ಅರಭಾವಿ ಮತಕ್ಷೇತ್ರದ ಸಮಗ್ರ ಪ್ರಗತಿಗಾಗಿ ಈ ಬಾರಿಯೂ ಬಿಜೆಪಿಗೆ ಮತ ನೀಡಿ: ಬಾಲಚಂದ್ರ ಜಾರಕಿಹೋಳಿ
ಮೂಡಲಗಿ- ಅರಭಾವಿ ಮತಕ್ಷೇತ್ರದ ಸಮಗ್ರ ಪ್ರಗತಿಗಾಗಿ ಈ ಬಾರಿಯೂ
ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದು, ಮೇ. 10 ರಂದು ನಡೆಯುವ ಚುನಾವಣೆಯಲ್ಲಿ ಅತ್ಯಧಿಕ ಮತಗಳಿಂದ ಆಯ್ಕೆ ಮಾಡಿ ಜನಸೇವೆಗೆ ಮತ್ತೊಮ್ಮೆ ಅವಕಾಶ ನೀಡುವಂತೆ ಅರಭಾವಿ ಬಿಜೆಪಿ ಅಭ್ಯರ್ಥಿ ಬಾಲಚಂದ್ರ ಜಾರಕಿಹೊಳಿ ಅವರು ಮನವಿ ಮಾಡಿದರು.
ತಾಲ್ಲೂಕಿನ ಕುಲಗೋಡ ಗ್ರಾಮದಲ್ಲಿ ಚುನಾವಣೆ ಪ್ರಚಾರದ ನಿಮಿತ್ಯ ಮತಯಾಚಿಸಿ ಮಾತನಾಡಿದ ಅವರು, ಅಭಿವೃದ್ಧಿ ಆಧಾರದ ಮೇಲೆ ಮತ ಯಾಚನೆ ಮಾಡುತ್ತಿರುವುದಾಗಿ ತಿಳಿಸಿದರು.
ಕ್ಷೇತ್ರದ ಸರ್ವಾಂಗೀಣ
ಅಭಿವೃದ್ಧಿಗೆ ಸಾಕಷ್ಟು ಜನಪರ ಕಾಮಗಾರಿಗಳನ್ನು ನೆರವೇರಿಸಲಾಗಿದೆ. ಕೃಷಿ, ನೀರಾವರಿ, ಶಿಕ್ಷಣ, ಧಾರ್ಮಿಕ ಮುಂತಾದ ಕ್ಷೇತ್ರಗಳಿಗೆ ಆದ್ಯತೆ ನೀಡಲಾಗಿದೆ. ಜನರಿಗೆ ಮೂಲಭೂತ ಸೌಕರ್ಯಗಳನ್ನು ನೀಗಿಸಲು ವಿಶೇಷವಾಗಿ ಪ್ರಯತ್ನಿಸಲಾಗಿದೆ. ಈ ಭಾಗದಲ್ಲಿಯೂ ಹಲವಾರು ಯೋಜನೆಗಳನ್ನು ಸಾಕಾರ ಮಾಡಲಾಗಿದೆ ಎಂದು ಹೇಳಿದರು.
ನಮ್ಮ ಕೆಲಸವನ್ನು ನಾವು ಶಿಸ್ತು ಬದ್ಧವಾಗಿ ಮಾಡೋಣ. ಬಿಜೆಪಿ ಸರಕಾರದ ಸಾಧನೆಗಳನ್ನು ತಿಳಿಸೋಣ. ಕೇಂದ್ರ ಹಾಗೂ ರಾಜ್ಯದಲ್ಲಿ ನಮ್ಮದೇ ಸರಕಾರ ಇರುವುದರಿಂದ ಅಭಿವೃದ್ಧಿಗೆ ಇನ್ನಷ್ಟೂ ಅನುಕೂಲವಾಗಲಿದೆ. ನಮ್ಮ ಸಾಧನೆಗಳನ್ನೂ ಸಹ ಮನವರಿಕೆ ಮಾಡಿ ಮತದಾರರ ಬಳಿ ಮನವಿ ಮಾಡಿಕೊಳ್ಳುವಂತೆ ಅವರು ಕಾರ್ಯಕರ್ತರಿಗೆ ಹೇಳಿದರು.
