Breaking News

ಕಸದ ರಾಶಿಯಲ್ಲಿ ಸಿಕ್ಕ 10 ಲಕ್ಷ ರೂ. ಮಾಲೀಕರಿಗೆ ಯಶಸ್ವಿಯಾಗಿ ಮರಳಿಸಿ ಪ್ರಾಮಾಣಿಕತೆ ಮೆರೆದ ನೈರ್ಮಲ್ಯ ಕಾರ್ಯಕರ್ತೆ ಅಂಜು ಮಾನೆ

Spread the love

ಕಸದ ರಾಶಿಯಲ್ಲಿ ಸಿಕ್ಕ 10 ಲಕ್ಷ ರೂ. ಮಾಲೀಕರಿಗೆ ಯಶಸ್ವಿಯಾಗಿ ಮರಳಿಸಿ ಪ್ರಾಮಾಣಿಕತೆ ಮೆರೆದ ನೈರ್ಮಲ್ಯ ಕಾರ್ಯಕರ್ತೆ ಅಂಜು ಮಾನೆ

ಪುಣೆ (ಮಹಾರಾಷ್ಟ್ರ):ವಿಶ್ವದಲ್ಲಿ ಡಿಜಿಟಲ್​​ ಅರೆಸ್ಟ್​, ಬ್ಯಾಂಕ್​ ವಂಚನೆಯಂತಹ ಸೈಬರ್​ ಅಪರಾಧಗಳು ದೊಡ್ಡ ಮಟ್ಟದಲ್ಲಿ ನಡೆಯುತ್ತಿರುವಾಗ ಪುಣೆಯಲ್ಲಿ ಮಾನವೀಯತೆ ಮೇಳೈಸಿದೆ. ಅದೇನಪ್ಪಾ ಅಂದ್ರೆ, ಕಸದ ರಾಶಿಯಲ್ಲಿ ಸಿಕ್ಕ 10 ಲಕ್ಷ ರೂಪಾಯಿಗಳನ್ನು ನೈರ್ಮಲ್ಯ ಕಾರ್ಯಕರ್ತೆ, ಅದನ್ನು ಮಾಲೀಕರಿಗೆ ಮರಳಿ ನೀಡಿದ್ದಾರೆ.

ಇದು ನಿಜಕ್ಕೂ ನಂಬಲಸಾಧ್ಯ ಸಂಗತಿ. ಹಣ ಸಿಕ್ಕರೆ ಅದನ್ನು ಗಪ್​ ಚುಪ್ ಆಗಿ ಜೇಬಿಗೆ ಇಳಿಸುವ ಈ ಕಾಲದಲ್ಲಿ ನೈರ್ಮಲ್ಯ ಕಾರ್ಯಕರ್ತೆ ಅಂಜು ಮಾನೆ ಎಂಬವರು ದೊಡ್ಡತನ ಮೆರೆದಿದ್ದಾರೆ. ಹಣ ಕಳೆದುಕೊಂಡು ಪೇಚಾಡುತ್ತಿದ್ದ ವ್ಯಕ್ತಿಗೆ ಹಣದ ಚೀಲವನ್ನು ನೀಡುವ ಮೂಲಕ ಅಪಾರ ಗೌರವಕ್ಕೆ ಪಾತ್ರರಾಗಿದ್ದಾರೆ.

ಕಸದಲ್ಲಿ ಸಿಕ್ಕ ಕಂತೆಗಟ್ಟಲೆ ಹಣ:ಪುಣೆಯ ಸದಾಶಿವ ನಗರದಲ್ಲಿ ನೈರ್ಮಲ್ಯ ಕಾರ್ಯಕರ್ತೆಯಾಗಿ ಕೆಲಸ ಮಾಡುವ ಅಂಜು ಮಾನೆ ಅವರು ಎಂದಿನಂತೆ ಕಸ ಸಂಗ್ರಹಿಸುತ್ತಿದ್ದಾಗ, ಔಷಧಿಯ ಚೀಲವೊಂದು ರಸ್ತೆಯ ಬಳಿ ಬಿದ್ದಿದ್ದು ಕಂಡುಬಂದಿದೆ. ಅದನ್ನು ಕಸವೆಂದು ಅವರು, ಎತ್ತಿಕೊಂಡು ತಮ್ಮ ತಳ್ಳು ಗಾಡಿಯಲ್ಲಿ ಹಾಕಿಕೊಂಡಿದ್ದಾರೆ.

ಬಳಿಕ ಚೀಲವನ್ನು ತೆರೆದು ನೋಡಿದಾಗ, ಅದರಲ್ಲಿ ಔಷಧಿಗಳ ಜೊತೆಗೆ ದೊಡ್ಡ ಮೊತ್ತದ ನಗದು ಕಂಡುಬಂದಿದೆ. ಅಂಜು ಅವರು ಕಳೆದ 20 ವರ್ಷಗಳಿಂದ ಈ ಪ್ರದೇಶದಲ್ಲಿ ಕೆಲಸ ಮಾಡುತ್ತಿರುವುದರಿಂದ, ಆಕೆಗೆ ಇಲ್ಲಿನ ಜನರ ಪರಿಚಯವಿದೆ. ತನಗೆ ತಿಳಿದಿರುವ ಜನರ ಸಹಾಯದಿಂದ ಹಣ ಕಳೆದುಕೊಂಡವರನ್ನು ಪತ್ತೆ ಮಾಡುತ್ತಿದ್ದರು.

