*ಆಪತ್ಬಾಂಭವ ಅರ್ಥ ಮಾಂತ್ರಿಕ ಚಿರಮೌನ; ಶಾಸಕ ಬಾಲಚಂದ್ರ ಜಾರಕಿಹೊಳಿ ಕಂಬನಿ*
*ಗೋಕಾಕ್* – ಆರ್ಥಿಕತೆಯ ಪಿತಾಮಹ, ಜಾಗತಿಕ ಭಾರತದ ಶಿಲ್ಪಿ, ಮಾಜಿ ಪ್ರಧಾನಿ, ಪದ್ಮವಿಭೂಷಣ ಡಾ. ಮನಮೋಹನ ಸಿಂಗ್ ಅವರ ನಿಧನಕ್ಕೆ ಅರಭಾವಿ ಶಾಸಕ ಮತ್ತು ಕಹಾಮ ನಿರ್ದೇಶಕ ಬಾಲಚಂದ್ರ ಜಾರಕಿಹೊಳಿ ಅವರು ಕಂಬನಿ ಮಿಡಿದಿದ್ದಾರೆ.
ಡಾ. ಸಿಂಗ್ ಅವರು ದೇಶದ ನಿರ್ಮಾಣಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ. ಸೌಮ್ಯ ಸ್ವಭಾವದ, ವಿನಮ್ರತೆಯ ಬುದ್ಧಿ ಜೀವಿಗಳಾಗಿದ್ದ ಅವರು ಭಾರತದ ಉದಾರೀಕರಣದ ಪೀತಾಮಹ ಎನಿಸಿಕೊಂಡಿದ್ದರು. ಸತತ ಹತ್ತು ವರ್ಷಗಳ ಅವಧಿಗೆ ಈ ದೇಶದ ಚುಕ್ಕಾಣಿ ಹಿಡಿದಿದ್ದ ಅವರು, ಹಲವು ಕ್ರಾಂತಿಕಾರಿ ಯೋಜನೆಗಳನ್ನು ರೂಪಿಸಿದ್ದರು. ಅರ್ಥ ವ್ಯವಸ್ಥೆ, ಬೇಡ ಕುಟುಂಬಗಳ ಆರ್ಥಿಕ ಸುಧಾರಣೆ, ಶಿಕ್ಷಣ, ನಿರುದ್ಯೋಗಿಗಳಿಗೆ ಉದ್ಯೋಗ ಸೃಷ್ಟಿ ಮುಂತಾದ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದರು. ಆರ್ಥಿಕತೆಗೆ ಮಾಂತ್ರಿಕ ಸ್ಪರ್ಶ ನೀಡಿದ್ದರು. ಐತಿಹಾಸಿಕ ಮುಂಗಡ ಪತ್ರ ಮಂಡಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದರು. ಮಾತಿಗಿಂತ ಕ್ರೀಯಾಶೀಲ ವ್ಯಕ್ತಿಯಾಗಿದ್ದ ಅವರು, ದೂರದೃಷ್ಟಿಯ ರಾಜಕಾರಣಿಯಾಗಿದ್ದರು. ಡಾ. ಸಿಂಗ್ ಅವರ ಆತ್ಮಕ್ಕೆ ಚಿರ ಶಾಂತಿ ಕೋರಿ, ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ ಎಂದು ಪ್ರಾರ್ಥನೆ ಮಾಡುವುದಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಮ್ಮ ಸಂತಾಪ ಸೂಚಕದಲ್ಲಿ ಹೇಳಿದ್ದಾರೆ.