ಪ್ರಧಾನಿ ನರೇಂದ್ರ ಮೋದಿಯವರಂತಹ ಪ್ರಾಮಾಣಿಕರು ನಮ್ಮ ದೇಶಕ್ಕೆ ಬೇಕಾಗಿದೆ : ಬೆಮುಲ್ ಅದ್ಯಕ್ಷ ಬಾಲಚಂದ್ರ ಜಾರಕಿಹೋಳಿ
ಗೋಕಾಕ- ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿ ನಾಯಕತ್ವದಿಂದ ಭಾರತವು ಜಾಗತಿಕ ಮಟ್ಟದಲ್ಲಿ ಬಲಾಢ್ಯವಾಗುತ್ತಿದೆ. ಭಾರತಕ್ಕೆ ಮೋದಿಯವರು ಅವಶ್ಯವಾಗಿದ್ದು, ಅವರ ಸೇವೆಯು ನಮ್ಮ ದೇಶಕ್ಕೆ ಇನ್ನೂ ಬೇಕಿದೆ ಎಂದು ಅರಭಾವಿ ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ತಿಳಿಸಿದರು.
ಇಲ್ಲಿಯ ಎನ್ಎಸ್ಎಫ್ ಕಛೇರಿಯಲ್ಲಿ ಸೋಮವಾರ ಸಂಜೆ ಅರಭಾವಿ ಮಂಡಲ ಏರ್ಪಡಿಸಿದ್ದ ಬಿಎಲ್ಎ- 2 ಕಾರ್ಯಾಗಾರ ಮತ್ತು ವಿಶೇಷ ಮತದಾರರ ಪಟ್ಟಿಯ ಪರಿಷ್ಕರಣೆ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರಂತಹ ಪ್ರಾಮಾಣಿಕರು ನಮ್ಮ ದೇಶಕ್ಕೆ ಬೇಕಾಗಿದೆ ಎಂದು ಹೇಳಿದರು.
ಬಿಹಾರದಲ್ಲಿ ಮತ್ತೊಂದು ಅವಧಿಗೆ ಎನ್ಡಿಎ ಸರ್ಕಾರ ಬಂದಿದೆ. ಬಿಜೆಪಿಗೆ ಸೋಲು ಅನ್ನುವವರಿಗೆ ಅಲ್ಲಿನ ಮತದಾರರು ತಕ್ಕ ಉತ್ತರವನ್ನು ನೀಡಿದ್ದಾರೆ. ಈ ಮೂಲಕ ಮೋದಿ- ನಿತೀಶ್ ಕುಮಾರ ಆಡಳಿತಕ್ಕೆ ಮತ್ತೇ ಜೈ ಅಂದಿದ್ದಾರೆ. ಇದರಿಂದ ಮೋದಿಯವರ ಸಾಮರ್ಥ್ಯವು ಎಷ್ಟಿದೇ ಎಂಬುದು ಇಡೀ ದೇಶಕ್ಕೆ ಗೊತ್ತಾಗಿದೆ ಎಂದು ಹೇಳಿದರು.
ಅರಭಾವಿ ಕ್ಷೇತ್ರದಲ್ಲಿರುವ ಅರ್ಹ ಮತದಾರರನ್ನು ಗುರುತಿಸಿ ಆದಷ್ಟೂ ಬೇಗನೇ ಮತದಾರರ ಯಾದಿಯನ್ನು ತಲುಪಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು.
ಮತದಾರರ ಪರಿಷ್ಕರಣೆಯಿಂದ ಅರ್ಹರಿಗೆ ಮತ ಚಲಾಯಿಸುವ ಭಾಗ್ಯ ಬರುತ್ತದೆ, ಇನ್ನೊಂದೆಡೆ ಅನರ್ಹ ಮತದಾರರನ್ನು ಹೊರಗೆ ಕಳಿಸುವ ಕೆಲಸವನ್ನು ನಮ್ಮ ಕಾರ್ಯಕರ್ತರು ಮಾಡುವಂತೆ ಅವರು ಸಲಹೆ ಮಾಡಿದರು.
