*ಅವಿರೋಧ ಆಯ್ಕೆಗೆ ಪ್ರಾಮಾಣಿಕ ಪ್ರಯತ್ನ*
——————————
*ಬ್ಯಾಂಕಿನ ಅಭಿವೃದ್ಧಿ ಜತೆಗೆ ರೈತರ ಏಳ್ಗೆಯೇ ನಮಗೆ ಮುಖ್ಯ. ಯಾವುದೇ ಸ್ವಾರ್ಥವಿಲ್ಲ- ಶಾಸಕ ಬಾಲಚಂದ್ರ ಜಾರಕಿಹೊಳಿ*
*ಬೈಲಹೊಂಗಲ ಪ್ರಚಾರ ಕಾರ್ಯದಲ್ಲಿ ಭಾಗಿಯಾದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಪುತ್ರ ಚಿದಾನಂದ ಸವದಿ*
*ಬೈಲಹೊಂಗಲ್*: ಅಕ್ಟೋಬರ್ ೧೯ ರಂದು ನಡೆಯುವ ಬಿಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲ ನಾಯಕರ ಸಹಕಾರದೊಂದಿಗೆ ಅವಿರೋಧವಾಗಿ ಆಯ್ಕೆ ಮಾಡುವ ಉದ್ದೇಶ ಇದೇಯಾದರೂ ಕೆಲವು ಕಡೆಗಳಲ್ಲಿ ಒಮ್ಮತದ ಆಯ್ಕೆ ಮೂಡುತ್ತಿಲ್ಲ. ಆದರೂ ಅವಿರೋಧ ಆಯ್ಕೆಗೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಶಾಸಕ ಮತ್ತು ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ತಾಲ್ಲೂಕಿನ
ಚಿಕ್ಕ ಬಾಗೇವಾಡಿ ಹತ್ತಿರ
ಗತ್ತಿ ಕರೆನಕೊಪ್ಪ ಕ್ರಾಸ್ ನ ಬಿ.ಎಸ್.ಯಡಿಯೂರಪ್ಪ ಕಲ್ಯಾಣ ಮಂಟಪದಲ್ಲಿ ಬುಧವಾರದಂದು ಜರುಗಿದ ಬೈಲಹೊಂಗಲ ಮತ್ತು ಚೆನ್ನಮ್ಮನ ಕಿತ್ತೂರು ತಾಲ್ಲೂಕಿನ ಪಿಕೆಪಿಎಸ್ ಅಧ್ಯಕ್ಷರು ಮತ್ತು ಆಡಳಿತ ಮಂಡಳಿಯ ಸದಸ್ಯರ ಸೌಹಾರ್ದಯುತ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ನಮಗೂ ಅವಿರೋಧ ಆಯ್ಕೆ ಮಾಡುವ ಆಶಯ ಇದೆಯಾದರೂ ಕೆಲವು ಕ್ಷೇತ್ರಗಳಲ್ಲಿ ಒಂದು ಸ್ಥಾನಕ್ಕೆ ೨ ರಿಂದ ೩ ಅಭ್ಯರ್ಥಿಗಳು ಸ್ಪರ್ಧೆ ಮಾಡುವ ಇಂಗಿತ ವ್ಯಕ್ತಪಡಿಸುತ್ತಿದ್ದಾರೆ. ಹಿರಿಯರೊಂದಿಗೆ ಚರ್ಚಿಸಿ ಈ ಬಗ್ಗೆ ಕ್ರಮ ಕೈಗೊಳ್ಳುವ ಇಂಗಿತವನ್ನು ಬಾಲಚಂದ್ರ ಜಾರಕಿಹೊಳಿ ಅವರು ವ್ಯಕ್ತಪಡಿಸಿದರು.