ರಾಜ್ಯದಲ್ಲಿ ಮತ್ತೊಂದು ಅವಧಿಗೆ ಬಿಜೆಪಿಯೇ ಸರಕಾರ ರಚಿಸಲಿದೆ. ರಾಜ್ಯದಲ್ಲೆಡೆ ಬಿಜೆಪಿ ಪರ ಮತದಾರರು ಒಲುವು ವ್ಯಕ್ತಪಡಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅಮಿತ್ ಶಾ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ,
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಿಎಂ ಬೊಮ್ಮಾಯಿ ಸೇರಿದಂತೆ ಕೇಂದ್ರ ಹಾಗೂ ರಾಜ್ಯ ಮಟ್ಟದ ಅನೇಕ ನಾಯಕರು ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಮೋದಿ ಅವರ ಅಲೆಯು ಈ ಬಾರಿಯೂ ಎದಿದ್ದೂ ಮತ್ತೊಂದು ಅವಧಿಗೆ ಸರಕಾರ ರಚಿಸಲು ಅನುಕೂಲವಾಗಲಿದೆ ಎಂದು ತಿಳಿಸಿದರು.
ಅರಭಾವಿ ಮತಕ್ಷೇತ್ರದ ಪ್ರಗತಿಯಲ್ಲಿ ಎಂದಿಗೂ ಯಾವ ತಾರತಮ್ಯವನ್ನು ಮಾಡಿಲ್ಲ. ಸಹೋದರತ್ವ ತತ್ವದಡಿ ಕೆಲಸ ಮಾಡಲಾಗಿದೆ. ಕಳೆದ 19 ವರುಷಗಳಿಂದ ಈ ಭಾಗದ ಶಾಸಕನಾಗಿ ಅತ್ಯಂತ ಪ್ರಾಮಾಣಿಕವಾಗಿ ಕಾರ್ಯ ಮಾಡಿದ್ದೇನೆ. ವಿರೋಧಿಗಳಿಗೆ ಮತ ಯಾಚಿಸಲೂ ಈಗ ಯಾವ ಅಸ್ತ್ರಗಳು ಇಲ್ಲ. ಕೇವಲ ವೈಯಕ್ತಿಕವಾಗಿ ಮಾತನಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣವನ್ನು ಉಪಯೋಗಿಸಿಕೊಂಡು ಜನರನ್ನು ಮರುಳು ಮಾಡಲು ಹೊರಟಿದ್ದಾರೆ. ಪ್ರತಿ ಚುನಾವಣೆಯಂತೆ ಈ ಚುನಾವಣೆಯಲ್ಲಿ ಮುಖ ತೋರಿಸಿ ಮತ್ತೇ ಮುಂದಿನ ಚುನಾವಣೆಗೆ ಬರುತ್ತಾರೆ. ನಿಮಗೆ ಕ್ಷೇತ್ರದ ಅಭಿವೃದ್ಧಿ ಮಾಡುವ ಸೇವಕ ಬೇಕೇ? ಅಥವಾ ಐದು ವರ್ಷಕ್ಕೊಮ್ಮೆ ಬಂದು ಹೋಗುವ ವ್ಯಕ್ತಿಗಳು ಬೇಕೇ? ಎಂಬುದನ್ನು ನೀವೇ ನಿರ್ಧಾರ ಮಾಡಬೇಕಿದೆ. ಯೋಗ್ಯ ವ್ಯಕ್ತಿಯನ್ನು ಆಯ್ಕೆ ಮಾಡುವ ಮೂಲಕ ಅಭಿವೃದ್ಧಿಗೆ ಬೆಂಬಲಿಸುವಂತೆ ಕೋರಿಕೊಂಡ ಅವರು, ನನ್ನ ಶೇಜ್ ನಂ. 5 ಇದ್ದು, ಕಮಲ ಗುರ್ತಿನ ಚಿತ್ರಕ್ಕೆ ಮತ ನೀಡಿ ಆಶೀರ್ವಾದ ಮಾಡುವಂತೆ ಶಾಸಕ ಮತ್ತು ಅಭ್ಯರ್ಥಿ ಬಾಲಚಂದ್ರ ಜಾರಕಿಹೊಳಿ ಅವರು ಮತದಾರರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗೋಕಾಕ್ ಟಿಎಪಿಸಿಎಂಎಸ್ ಅಧ್ಯಕ್ಷ ಅಶೋಕ ನಾಯಿಕ, ಜಿ.ಪಂ.ಮಾಜಿ ಸದಸ್ಯ ಗೋವಿಂದ ಕೊಪ್ಪದ, ಮುಖಂಡರಾದ ಬಸನಗೌಡ ಪಾಟೀಲ, ಸುಭಾಸ ಒಂಟಗೋಡಿ, ಪುಟ್ಟಣ್ಣ ಪೂಜೇರಿ, ರೈತ ಮೋರ್ಚಾ ಮಂಡಲ ಅಧ್ಯಕ್ಷ ತಮ್ಮಣ್ಣ ದೇವರ ಸೇರಿದಂತೆ ಅನೇಕ ಮುಖಂಡರು, ಬಿಜೆಪಿ ಪದಾಧಿಕಾರಿಗಳು ಉಪಸ್ಥಿತರಿದ್ದರು.