ಈಗಾಗಲೇ ನಮ್ಮ ಕ್ಷೇತ್ರದಲ್ಲಿ ಸುಮಾರು 281 ಮತಗಟ್ಟೆಗಳಿದ್ದು, ಪ್ರತಿ ಮತಗಟ್ಟೆ ಕೇಂದ್ರದಲ್ಲಿ ಯೋಗ್ಯವಿರುವ ಅರ್ಹ ಮತದಾರರನ್ನು ಗುರುತಿಸಬೇಕು. ಮೃತಪಟ್ಟವರ ಹೆಸರನ್ನು ತೆಗೆಸಬೇಕು. 18 ವರ್ಷ ಮೇಲ್ಪಟ್ಟ ವಯಸ್ಸಿನ ಯುವಕರನ್ನು ಮತದಾರ ಪಟ್ಟಿಯಲ್ಲಿ ಸೇರಿಸಬೇಕು. ಎರಡೆರಡು ಕಡೆಗಳಲ್ಲಿ ಮತ ಚಲಾಯಿಸುವವರನ್ನು ಪಟ್ಟಿಯಿಂದ ಕೈ ಬಿಡಲು ಅಧಿಕಾರಿಗಳಿಗೆ ತಿಳಿಸಬೇಕು ಎಂದು ಹೇಳಿದರು.
ತಕ್ಕ ಶಾಸ್ತಿ- ನಮ್ಮಿಂದ ಅಧಿಕಾರ ಪಡೆದವರು ಇಂದು ನಮಗೆ ಮೋಸ ಮಾಡುತ್ತಿದ್ದಾರೆ. ನಮ್ಮ ವಿರುದ್ಧ ಅಲ್ಲಲ್ಲಿ ಸಭೆಗಳನ್ನು ನಡೆಸುತ್ತಿದ್ದಾರೆ. ನಾವು ಯಾರಿಗೂ, ಯಾವ ಸಮಾಜಕ್ಕೂ ಅನ್ಯಾಯವನ್ನು ಮಾಡಿಲ್ಲ. ಆದರೂ ನಮ್ಮ ಸಂಘಟನೆಯಿಂದ ಬೆಳೆದು, ಅಧಿಕಾರ ಅನುಭವಿಸಿದವರು ಈಗ ನಮಗೆ ವಿರೋಧಿಗಳಾಗಿದ್ದಾರೆ. ಮುಂದಿನ ದಿನಗಳಲ್ಲಿ ಅಂತಹವರಿಗೆ ತಕ್ಕ ಪಾಠವನ್ನು ಕಲಿಸುತ್ತೇನೆ. ಯಾರೂ, ಎಷ್ಟೇ ತಿಪ್ಪರಲಾಗ ಹಾಕಿದರೂ ಮುಂದಿನ 2028 ರಂದು ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ನಾನೇ ದಿಗ್ವಿಜಯ ಸಾಧಿಸುತ್ತೇನೆ. ಎಲ್ಲಿಯತನಕ ಜನರ ಪ್ರೀತಿ, ವಿಶ್ವಾಸ, ಆಶೀರ್ವಾದ ಇರುತ್ತದೆಯೋ ಅಲ್ಲಿಯವರೆಗೆ ನನ್ನನ್ನು ಏನೂ ಮಾಡಲು ಸಾಧ್ಯವಿಲ್ಲ ಎಂದು ವಿರೋಧಿಗಳಿಗೆ ಬಾಲಚಂದ್ರ ಜಾರಕಿಹೊಳಿಯವರು ಎಚ್ಚರಿಕೆ ನೀಡಿದರು.
ಜಿಲ್ಲಾ ಎಸ್ಐಆರ್ ಜಿಲ್ಲಾ ಪ್ರಭಾರಿ ಮತ್ತು ಮಾಜಿ ಶಾಸಕ ಸಂಜಯ ಪಾಟೀಲ ಮಾತನಾಡಿ, ಕಾಂಗ್ರೆಸ್ಸಿಗರೇ ಈ ದೇಶದಲ್ಲಿ ವೋಟ್ ಚೋರಿ ಮಾಡಿದ್ದಾರೆ. ಸಂವಿಧಾನಕ್ಕೆ ಅಪಚಾರ ತಂದಿದ್ದಾರೆ. ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಲು ನೆಹರೂ ಅವರು ಸಂಚು ರೂಪಿಸಿ, ಸಂವಿಧಾನ ಶಿಲ್ಲಿಯನ್ನು ಅವಮಾನಿಸಿದ್ದಾರೆ ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಸುಭಾಸ ಪಾಟೀಲ, ಬಿಎಲ್ಎ- 1 ಅರಭಾವಿ ಪ್ರಭಾರಿ ಗೋವಿಂದ ಕೊಪ್ಪದ, ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯಕ್ಷ ಯಲ್ಲೇಶ್ ಕೊಲಕಾರ,ಪರಸಪ್ಪ ಬಬಲಿ ಮುಂತಾದವರು ಉಪಸ್ಥಿತರಿದ್ದರು.
Fast9 Latest Kannada News