ಬಿಡಿಸಿಸಿ ಬ್ಯಾಂಕ್ ನ್ನು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬೆಳೆಸಬೇಕಾಗಿದೆ. ಈ ಬ್ಯಾಂಕಿಗೆ ನೂರು ವರ್ಷಗಳ ಇತಿಹಾಸವಿದೆ. ಆದರೂ ಸಾಧಿಸಬೇಕಾದುದ್ದು ಬಹಳಷ್ಟಿದೆ. ಆದ್ದರಿಂದ ಜಿಲ್ಲೆಯ ಎಲ್ಲ ಮುಖಂಡರು ಪಕ್ಷಾತೀತವಾಗಿ ಚುನಾವಣೆಯನ್ನು ಎದುರಿಸುತ್ತಿದ್ದೇವೆ. ಈ ಚುನಾವಣೆಯಲ್ಲಿ ಪಕ್ಷಗಳು ನಗಣ್ಯವಾಗಿದೆ. ಹೀಗಾಗಿ ಎಲ್ಲರೂ ಒಟ್ಟಾಗಿ ಕೂಡಿಕೊಂಡು ಪ್ರಚಾರ ಕಾರ್ಯ ಕೈಕೊಂಡಿದ್ದೇವೆ. ಸಚಿವ ಸತೀಶ್ ಜಾರಕಿಹೊಳಿ, ಮಾಜಿ ಸಂಸದ ಡಾ. ಪ್ರಭಾಕರ ಕೋರೆ, ಶಾಸಕರಾದ ರಮೇಶ್ ಜಾರಕಿಹೊಳಿ, ಲಕ್ಷ್ಮಣ ಸವದಿ, ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆಯವರ ಮುಖಂಡತ್ವದಲ್ಲಿ ಚುನಾವಣಾ ಪ್ರಚಾರವು ಅರ್ಭಟವಾಗಿ ಮುಂದುವರೆದಿದೆ. ಎಲ್ಲ ಕ್ಷೇತ್ರಗಳಲ್ಲೂ ನಮ್ಮ ಗುಂಪಿಗೆ ಅಪಾರ ಬೆಂಬಲ ವ್ಯಕ್ತವಾಗುತ್ತಿದೆ. ಹೀಗಾಗಿ ನಮ್ಮ ಅಭ್ಯರ್ಥಿಗಳು ಗೆಲುವು ಸಾಧಿಸಿ ಮತ್ತೇ ಬ್ಯಾಂಕಿನ ಅಧಿಕಾರ ಚುಕ್ಕಾಣಿ ಹಿಡಿಯಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಮಗೆ ರೈತರ ಕಾಳಜಿಯೇ ಮುಖ್ಯವಾಗಿದೆ. ರೈತರಿಗೆ ಸಾಲ ಸೌಲಭ್ಯ ನೀಡಲು ನಾವೆಲ್ಲರೂ ಬದ್ಧರಿದ್ದೇವೆ. ರೈತರ ವಿಷಯದಲ್ಲಿ ಎಂದಿಗೂ ರಾಜಕೀಯ ಮಾಡುವದಿಲ್ಲ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಎಂಇಎಸ್ ಸೇರಿದಂತೆ ಎಲ್ಲ ಪಕ್ಷದವರನ್ನು ಸೇರಿಸಿಕೊಂಡು ಚುನಾವಣಾ ಅಖಾಡಕ್ಕೆ ಇಳಿದಿದ್ದೇವೆ. ರೈತರಿಗೆ ಅನುಕೂಲ ಮಾಡಿಕೊಡಬೇಕು. ಹೆಚ್ಚಿನ ಪ್ರಮಾಣದಲ್ಲಿ ಸೌಲಭ್ಯಗಳು ದೊರಕಬೇಕು. ರೈತರು ಆರ್ಥಿಕವಾಗಿ ಬಲಾಢ್ಯರಾಗಬೇಕು ಎಂಬ ಸದುದ್ದೇಶ ಇದೇ ಹೊರತು ಯಾವುದೇ ವೈಯಕ್ತಿಕ ಸ್ವಾರ್ಥ ಇಲ್ಲವೆಂದು ಅವರು ಸ್ಪಷ್ಟವಾಗಿ ಹೇಳಿದರು.
