*ಜಾನುವಾರಗಳು ಈ ದೇಶದ ಆಸ್ತಿ. ಅವುಗಳ ಸಂರಕ್ಷಣೆ ಪ್ರತಿಯೊಬ್ಬರ ಹೊಣೆ- ಶಾಸಕ ಬಾಲಚಂದ್ರ ಜಾರಕಿಹೊಳಿ*
*ರಾಜ್ಯವನ್ನು ಕಾಲು ಬಾಯಿ ರೋಗ ಮುಕ್ತವನ್ನಾಗಿಸಲು ಪಣ ತೊಡುವಂತೆ ರೈತರಿಗೆ ಬಾಲಚಂದ್ರ ಜಾರಕಿಹೊಳಿ ಕರೆ*
*ಮೂಡಲಗಿ:* ಜಾನುವಾರುಗಳಿಗೆ ಕಾಲು ಬಾಯಿ ರೋಗ ಲಸಿಕೆಯನ್ನು ಹಾಕಿಸುವ ಮೂಲಕ ರೋಗ ಬಾರದಂತೆ ಜಾನುವಾರುಗಳನ್ನು ರಕ್ಷಿಸಬೇಕು. ಈ ಮೂಲಕ ಕಾಲು ಬಾಯಿ ರೋಗ ಮುಕ್ತ ವಲಯವನ್ನಾಗಿ ಮಾಡುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ರೈತ ಬಾಂಧವರಲ್ಲಿ ಮನವಿ ಮಾಡಿಕೊಂಡರು.
ಪಟ್ಟಣದ ಪಶು ಆಸ್ಪತ್ರೆಯಲ್ಲಿ ಶನಿವಾರದಂದು ಜರುಗಿದ ಉಚಿತ ಕಾಲು ಬಾಯಿ ರೋಗ ಲಸಿಕಾ ಅಭಿಯಾನಕ್ಕೆ ಗೋ ಮಾತೆಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಕಳೆದ ದಿ.೨೬ ರಿಂದ ಪ್ರಾರಂಭಗೊಂಡಿರುವ ಈ ಲಸಿಕಾ ಅಭಿಯಾನವು ಅ.೨೫ರವರಗೆ ಅಭಿಯಾನ ನಡೆಯಲಿದೆ ಎಂದು ತಿಳಿಸಿದರು.
ರೈತರಿಗೆ ಆರ್ಥಿಕ ಸಂಕಷ್ಟಗಳನ್ನು ತಂದೊಡ್ಡುವ ಕಾಲು ಬಾಯಿ ರೋಗವನ್ನು ನಿಯಂತ್ರಿಸಿ ಅದನ್ನು ನಿರ್ಮೂಲನೆ ಮಾಡಲು ಪ್ರತಿ ಆರು ತಿಂಗಳಿಗೊಮ್ಮೆ ಈ ರೋಗದ ವಿರುದ್ದ ಲಸಿಕೆ ಹಾಕಿಸಿಬೇಕು. ಕಾಲು ಬಾಯಿ ರೋಗವು ವೈರಾಣುವಿನಿಂದ ಹರಡುವ ಸಾಂಕ್ರಾಮಿಕ ರೋಗವಾಗಿದ್ದು, ಜಾನುವಾರಗಳು ಈ ದೇಶದ ಆಸ್ತಿಯಾಗಿವೆ. ಅವುಗಳ ಸಂರಕ್ಷಣೆ ಪ್ರತಿಯೊಬ್ಬರ ಹೊಣೆಯಾಗಿದೆ ಎಂದ ಅವರು. ತುರ್ತು ಪಶು ಚಿಕಿತ್ಸೆಗಾಗಿ ರೈತರು ೧೯೬೨ ಈ ನಂಬರಿಗೆ ಸಂಪರ್ಕ ಮಾಡುವಂತೆ ಅವರು ರೈತ ಬಾಂಧವರಲ್ಲಿ ಕೋರಿದರು.