ಈ ಮಧ್ಯೆ, ವ್ಯಕ್ತಿಯೊಬ್ಬ ಹಣ ಹುಡುಕಿಕೊಂಡು ರಸ್ತೆಯಲ್ಲಿ ಓಡಾಡುತ್ತಿದ್ದನ್ನು ಅವರು ಕಂಡಿದ್ದಾರೆ. ಅವರ ಬಳಿಗೆ ತೆರಳಿ ವಿಚಾರಿಸಿದಾಗ, ತಾನು ಹಣದ ಕಂತೆಯನ್ನು ತಪ್ಪಾಗಿ ಬಿಸಾಡಿದ್ದಾಗಿ ತಿಳಿಸಿದ್ದಾರೆ. ತನಗೆ ಸಿಕ್ಕ ಹಣದ ಚೀಲ ಆತನದ್ದೇ ಎಂದು ದೃಢವಾದ ಬಳಿಕ 10 ಲಕ್ಷ ರೂಪಾಯಿವುಳ್ಳ ಆ ಚೀಲವನ್ನು ಆತನಿಗೆ ಹಿಂದಿರುಗಿಸಿದ್ದಾರೆ.

ಪ್ರಾಮಾಣಿಕತೆಗೆ ಬಹುಪರಾಕ್​:ನೈರ್ಮಲ್ಯ ಕಾರ್ಯಕರ್ತೆ ಅಂಜು ಮಾನೆ ಅವರ ಪ್ರಾಮಾಣಿಕತೆಯು ನಗರದಲ್ಲಿ ಮನೆ ಮಾತಾಗಿದೆ. ದೊಡ್ಡ ಮೊತ್ತವನ್ನು ದುರುಪಯೋಗಪಡಿಸಿಕೊಳ್ಳದೆ, ಅದನ್ನು ಕಳೆದುಕೊಂಡವರಿಗೆ ಹಿಂತಿರುಗಿಸಿ ಉದಾರತೆ ಮೆರೆದಿದ್ದಾರೆ. ಕಳೆದುಕೊಂಡ ಹಣ ಮರಳಿ ಪಡೆದ ವ್ಯಕ್ತಿ ಆಕೆಗೆ ಒಂದು ಸೀರೆ ಮತ್ತು ಸ್ವಲ್ಪ ಹಣವನ್ನು ಉಡುಗೊರೆಯಾಗಿ ನೀಡಿ ಸನ್ಮಾನಿಸಿದ್ದಾರೆ.

ಘಟನೆಯ ಬಗ್ಗೆ ಮಾತನಾಡಿರುವ ಅಂಜು ಮಾನೆ ಅವರು, ಈ ಪ್ರದೇಶದ ಜನರೊಂದಿಗೆ ನನಗೆ ಸಾಕಷ್ಟು ಪರಿಚಯವಿದೆ. ವಿಶೇಷ ವಸ್ತುಗಳು ಅಚಾನಕ್ಕಾಗಿ ಕಸದ ಜೊತೆಗೆ ಬಂದಾಗ, ಅದನ್ನು ನಾನು ಅವರಿಗೆ ತಿಳಿಸುತ್ತೇನೆ. ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂಬುದು ನನ್ನ ಧ್ಯೇಯ. ನವೆಂಬರ್ 20 ರಂದು ಬೆಳಗ್ಗೆ 7 ಗಂಟೆಗೆ, ಕಸ ಸಂಗ್ರಹಿಸುವಾಗ ರಸ್ತೆಯ ಬದಿ ಒಂದು ಚೀಲ ಸಿಕ್ಕಿತ್ತು. ಅದನ್ನು ಎತ್ತಿಕೊಂಡು ಫೀಡರ್ ಪಾಯಿಂಟ್​​ನಲ್ಲಿ ಇಟ್ಟುಕೊಂಡೆ. ಔಷಧಿಗಳ ಚೀಲವಾದ್ದರಿಂದ ತೆರೆದು ನೋಡಿದಾಗ ಹಣವಿತ್ತು. ಕಳೆದುಕೊಂಡವರ ಹುಡುಕಾಟ ನಡೆಸಿದಾಗ ವ್ಯಕ್ತಿಯೊಬ್ಬರು ಸಿಕ್ಕರು. ಹಣ ಅವರದ್ದೇ ಎಂದು ದೃಢವಾದ ಬಳಿಕ ಚೀಲವನ್ನು ಹಿಂತಿರುಗಿಸಿದ್ದೇನೆ ಎಂದು ಹೇಳಿದರು.


Spread the love

About Fast9 News

Check Also

ಡಿಸೆಂಬರ್ ಅಂತ್ಯದೊಳಗೆ ಬಾಕಿ ಉಳಿದ ಕಾಮಗಾರಿಗಳನ್ನು ಪೂರ್ಣಗೊಳಿಸಿ*

Spread the love*ಡಿಸೆಂಬರ್ ಅಂತ್ಯದೊಳಗೆ ಬಾಕಿ ಉಳಿದ ಕಾಮಗಾರಿಗಳನ್ನು ಪೂರ್ಣಗೊಳಿಸಿ* *ಗುರ್ಲಾಪೂರ ಪ್ರವಾಸಿ ಮಂದಿರದಲ್ಲಿ ಮೂಡಲಗಿ- ಗೋಕಾಕ ತಾಲ್ಲೂಕು ಮಟ್ಟದ …

Leave a Reply

Your email address will not be published. Required fields are marked *