*ಸಾರ್ವಜನಿಕರ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಒತ್ತು : ಶಾಸಕ ಬಾಲಚಂದ್ರ ಜಾರಕಿಹೊಳಿ*
*ಶಿವಾಪೂರ(ಹ) ಗ್ರಾಮದಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದ ಅರಭಾವಿ ಶಾಸಕ*
*ಮೂಡಲಗಿ* : ನಮ್ಮ ಸರ್ಕಾರವು ಆಡಳಿತದಲ್ಲಿದ್ದಾಗ ಅಭಿವೃದ್ಧಿ ಕಾರ್ಯಗಳಿಗೆ ಸಾಕಷ್ಟು ಅನುದಾನವನ್ನು ಬಿಡುಗಡೆ ಮಾಡಿದ್ದೇವು. ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದ್ದೇವು. ಆದರೀಗ ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರವಿರುವುದರಿಂದ ಅಭಿವೃದ್ಧಿ ಕಾರ್ಯಗಳಿಗೆ ಅನುದಾನವನ್ನು ಬಿಡುಗಡೆ ಮಾಡುತ್ತಿಲ್ಲವೆಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಸಮಧಾನ ವ್ಯಕ್ತಪಡಿಸಿದರು.
ತಾಲೂಕಿನ ಶಿವಾಪೂರ(ಹ) ಗ್ರಾಮದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳಿಗೆ ಸರ್ಕಾರದ ಅನುದಾನ ಹೋಗುತ್ತಿರುವುದರಿಂದ ನಮ್ಮ ಅಭಿವೃದ್ಧಿ ಕಾರ್ಯಗಳು ವಿಳಂಬವಾಗುತ್ತಿವೆ ಎಂದು ಹೇಳಿದರು.
ಈ ಭಾಗದ ರೈತರಿಗೆ ಅನುಕೂಲವಾಗಲು ಹಿಡಕಲ್ ಜಲಾಶಯದಿಂದ ನೀರನ್ನು ಹರಿಸಲಾಗುತ್ತಿದೆ. ಈಗಾಗಲೇ ಮಳೆಯು ನಿರೀಕ್ಷಿತ ಪ್ರಮಾಣದಲ್ಲಿ ಆಗದೇ ಇರುವುದರಿಂದ ಮೂಡಲಗಿ ತಾಲೂಕನ್ನು ಬರಪೀಡಿತ ತಾಲೂಕನ್ನಾಗಿ ಸರ್ಕಾರ ಘೋಷಿಸಿದೆ. ಜನ ಹಾಗೂ ಜಾನುವಾರುಗಳಿಗೆ ಪ್ರಸಕ್ತ ಸನ್ನಿವೇಶದಲ್ಲಿ ಕುಡಿಯುವ ನೀರಿಗೆ ತೊಂದರೆ ಇಲ್ಲದಿದ್ದರೂ ಮುಂದಿನ ದಿನಗಳಲ್ಲಿ ಮಳೆರಾಯನ ಆಗಮನ ಅವಶ್ಯವಾಗಿದೆ. ಮಾರ್ಚ-ಎಪ್ರೀಲ್ ತಿಂಗಳವರೆಗೆ ಜಲಾಶಯದ ನೀರು ರೈತರಿಗೆ ಸ್ಪಲ್ಪ ಪ್ರಮಾಣದಲ್ಲಿ ಅನುಕೂಲವಾಗಲಿದೆ. ಆದಾಗ್ಯೂ ವರುಣನ ಆಶೀರ್ವಾದಕ್ಕಾಗಿ ನಾವೆಲ್ಲರೂ ಪ್ರಾರ್ಥನೆ ಮಾಡಿಕೊಳ್ಳೋಣ ಎಂದು ತಿಳಿಸಿದರು.
ಸಾರ್ವಜನಿಕರ ಮೂಲ ಸೌಕರ್ಯಗಳಿಗೆ ಹೆಚ್ಚಿನ ಆಧ್ಯತೆ ನೀಡಲಾಗುತ್ತಿದೆ. ರಸ್ತೆಗಳ ನಿರ್ಮಾಣ, ಆಸ್ಪತ್ರೆ, ಕುಡಿಯುವ ನೀರು, ವಿದ್ಯುತ್ ಮುಂತಾದ ಮೂಲಭೂತ ಸೌಕರ್ಯಗಳನ್ನು ನೀಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಹೊಸ ಕಾಮಗಾರಿಗಳಿಗೆ ಸರ್ಕಾರವು ಅನುಮೋದನೆ ನೀಡುತ್ತಿಲ್ಲವಾದ್ದರಿಂದ ಕಳೆದ ಚುನಾವಣೆಯಲ್ಲಿ ಜನತೆಗೆ ನೀಡಿರುವ ಎಲ್ಲ ಆಶ್ವಾಸನೆಗಳನ್ನು ಹಂತ-ಹಂತವಾಗಿ ಈಡೇರಿಸಲು ಬದ್ಧನಿದ್ದೇನೆ ಎಂದು ಅವರು ಹೇಳಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಇದೇ ಸಂದರ್ಭದಲ್ಲಿ ಹಳ್ಳೂರ ಜಿಪಂ ವ್ಯಾಪ್ತಿಯ ಸಾರ್ವಜನಿಕರನ್ನು ಭೇಟಿ ಮಾಡಿ ಅವರ ಕುಂದು-ಕೊರತೆಗಳನ್ನು ವಿಚಾರಿಸಿದರು. ಹಾಗೂ ನಾಗರೀಕರ ಸನ್ಮಾನವನ್ನು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಮಲ್ಲನಗೌಡ ಪಾಟೀಲ, ಶಂಕರಗೌಡ ದುಂ. ಪಾಟೀಲ, ಘಟಪ್ರಭಾ ಜೆಜಿಕೋ ನಿರ್ದೇಶಕ ಶಿವನಗೌಡ ಪಾಟೀಲ, ಪ್ರಭಾಶುಗರ ನಿರ್ದೇಶಕರಾದ ಕೆಂಚನಗೌಡ ಪಾಟೀಲ, ಮಲ್ಲಿಕಾರ್ಜುನ ಕಬ್ಬೂರ, ಶಿವಾಪೂರ(ಹ) ಗ್ರಾಪಂ ಅಧ್ಯಕ್ಷೆ ಯಮನವ್ವ ಗಿಡ್ಡವ್ವಗೋಳ, ಉಪಾಧ್ಯಕ್ಷ ಮಲ್ಲಪ್ಪ ಜುಂಜರವಾಡ, ಜಿಪಂ ಮಾಜಿ ಸದಸ್ಯ ಭೀಮಶಿ ಮಗದುಮ್ಮ, ಶಿವಬಸು ಜುಂಜರವಾಡ, ಕೆಂಪಣ್ಣಾ ಮುಧೋಳ, ಟಿಎಪಿಸಿಎಂಎಸ್ ನಿರ್ದೇಶಕ ವೆಂಕನಗೌಡ ಪಾಟೀಲ, ಗ್ರಾಪಂ ಮಾಜಿ ಅಧ್ಯಕ್ಷ ಬಸವರಾಜ ಸಾಯನ್ನವರ, ಸುರೇಶ ಕತ್ತಿ, ಲಕ್ಷ್ಮಣ ಕತ್ತಿ, ಬಿ.ಎಸ್. ಸಂತಿ, ಬಿ.ಜಿ. ಸಂತಿ, ಅಡಿವೆಪ್ಪ ಪಾಲಭಾವಿ, ಚೇತನ ರಡ್ಡೇರಟ್ಟಿ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.