ಆನಂದ ಮಾಮನಿ ನಿಧನಕ್ಕೆ ಕಂಬನಿ ಮಿಡಿದ ಶಾಸಕ ರಮೇಶ ಜಾರಕಿಹೊಳಿ.!
ಗೋಕಾಕ: ಸವದತ್ತಿ ವಿದಾನಸಭಾ ಕ್ಷೇತ್ರದ ಶಾಸಕರು ಹಾಗೂ ಉಪಸಭಾಧ್ಯಕ್ಷರಾದ ಆನಂದ ಮಾಮನಿ ಅವರ ನಿಧನ ಪಕ್ಷಕ್ಕೆ ಹಾಗೂ ಜಿಲ್ಲೆಗೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಶಾಸಕ ರಮೇಶ ಜಾರಕಿಹೊಳಿ ಅವರು ಮಾಮನಿ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ.
ಸವದತ್ತಿಯ ರೇಣುಕಾ ಯಲ್ಲಮ್ಮ ದೇವಿ ಆಡಳಿತ ಮಂಡಳಿ ಸದಸ್ಯರಾಗಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಅವರು ಮೂರು ಬಾರಿ ಶಾಸಕರಾಗಿ, ವಿಧಾನಸಭೆ ಡೆಪ್ಯುಟಿ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದವರು ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳ ಮೂಲಕ ಅವರು ಮೂರು ಬಾರಿ ಶಾಸಕರಾಗಿದ್ದರು. ಅಲ್ಲದೇ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ಅವರ ಅಭಿಮಾನಿ ಬಳಗವು ಆನಂದ್ ಮಾಮನಿ ಅವರಿಗೆ ‘ಸವದತ್ತಿ ಮೋದಿʼ ಎಂದೇ ಕರೆದಿದೆ. ಮಾಮನಿ ಅವರು ವೈಯಕ್ತಿಕ ವರ್ಚಸ್ಸು, ಬಿಜೆಪಿಯ ಅಲೆ ಬಳಸಿ ಸವದತ್ತಿಯಲ್ಲಿ ತಳ ಮಟ್ಟದಿಂದ ಪಕ್ಷವನ್ನು ಬಲಿಷ್ಠವನ್ನಾಗಿಸಿದ್ದರು. ವಿರೋಧಿಗಳನ್ನು ಸಹ ಭ್ರಾತೃತ್ವದಿಂದ ಕಾಣುವ ಸ್ವಭಾವ ಇವರದ್ದಾಗಿತ್ತು. ಗೆಳೆತನದಲ್ಲಿ ಜನುಮದ ಜೋಡಿಯಾಗಿ ಬೆಳೆದು, ರಾಜಕೀಯದಲ್ಲಿ ವೈರಿಯಾದ ಆನಂದ ಚೋಪ್ರಾ ಅವರು ನಿಧನರಾಗಿದ್ದಾಗ ಆನಂದ್ ಮಾಮನಿ ಅವರು ಮುಂದಾಳತ್ವ ವಹಿಸಿ ಅಂತ್ಯಸಂಸ್ಕಾರಕ್ಕೆ ನೆರವಾಗಿದ್ದರು.
ಆನಂದ್ ಮಾಮನಿ ಅವರ ತಂದೆ ಚಂದ್ರಶೇಖರ್ ಮಾಮನಿ ಅವರು ಕೂಡ ಶಾಸಕರಾಗಿದ್ದರು. ಅಲ್ಲದೆ, ಚಂದ್ರಶೇಖರ್ ಮಾಮನಿ ಅವರು 1990ರಲ್ಲಿ ವಿಧಾನಸಭೆಯ ಡೆಪ್ಯುಟಿ ಸ್ಪೀಕರ್ ಆಗಿದ್ದರು. ತಂದೆಯವರಂತೆ ಆನಂದ್ ಮಾಮನಿ ಅವರೂ 2020ರ ಮಾರ್ಚ್ 24ರಂದು ವಿಧಾನಸಭೆ ಉಪ ಸಭಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಮೂರು ಬಾರಿ ಶಾಸಕರಾದ ಅವರಿಗೆ ಸಚಿವರಾಗಬೇಕು, ಜನರಿಗೆ ಹೆಚ್ಚಿನ ಸೇವೆ ಒದಗಿಸಬೇಕು ಎಂಬ ತುಡಿತ ಇತ್ತು ವಿಧಿಯಾಟ ಅನಾರೋಗ್ಯದ ಹಿನ್ನಲೆ ಇಂದು ಅವರು ನಮ್ಮನ್ನು ಅಗಲಿದ್ದಾರೆ. ಅವರ ಆತ್ಮಕ್ಕೆ ಪರಮಾತ್ಮ ಚಿರ ಶಾಂತಿಯನ್ನು ನೀಡಲಿ, ಕುಟುಂಬಕ್ಕೆ ಹಾಗೂ ಅವರ ಅಪಾರ ಅಭಿಮಾನಿ ಬಳಗಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವದಾಗಿ ತಿಳಿಸಿದ್ದಾರೆ.