಪಂಚಾಯತಿಗೆ ನೂತನವಾಗಿ ಅಧ್ಯಕ್ಷ, ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ರೇಣುಕಾ ಮಾದರ ಮತ್ತು ರಾಜಶ್ರೀ ಗಂಗಣ್ಣವರ ಅವರಿಗೆ ಅಭಿನಂದನೆಗಳು. ಪಟ್ಟಣದ ಅಭಿವೃದ್ಧಿಗೆ ಸದಸ್ಯರು ಮತ್ತು ಹಿರಿಯರನ್ನು ವಿಶ್ವಾಸಕ್ಕೆ ಪಡೆದುಕೊಂಡು ಶ್ರಮಿಸಬೇಕು. ನಾಗರಿಕರ ಮೂಲ ಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕು. ಪಕ್ಷ ಬೇಧ ಮರೆತು ಅಭಿವೃದ್ಧಿಗೆ ದುಡಿಯಬೇಕು. ಅರಭಾವಿ ಪಟ್ಟಣದ ಪ್ರಗತಿಗಾಗಿ ಸರ್ಕಾರದ ವಿವಿಧ ಯೋಜನೆಗಳನ್ನು ಅನುಷ್ಟಾನ ಮಾಡುವೆ. ಪ್ರಗತಿಯ ಕಾರ್ಯಗಳಿಗೆ ಸರ್ಕಾರದ ಅನುದಾನವನ್ನು ಸದ್ಭಳಕೆ ಮಾಡಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುವೆ ಎಂದು ಶಾಸಕರಾದ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.