ಬೈಲಹೊಂಗಲ ಕ್ಷೇತ್ರದ ಅಭ್ಯರ್ಥಿಯಾಗಲಿರುವ ಮಹಾಂತೇಶ ದೊಡ್ಡಗೌಡರ ಅವರು ರೈತರೊಂದಿಗೆ ಅವಿನಾಭಾವ ಸಂಬಂಧವನ್ನು ಇಟ್ಟುಕೊಂಡಿದ್ದಾರೆ. ವಿರೋಧಿಗಳಿಗೂ ಸಹಾಯ ಮಾಡುವ ಗುಣ ಅವರಿಗಿದೆ. ಇನ್ನು ಚೆನ್ನಮ್ಮನ ಕಿತ್ತೂರ ಕ್ಷೇತ್ರದ ಭಾವಿ ಅಭ್ಯರ್ಥಿ ವಿಕ್ರಮ ಇನಾಂದಾರ ಅವರು ಈ ಚುನಾವಣೆಗೆ ಹೊಸಬರು. ಇವರಿಗೂ ರಾಜಕೀಯ ಹಿನ್ನೆಲೆ ಇದೆ. ಕಿತ್ತೂರಿನ ಧಣಿಯಾಗಿದ್ದ ಮಾಜಿ ಸಚಿವ ದಿ. ಡಿ.ಬಿ.ಇನಾಂದಾರ ಅವರ ಪುತ್ರರಾಗಿರುವ ವಿಕ್ರಂ ಇನಾಂದಾರ ಅವರನ್ನು ಬೆಂಬಲಿಸಿ ಆಶೀರ್ವಾದ ಮಾಡುವಂತೆ ಅವರು ಕೋರಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಮಹಾಂತೇಶ ದೊಡ್ಡಗೌಡರ, ಅರವಿಂದ ಪಾಟೀಲ, ಜಗದೀಶ ಮೆಟಗುಡ್ಡ, ಮಾಜಿ ಸಂಸತ್ ಸದಸ್ಯ ಅಣ್ಣಾಸಾಹೇಬ್ ಜೊಲ್ಲೆ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಪ್ಪಾ ಸಾಹೇಬ್ ಕುಲಗೋಡೆ, ಯುವ ಮುಖಂಡ ಚಿದಾನಂದ ಸವದಿ, ವಿಕ್ರಂ ಇನಾಂದಾರ (ಧಣಿ),
ಬ್ಯಾಂಕ್ ನಿರ್ದೇಶಕರಾದ ರಾಜೇಂದ್ರ ಅಂಕಲಗಿ, ಶ್ರೀಕಾಂತ ಢವಣ, ಶಂಕರ ಮಾಡಲಗಿ, ವೀರುಪಾಕ್ಷ ಮಾಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
*ಬಾಕ್ಸ್*
*ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲಿ ಬ್ಯಾಂಕಿನ ಚುನಾವಣಾ ಪ್ರಚಾರವನ್ನು ಕೈಕೊಂಡಿದ್ದೇವೆ.ರೈತರಿಗೆ ಜಿಲ್ಲೆಯ ಎಲ್ಲ ಪಕ್ಷಗಳ ಹಿರಿಯರ ನೇತೃತ್ವದಲ್ಲಿ ನಾವು ಗುಂಪನ್ನು ರಚಿಸಿಕೊಂಡು ಎಲ್ಲ ಕಡೆಗಳಿಗೆ ಹೋಗುತ್ತಿದ್ದೇವೆ. ಹಿರಿಯರಾದ ಲಕ್ಷ್ಮಣ ಸವದಿ ಅವರು ದೆಹಲಿ ಪ್ರವಾಸದಲ್ಲಿರುವದರಿಂದ ಅವರ ಪುತ್ರ ಚಿದಾನಂದ ಸವದಿ ಅವರು ಇಂದಿನ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ನಾಳಿನ ಸಭೆಯಲ್ಲೂ ಭಾಗವಹಿಸುತ್ತಾರೆ. ಎಲ್ಲ ೧೬ ಸ್ಥಾನಗಳಲ್ಲೂ ಜಯಭೇರಿ ಬಾರಿಸುವ ಸಂಕಲ್ಪವನ್ನು ನಾವು ಇಟ್ಟುಕೊಂಡಿದ್ದೇವೆ. ದೇವರು ಮತ್ತು ರೈತರ
ಆಶೀರ್ವಾದದಿಂದ ನಮ್ಮ ಫೆನಲ್ ಪ್ರಚಂಡ ಬಹುಮತದಿಂದ ಆಯ್ಕೆಯಾಗಿ ಬಿಡಿಸಿಸಿ ಬ್ಯಾಂಕಿನ ಆಡಳಿತ ಚುಕ್ಕಾಣಿ ಹಿಡಿಯಲಿದೆ*.
*ಬಾಲಚಂದ್ರ ಜಾರಕಿಹೊಳಿ*
*ಶಾಸಕ ಮತ್ತು ಬೆಮ್ಯುಲ್ ಅಧ್ಯಕ್ಷ*