ಎಪ್ರಿಲ್ 30 ರಿಂದ 9 ದಿನಗಳವರೆಗೆ ಗೋಕಾಕ ಗ್ರಾಮ ದೇವಿಯರ ಜಾತ್ರಾ ನಿಮಿತ್ಯ ನಡೆಯುವ ಅಷ್ಠ ಬಂಧ ಪ್ರತಿಷ್ಠಾ ಬ್ರಹ್ಮ ಕಲಶೋತ್ಸವ ಮತ್ತು ಮಹಾ ರಥೋತ್ಸವದ ಪೂರ್ವಭಾವಿ
.ಗೋಕಾಕ- ಗ್ರಾಮ ದೇವತೆಯರ ಜಾತ್ರಾ ನಿಮಿತ್ಯವಾಗಿ ಅದರ ಪೂರ್ವಭಾವಿಯಾಗಿ ಇದೇ ತಿಂಗಳ ೩೦ ರಿಂದ ಮೇ ೮ ರ ವರೆಗೆ ಅಷ್ಟ ಬಂಧ ಪ್ರತಿಷ್ಟಾ ಬ್ರಹ್ಮ ಕಳಶೋತ್ಸವ ಮತ್ತು ಮಹಾ ರಥೋತ್ಸವವು ಜರುಗಲಿದ್ದು, ಇದರ ಯಶಸ್ಸಿಯಾಗಿ ಪ್ರತಿಯೊಬ್ಬರೂ ಸೇವಾ ಮನೋಭಾವನೆಯಿಂದ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ದೇವಿಯರ ಕೃಪೆಗೆ ಪಾತ್ರರಾಗಬೇಕೆಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸಾರ್ವಜನಿಕರಲ್ಲಿ ವಿನಂತಿಸಿಕೊಂಡರು.
ನಗರದ ಮಹಾಲಕ್ಷ್ಮಿ ದೇವಸ್ಥಾನದ ಆವರಣದಲ್ಲಿ ಜರುಗಿದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಮಹಾಲಕ್ಷ್ಮಿ ಗಣಪತಿ, ಈಶ್ವರ, ಆಂಜನೇಯ, ನಾಗದೇವರ, ನವಗ್ರಹರ ದೇವರುಗಳ ಅಷ್ಠಬಂಧ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಒಟ್ಟು ೯ ದಿನಗಳವರೆಗೆ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.
ಈ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಲು ವಿವಿಧ ಉಪ ಸಮೀತಿಗಳನ್ನು ರಚಿಸಬೇಕು. ಜಾತ್ರೆಯ ಯಶಸ್ಸಿಗಾಗಿ ಪ್ರತಿಯೊಬ್ಬರೂ ತನು,ಮನ,ಧನದಿಂದ ಸೇವೆ ಸಲ್ಲಿಸಬೇಕು. ೯ ದಿನಗಳ ತನಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಈ ಸಂದರ್ಭದಲ್ಲಿ ದಿನಾಲು ಪೂಜ್ಯರಿಂದ ಪ್ರವಚನಗಳು ಜರುಗಲಿವೆ. ಬರುವ ಜೂನ್ ೩೦ ರಿಂದ ಜುಲೈ ೮ ರ ವರೆಗೆ ಗೋಕಾಕ ಗ್ರಾಮದೇವಿಯರ ಜಾತ್ರೆಯು ಬಹು ವಿಜೃಂಭನೆಯಿಂದ ಜರುಗಲಿದ್ದು, ಇಡೀ ರಾಜ್ಯವೇ ಮೆಚ್ಚಿಸುವ ರೀತಿಯಲ್ಲಿ ನಾವುಗಳು ಈ ಕಾರ್ಯಕ್ರಮಗಳಲ್ಲಿ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕಿದೆ. ಪುರಾತನವಾದ ಮಹಾಲಕ್ಷ್ಮಿ ದೇವಸ್ಥಾನದ ಜೀರ್ಣೋದ್ಧಾರವನ್ನು ಮಾಡಬೇಕೆಂಬುದನ್ನು ನಿಶ್ಚಯಿಸಿ ಸರ್ವಭಕ್ತರ ಸಹಕಾರದಿಂದ ದೇವಸ್ಥಾನವು ನವೀಕೃತಗೊಂಡು ಭವ್ಯವಾಗಿ ತಲೆಯೆತ್ತಿ ನಿಂತಿದೆ.ನಮ್ಮ ತಂದೆಯವರಾಗಿದ್ದ ದಿ. ಲಕ್ಷ್ಮಣರಾವ ಜಾರಕಿಹೊಳಿ ಅವರು ಈ ದೇವಸ್ಥಾನದ ನಿರ್ಮಾಣಕ್ಕೆ ಶ್ರಮಿಸಿದ್ದರು ಎಂಬುದನ್ನು ಸ್ಮರಿಸಿಕೊಂಡ ಅವರು, ಮೂಲ ಮಂದಿರಕ್ಕೆ ಯಾವುದೇ ಭಂಗ ಬರದಂತೆ ಶಿಖರವು ಎದ್ದು ನಿಂತಿದೆ. ಆಧುನಿಕತೆಯ ಸ್ಪರ್ಷದೊಂದಿಗೆ ಕಂಗೋಳಿಸುತ್ತಿದೆ. ಪರಿವಾರದ ದೇವರುಗಳು ಇದೇ ಸಂದರ್ಭದಲ್ಲಿ ಪ್ರತಿಷ್ಠಾಪನೆಗೊಳ್ಳಲಿವೆ. ಒಟ್ಟು ೪೦ ಪೂಜೆಗಳು ದಿನಂಪ್ರತಿ ನಡೆಯಲಿದ್ದು, ಈ ಪೂಜಾ ಕಾರ್ಯಗಳಲ್ಲಿ ಎಲ್ಲರೂ ಭಾಗವಹಿಸಬೇಕು. ಇದನ್ನು ಯಶಸ್ವಿ ಮಾಡಲು ನಗರದ ವಿವಿಧ ಸಂಘಟನೆಗಳು, ಯುವಕರು, ವಿವಿಧ ಸಮುದಾಯಗಳ ಪ್ರಮುಖರು ಮುಂದಾಗಿ ಕಾರ್ಯಕ್ರಮದ ಯಶಸ್ಸಿಗೆ ದುಡಿಯುವಂತೆ ಅವರು ತಿಳಿಸಿದರು.
ನಗರದಲ್ಲಿರುವ ಪ್ರತಿಯೊಂದು ಸಮಾಜಗಳ ಸಹಕಾರವು ಅಗತ್ಯವಾಗಿದೆ. ಎಲ್ಲರೂ ಕೂಡಿಕೊಂಡು ಅದ್ದೂರಿಯಾಗಿ ಜಾತ್ರೆಯನ್ನು ಮಾಡೋಣ. ಸೇವಾ ಭಾವದಿಂದ ದುಡಿಯೋಣ. ಮಹಾಲಕ್ಷ್ಮಿ ದೇವಿಯು ಸರ್ವರಿಗೂ ಒಳಿತನ್ನು ಮಾಡಲಿ ಎಂದು ಅವರು ಆಶಿಸಿದರು.
ಇದೇ ಸಂದರ್ಭದಲ್ಲಿ ಬಾಲಚಂದ್ರ ಜಾರಕಿಹೊಳಿ ಅವರ ಮಾರ್ಗದರ್ಶನದ ಮೇರೆಗೆ ಎಪ್ರಿಲ್ ೩೦ ರಿಂದ ೯ ದಿನಗಳ ಕಾಲ ಜರುಗುವ ಅಷ್ಠಬಂಧ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಕಾರ್ಯಕ್ರಮವನ್ನು ಯಶಸ್ವಿಮಾಡಲು ಉಪ- ಸಮೀತಿಗಳನ್ನು ರಚಿಸಲಾಯಿತು.
ಈ ಸಂದರ್ಭದಲ್ಲಿ ಪ್ರಭು ಚವ್ಹಾಣ, ಅಡಿವೆಪ್ಪ ಕಿತ್ತೂರ, ಅಶೋಕ ಹೆಗ್ಗನ್ನವರ, ಬಸವಣ್ಣಿ ಬನ್ನಿಶೆಟ್ಟಿ, ನಗರಸಭೆ ಅಧ್ಯಕ್ಷ ಪ್ರಕಾಶ ಮುರಾರಿ, ವಿಕ್ರಮ ಅಂಗಡಿ, ಲೆಕ್ಕ ಪರಿಶೋಧಕ ಸೈದಪ್ಪ ಗದಾಡಿ, ಅರ್ಬನ್ ಬ್ಯಾಂಕ್ ಅಧ್ಯಕ್ಷ ಬಸವರಾಜ ಕಲ್ಯಾಣಶೆಟ್ಟಿ, ನ್ಯಾಯವಾದಿ ಎಂ.ವೈ,ಹಾರೂಗೇರಿ, ಸಿ.ಬಿ.ಕೌಜಲಗಿ, ವಿವಿಧ ಸಮುದಾಯಗಳ ಮುಖಂಡರು, ನಗರಸಭೆ ಸದಸ್ಯರು, ವ್ಯಾಪಾರಿಗಳು, ನ್ಯಾಯವಾದಿಗಳು, ಹಲವು ಸಂಘಟನೆಗಳ ಪ್ರಮುಖರು, ಯುವಕ ಮಂಡಳಗಳ ಸದಸ್ಯರು ಭಾಗಿಯಾಗಿದ್ದರು.