ನಾಗರಿಕರು ಹಬ್ಬಗಳನ್ನು ನೆಮ್ಮದಿ,ಸಂತೋಷದಿಂದ ಆಚರಿಸುವಂತಾಗಬೇಕು: ಪಿಎಸ್ಐ ಕಿರಣ ಮೋಹಿತೆ.
ಕೊಣ್ಣೂರ : ಪಟ್ಟಣದಲ್ಲಿ ಗೌರಿ ಗಣೇಶ ಹಬ್ಬವನ್ನು ಶಾಂತಿ ಸುವ್ಯವಸ್ಥೆಯಿಂದ ಆಚರಿಸಬೇಕೆಂದು ಗೋಕಾಕ ಗ್ರಾಮೀಣ ಪಿ , ಎಸ್, ಐ ,ಕಿರಣ ಮೋಹಿತೆ ತಿಳಿಸಿದರು.ಕೊಣ್ಣೂರ ಪೊಲೀಸ್ ಉಪಠಾಣೆಗೆ ಒಳಪಟ್ಟ ಸಾರ್ವಜನಿಕ ಗಣೇಶ ಮಂಡಳಿಯವರು ಗಣೇಶ ಹಬ್ಬ ಆಚರಿಸುವ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತ ಕ್ರಮಕೈಗೊಳ್ಳುವ ಬಗ್ಗೆ ಇಲಾಖೆಯಿಂದ ಆಯೋಜಿಸಲಾಗಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು ಗಣೇಶ ಮೂರ್ತಿಯ ಪ್ರತಿಷ್ಠಾಪನೆ ಹಾಗೂ ವಿಸರ್ಜನೆಯ ವೇಳೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ಮಂಡಳಿಯವರು ಗಮನ ಹರಿಸಬೇಕೆಂದರು.ಗಣೇಶ ಮೂರ್ತಿಗಳ ಸಂಘಟಕರಿಗೆ ಕೆಲವೊಂದು ಸೂಚನೆಗಳನ್ನು ನೀಡಿದರು.
ಸಂಘಟಕರು ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಯನ್ನು ಕೂರಿಸುವ ಮೊದಲು ಸಂಬಂಧಪಟ್ಟ ಪುರಸಭೆ, ಪೊಲೀಸ್ ಇಲಾಖೆ, ಬೆಸ್ಕಾಂ, ಅಗ್ನಿಶಾಮಕ ಹಾಗೂ ಇತರೆ ಸಂಬಂಧಪಟ್ಟ ಇಲಾಖೆಗಳಿಂದ ಅನುಮತಿ ಪತ್ರ ಪಡೆಯಬೇಕು. ಸಾರ್ವಜನಿಕ ರಸ್ತೆ ಹಾಗೂ ವಾಹನ ಓಡಾಡುವ ಸ್ಥಳದಲ್ಲಿ ಶಾಮಿಯಾನ ಹಾಕಿ ಗಣೇಶಮೂರ್ತಿಯನ್ನು ಪ್ರತಿಷ್ಠಾಪಿಸಬಾರದು, ಗಣಪತಿ ಮೂರ್ತಿಯನ್ನು ದಿನದ 24 ಗಂಟೆಗಳು ಕಾಯಲು ಸಮಿತಿ ಸದಸ್ಯರನ್ನು ನೇಮಿಸಿ ಮುಂಜಾಗ್ರತೆ ವಹಿಸಬೇಕು. ತಾತ್ಕಾಲಿಕ ವಿದ್ಯುತ್ ಸರಬರಾಜಿಗೆ ಬೆಸ್ಕಾಂ ಇಲಾಖೆಯಿಂದ ಕಡ್ಡಾಯವಾಗಿ ಅನುಮತಿಯನ್ನು ಪಡೆಯಬೇಕು. ಧ್ವನಿವರ್ಧಕ ಬಳಕೆಗೆ ಪೊಲೀಸ್ ವೃತ್ತ ನಿರೀಕ್ಷಕರಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಸಮಿತಿ ವತಿಯಿಂದ ಸಿಡಿಮದ್ದು ಪಟಾಕಿ ಮುಂತಾದವುಗಳನ್ನು ಸಿಡಿಸುವಾಗ ಸಾರ್ವಜನಿಕರಿಗೆ ತೊಂದರೆಯಾಗದ ರೀತಿ ಜಾಗರೂಕತೆ ವಹಿಸಬೇಕು. ಸಾರ್ವಜನಿಕರ ಓಡಾಟಕ್ಕೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಪೆಂಡಾಲ್ ನಿರ್ಮಿಸಬೇಕು, ಬಲವಂತವಾಗಿ ಚಂದಾ ವಸೂಲಿ ಮಾಡಬಾರದು, ಕಾರ್ಯಕ್ರಮದಲ್ಲಿ ಅಶ್ಲೀಲ ನೃತ್ಯಗಳಿಗೆ ಅವಕಾಶ ನೀಡದಂತೆ ಎಚ್ಚರಿಕೆ ವಹಿಸಬೇಕೆಂದು ತಿಳಿಸಿದರು.
ನಾಗರಿಕರು ಹಬ್ಬಗಳನ್ನು ನೆಮ್ಮದಿ ಮತ್ತು ಸಂತೋಷದಿಂದ ಆಚರಿಸುವಂತಾಗಬೇಕು ಎಂಬುದು ಇಲಾಖೆಯ ಆಶಯವಾಗಿದ್ದು. ಆ ನಿಟ್ಟಿನಲ್ಲಿ ಎಲ್ಲರೂ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು. ಸಣ್ಣಪುಟ್ಟ ಅಹಿತಕರ ಘಟನೆ ನಡೆದಲ್ಲಿ ಸಮಾಜದ ಹಿರಿಯರು ಮುಂದಾಳತ್ವವಹಿಸಿ ಸಮಸ್ಯೆ ಬಗೆಹರಿಸಬೇಕೆ ಹೊರತು ಅದನ್ನು ಪ್ರಚೋದಿಸಿ ಸಮಸ್ಯೆ ಬಿಗಡಾಯಿಸಲು ಮುಂದಾಗಬಾರದು ಎಂದು ಮನವಿ ಮಾಡಿದರು. ಯಾರೊಬ್ಬರು ಮತ್ತೊಬ್ಬರ ಧಾರ್ಮಿಕ ಭಾವನೆಗಳಿಗೆ ನೋವುಂಟಾಗುವಂತೆ ವರ್ತಿಸಬಾರದು. ಸಮಾಜ ಘಾತುಕ ಶಕ್ತಿಗಳ ಬಗ್ಗೆ ಕೂಡಲೇ ಮಾಹಿತಿ ನೀಡಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ಕೊಣ್ಣೂರ ಉಪ ಪೊಲೀಸ್ ಠಾಣೆಗೆ ಒಳಪಟ್ಟ ಸಾರ್ವಜನಿಕ ಗಣೇಶ ಮಂಡಳಿಯ ಸರ್ವ ಸದಸ್ಯರು, ಎ ,ಎಸ್, ಐ ,ಎಸ್,ಕೆ,ಪಾಟೀಲ,ಸಿಬ್ಬಂದಿಗಳಾದ, ಎಚ್, ಡಿ,ಗೌಡಿ, ಎನ್, ಜಿ, ದುರದುಂಡಿ, ಡಿ, ಬಿ, ಅಂತರಗಟ್ಟಿ ಇನ್ನುಳಿದ ಗ್ರಾಮಸ್ಥರು ಉಪಸ್ತಿತರಿದ್ದರು.