ಮೂಡಲಗಿಯಲ್ಲಿ ಈಗಾಗಲೇ ಪಶು ವೈದ್ಯಕೀಯ ಪಾಲಿಕ್ಲಿನಿಕ್ ಕಟ್ಟಡದ ಕಾಮಗಾರಿಯು ಪ್ರಗತಿಯಲ್ಲಿದೆ, ಇದಕ್ಕಾಗಿ ೫೦ ಲಕ್ಷ ರೂ ಗಳನ್ನು ಅನುದಾನ ಬಿಡುಗಡೆ ಮಾಡಲಾಗಿದೆ, ಆದರೆ ಇದಕ್ಕಾಗಿ ೨.೫೦ ಕೋಟಿ ರೂ ಗಳನ್ನು ಕಟ್ಟಡ ನಿರ್ಮಾಣಕ್ಕೆ ಬಿಡುಗಡೆ ಮಾಡುವಂತೆ ಅಧಿಕಾರಿಗಳು ಮನವಿ ಸಲ್ಲಿಸಿದ್ದಾರೆ, ಹೊರ ರೋಗಿ ವಿಭಾಗ, ಒಳ ರೋಗಿ ವಿಭಾಗ, ಶಸ್ತç ಚಿಕಿತ್ಸಾ ಕೊಠಡಿ, ಎಕ್ಷರೇ ಕೊಠಡಿ, ಸ್ಕ್ಯಾನಿಂಗ್ ಕೊಠಡಿ, ಪ್ರಯೋಗಾಲಯ, ಕಛೇರಿ ಒಳಗೊಂಡಂತೆ ಸುಮಾರು ೨.೫೦ ಕೋಟಿ ರೂಪಾಯಿ ಅನುದಾನದ ಅಗತ್ಯವಿದ್ದು, ಇದಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಅವರು ತಿಳಿಸಿದರು.
ಮೂಡಲಗಿ ಪಶು ಆಸ್ಪತ್ರೆಗೆ ಕಾರ್ಯನಿರ್ವಹಿಸಲು ಹಾಗೂ ಇಲಾಖಾ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೋಳಿಸಲು ವಾಹನ ಸೌಲಭ್ಯ ನೀಡಲು ಪ್ರಯತ್ನಿಸುವದಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ಭರವಸೆ ನೀಡಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಇದೇ ಸಂದರ್ಭದಲ್ಲಿ ಪಶು ಇಲಾಖೆಯ ಸಖಿಯರಿಗೆ ಪ್ರಥಮ ಚಿಕಿತ್ಸಾ ಕೀಟ್, ಮೀಷನ್ ರೇಬಿಸ್ ಲಸಿಕೆ, ಉಚಿತ ರೇಬಿಸ್ ನಿರೋಧಕ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ೧ ಲಕ್ಷ ಲಸಿಕಾ ವಾಕ್ ಇನ್ ಕೂಲರ್ ಕೊಠಡಿಯನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಪಶು ವೈದ್ಯಕೀಯ ಪಾಲಿಕ್ಲಿನಿಕ್ ಉಪ ನಿರ್ದೇಶಕ ಡಾ. ಎಮ್.ಬಿ.ವಿಭೂತಿ, ಮುಖಂಡರಾದ ರವಿ ಸಣ್ಣಕ್ಕಿ, ಜಯಾನಂದ ಪಾಟೀಲ, ಹನಮಂತ ಗುಡ್ಲಮನಿ, ಸುಭಾಸ ಸಣ್ಣಕ್ಕಿ, ಮಹಾದೇವ ಶೆಕ್ಕಿ, ರವಿ ನೇಸೂರ, ಗಿರೀಶ ಢವಳೇಶ್ವರ, ಪಶು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಮೋಹನ ಕಮತ, ಸಿಪಿಐ ಶ್ರೀಶೈಲ್ ಬ್ಯಾಕೂಡ, ಪುರಸಭೆ ಸದಸ್ಯರು, ಗಣ್ಯರು ಸೇರಿದಂತೆ ಪಶು ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು