ತಮಗೆ ಬೇಕಾದಾಗ ನಮ್ಮನ್ನು ಬಳಸಿಕೊಂಡು ಈಗ ಬೇಡವಾದಾಗ ಜಾತಿಯ ಅಸ್ತ್ರವನ್ನು ಬಳಸುತ್ತಿದ್ದಾರೆ : ಬೆಮೂಲ ಅದ್ಯಕ್ಷ ಬಾಲಚಂದ್ರ ಜಾರಕಿಹೋಳಿ
*ನಿಡಸೋಸಿಯಲ್ಲಿ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಂಘದ ಪ್ರಚಾರಾರ್ಥ ಸಭೆ*
——————————
*ವಿದ್ಯುತ್ ಸಂಘದ ಚುನಾವಣೆಯಲ್ಲಿ ದಿ.ಅಪ್ಪಣ್ಣಗೌಡ ಪಾಟೀಲರ ಪೆನೆಲ್ ನ್ನು ಆಶೀರ್ವದಿಸಿದರೆ ಉತ್ಕೃಷ್ಟ ದರ್ಜೆಯ ಸೇವೆ- ಮಾಜಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ*
*ಜೊಲ್ಲೆಗೆ ಸಾಥ್ ನೀಡಿದ ಬೆಮುಲ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ*
*ಸಂಕೇಶ್ವರ* – ದಿ. ಅಪ್ಪಣ್ಣಗೌಡ ಪಾಟೀಲರ ಪೆನೆಲ್ ಬೆಂಬಲಿಸಿ ಆಶೀರ್ವಾದ ಮಾಡಿದರೆ ಮುಂದಿನ ದಿನಗಳಲ್ಲಿ ವಿದ್ಯುತ್ ಸಹಕಾರಿ ಸಂಘವು ಅಭಿವೃದ್ಧಿ ಪಥದತ್ತ ಸಾಗುವುದಲ್ಲದೇ ಗ್ರಾಹಕರಿಗೆ ಉತ್ತಮ ದರ್ಜೆಯ
ಸೇವೆಯನ್ನು ನೀಡಲಿಕ್ಕೆ ನಾವೆಲ್ಲರೂ ಬದ್ಧತೆಯಿಂದ ಕಾರ್ಯವನ್ನು ಮಾಡುತ್ತೇವೆ ಎಂದು ಚಿಕ್ಕೋಡಿ ಮಾಜಿ ಸಂಸದ ಅಣ್ಣಾಸಾಹೇಬ್ ಜೊಲ್ಲೆಯವರು ಭರವಸೆಯನ್ನು ನೀಡಿದರು.
ಇಲ್ಲಿಗೆ ಸಮೀಪದ ನಿಡಸೋಸಿ ಗ್ರಾಮದಲ್ಲಿ ಸೋಮವಾರ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣೆ ನಿಮಿತ್ತವಾಗಿ ನಡೆದ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಸಮರ್ಪಕ ವಿದ್ಯುತ್ ಜತೆಗೆ ಅಗತ್ಯವಾದ ವಿದ್ಯುತ್ ಪರಿವರ್ತಕಗಳನ್ನು ವಿತರಿಸಿ ಗ್ರಾಹಕರಿಗೆ ಅನುಕೂಲ ಮಾಡಿಕೊಡುವುದಾಗಿ ಅವರು ಹೇಳಿದರು.
ಸೆ.28 ರಂದು ನಡೆಯುವ ವಿದ್ಯುತ್ ಸಂಘದ
ಚುನಾವಣೆಗೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮತ್ತು ತಮ್ಮ ನೇತೃತ್ವದಲ್ಲಿ ಪೆನೆಲ್ ರಚಿಸಿದ್ದು, ಮತಗಳನ್ನು ನೀಡುವ ಮೂಲಕ ಅಧಿಕಾರಕ್ಕೆ ತರುವಂತೆ ಮನವಿ ಮಾಡಿದ ಅವರು, 30 ವರ್ಷಗಳಿಂದ ಒಂದೇ ಒಂದು ಬಾರಿ ಮತವನ್ನು ಚಲಾಯಿಸದ ರೈತರಿಗೆ ಈ ಸಲ ಮತವನ್ನು ಹಾಕಿ ಆರಿಸಿ ಕಳಿಸುವ ಭಾಗ್ಯ ಬಂದಿದೆ. ಈಗ ಬಂದಿರುವ ಮತದಾನದ ಅವಕಾಶವನ್ನು ತಪ್ಪಿಸಿಕೊಳ್ಳದೇ ನಮ್ಮ ಪೆನೆಲ್ ನ್ನು ಬೆಂಬಲಿಸಿದರೆ ತಮ್ಮಗಳ ಸೇವೆಗೆ ಸದಾ ಸಿದ್ದರಿರುವುದಾಗಿ ಅವರು ತಿಳಿಸಿದರು.
ವಿದ್ಯುತ್ ಪರಿವರ್ತಕಗಳನ್ನು ಪಡೆಯಲು ತಿಂಗಳುಗಟ್ಟಲೆ ಬಾಗೇವಾಡಿಗೆ ಅಲೆಯಬೇಕಾಗಿತ್ತು. ಅವರಿವರ ಕೈಕಾಲುಗಳನ್ನು ಹಿಡಿದು ಕೆಲಸವನ್ನು ಮಾಡಿಸಿಕೊಳ್ಳುವ ದೌರ್ಭಾಗ್ಯ ನಿಮ್ಮದಾಗಿತ್ತು. ಮೂವತ್ತು ವರ್ಷಗಳಿಂದ ಒಂದು ಕುಟುಂಬಕ್ಕೆ ಅಧಿಕಾರ ನೀಡಿರುವ ನೀವುಗಳು ಒಂದು ಸಲ ನಮಗೆ ಅಧಿಕಾರವನ್ನು ಕೊಟ್ಟು ನೋಡಿ. ನಿಮ್ಮ ಸಮಸ್ಯೆಗಳಿಗೆ 24 ತಾಸಿನೊಳಗೆ ಪರಿಹಾರ ಕಂಡುಕೊಳ್ಳುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುವುದಾಗಿ ಅವರು ಹೇಳಿದರು.
ಸತೀಶ್ ಜಾರಕಿಹೊಳಿಯವರು ಈ ಭಾಗದ ವಿದ್ಯುತ್ ಸಮಸ್ಯೆಗಳ ನಿವಾರಣೆಗಾಗಿ ಎಲೆಮುನೋಳಿ ಗ್ರಾಮದಲ್ಲಿ 3 ಕೋಟಿ ರೂಪಾಯಿ ವೆಚ್ಚದಲ್ಲಿ ಪೈಲಟ್ ಯೋಜನೆಯು ಎತ್ತಲಿದೆ. ಇದರಿಂದ ಅನೇಕ ಕುಟುಂಬಗಳಿಗೆ ಪ್ರಯೋಜನವಾಗಲಿದೆ. ಈಗಾಗಲೇ 3 ತಿಂಗಳೊಳಗೆ ಸುಮಾರು ನೂರು ಟಿಸಿಗಳನ್ನು ವಿತರಿಸಿದ್ದೇವೆ. ನಿರಂತರ ಜ್ಯೋತಿ ಸಂಪರ್ಕವನ್ನು ಕಲ್ಪಿಸಿಕೊಡುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದೇವೆ ಎಂದು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರ ಪ್ರಯತ್ನದಿಂದಾಗಿ ಅಪ್ಪಣ್ಣಗೌಡ ಪಾಟೀಲರ ಕನಸಿನ ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆ ಮತ್ತು ವಿದ್ಯುತ್ ಸಹಕಾರಿ ಸಂಘಗಳು ಪುನಶ್ಚೇತನಗೊಳ್ಳುತ್ತಿವೆ. ಕಾರ್ಖಾನೆ ಮತ್ತು ವಿದ್ಯುತ್ ಸಂಘಕ್ಕೆ ಅಗತ್ಯವಿರುವ ಎಲ್ಲ ನೆರವನ್ನು ಜಾರಕಿಹೊಳಿ ಸಹೋದರರು ನೀಡುತ್ತಿದ್ದಾರೆ. ನಿಮ್ಮ ಮನೆಯ ಬಾಗಿಲಿಗೆ ಬಂದು ನಿಮ್ಮ ಸಮಸ್ಯೆಗಳಿಗೆ ಪರಿಹಾರಗಳನ್ನು ಮಾಡುತ್ತೇವೆ. ನಮಗೆ ಅಧಿಕಾರ ನೀಡಿದರೆ ನಿಮಗೆ ಒಳ್ಳೆಯದು ಆಗುತ್ತದೆ. ಇದರಿಂದ ನಮಗೇನೂ ನಷ್ಟವಿಲ್ಲ ಎಂದು ಅವರು ತಿಳಿಸಿದರು.
ಹಿರಣ್ಯಕೇಶಿ ಸಕ್ಕರೆ
ಕಾರ್ಖಾನೆಯನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ಕಬ್ಬು ಪೂರೈಕೆ ಮಾಡುವ ರೈತರಿಗೆ ಕೇವಲ 15 ದಿನಗೊಳಗಾಗಿ ಬಿಲ್ ಸಂದಾಯ ಮಾಡುತ್ತೇವೆ. ಶೇಅರುದಾರರಿಗೆ ಐವತ್ತು ಕಿಲೋ ಸಕ್ಕರೆಯನ್ನು ಹಂಚಲಾಗುತ್ತಿದೆ. ದಿನಕ್ಕೆ 1.5 ಲಕ್ಷ ಲೀಟರ್ ಇಥೆನಾಲ್ ಉತ್ಪಾದನೆ, 36 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿಯನ್ನು ಹೊಂದಲಾಗಿದೆ. ಕೇವಲ ಒಂದು ವರ್ಷದೊಳಗೆ ಸಕ್ಕರೆ ಕಾರ್ಖಾನೆಯ ಇಡೀ ಚಿತ್ರಣವನ್ನೇ ಬದಲಾಯಿಸುತ್ತೇವೆ. ಅಪ್ಪಣ್ಣಗೌಡ ಪಾಟೀಲರ ಕಾಲದಲ್ಲಿನ ಗತವೈಭವವನ್ನು ಮರಳಿ ತರುವ ಕೆಲಸವನ್ನು ನಮ್ಮ ಪೆನೆಲ್ ದವರು ಮಾಡುತ್ತೇವೆ ಎಂದು ಜೊಲ್ಲೆಯವರು ಹೇಳಿದರು.
ಅರಭಾವಿ ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಮಾತನಾಡಿ, ನಮ್ಮನ್ನು ಲಿಂಗಾಯತ ವಿರೋಧಿ ಎಂಬಂತೆ ಕೆಲ ವಿರೋಧಿಗಳು ಬಿಂಬಿಸುತ್ತಿದ್ದಾರೆ. ಇದರಿಂದ ಜನರಿಗೆ ತಪ್ಪು ಸಂದೇಶ ಹೋಗುತ್ತಿದ್ದರಿಂದ
ಮನಸ್ಸಿಗೆ ನೋವಾಗುತ್ತಿದೆ. ನಮ್ಮ ರಾಜಕೀಯ ಇತಿಹಾಸದಲ್ಲಿ ನಾವು ಯಾವ ಸಮುದಾಯಕ್ಕೂ ಅನ್ಯಾಯ ಮಾಡಿಲ್ಲ. ಆದರೆ, ಈ ಚುನಾವಣೆಯಲ್ಲಿ ತಮ್ಮ ತಪ್ಪನ್ನು ಮರೆಯಾಚಿಸಲು ಜಾತಿ ವಿಷಯದ ಕುರಿತು ಮಾತನಾಡುತ್ತ ವಿರೋಧಿಗಳು ಅಪಪ್ರಚಾರ ಮಾಡುತ್ತಿದ್ದಾರೆ. ಯಾರು ಲಿಂಗಾಯತ ವಿರೋಧಿ ಎಂಬುದನ್ನು ಸಾಬೀತು ಪಡಿಸಲು ಒಂದೇ ವೇದಿಕೆಯಲ್ಲಿ ಚರ್ಚೆಗೆ ಬರುವಂತೆ ವಿರೋಧಿಗಳಿಗೆ ಪಂಥಾಹ್ವಾನ ನೀಡಿದರು.
ದೇವರು ಮತ್ತು ಮತದಾರರ ಆಶೀರ್ವಾದದಿಂದ ಬಿಡಿಸಿಸಿ ಬ್ಯಾಂಕಿನ ಅಧಿಕಾರ ಚುಕ್ಕಾಣಿಯನ್ನು ನಾವೇ ಹಿಡಿಯುತ್ತೇವೆ. ಇದರಲ್ಲಿ ಯಾವ ಸಂಶಯವೂ ಇಲ್ಲ. ಕನಿಷ್ಠ 12 ಸ್ಥಾನಗಳನ್ನು ಗಳಿಸಿ ಅಧಿಕಾರವನ್ನು ಪೂರ್ಣಪ್ರಮಾಣದಲ್ಲಿ
ನಡೆಸುತ್ತೇವೆ. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳನ್ನು ಲಿಂಗಾಯತ ಸಮಾಜಕ್ಕೆ ನೀಡುತ್ತೇವೆ. ತಮಗೆ ಬೇಕಾದಾಗ ನಮ್ಮನ್ನು ಬಳಸಿಕೊಂಡು ಈಗ ಬೇಡವಾದಾಗ ಜಾತಿಯ ಅಸ್ತ್ರವನ್ನು ಬಳಸುತ್ತಿದ್ದಾರೆ. ಹಾಗಾದರೇ ಯಾರು ಲಿಂಗಾಯತ ವಿರೋಧಿಗಳು ಎಂಬುದನ್ನು ನೀವೇ ನಿರ್ಧರಿಸುವ ಕಾಲ ಬಂದಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಮಾಜಿ ಸಚಿವ ಶಶಿಕಾಂತ ನಾಯಿಕ,
ಸಂಗಮ ಕಾರ್ಖಾನೆ ಅಧ್ಯಕ್ಷ ರಾಜೇಂದ್ರ ಪಾಟೀಲ, ಹೀರಾ ಶುಗರ್ ಅಧ್ಯಕ್ಷ ಬಸವರಾಜ ಕಲ್ಲಟ್ಟಿ, ಶಸಿರಾಜ ಪಾಟೀಲ, ರಾಜೇಂದ್ರ ಅಂಕಲಗಿ, ಸುರೇಶ ಹುಣಶ್ಯಾಳ, ಬಂಡು ಹಥನೂರೆ, ಬಸವರಾಜ ಮರಡಿ, ಅಶೋಕ ಪಟ್ಟಣಶೆಟ್ಟಿ, ಹೀರಾ ಶುಗರ್ಸ ಮತ್ತು ವಿದ್ಯುತ್ ಸಂಘದ ನಿರ್ದೇಶಕರು ಉಪಸ್ಥಿತರಿದ್ದರು.
*ಕೋಟ್*
ಹುಕ್ಕೇರಿ ಭಾಗದಲ್ಲಿ ಗೋಕಾಕ ಸ್ಟೈಲ್ ನಡೆಯುವದಿಲ್ಲ ಎಂದು ಕೆಲವರು ಹೇಳುತ್ತಿದ್ದಾರೆ.
ನಿಜ. ನಾನು ಪ್ರತಿ ಮದುವೆ- ಮುಂಜೆ, ಗೃಹ ಪ್ರವೇಶ, ಮತ್ತೀತರ ಶುಭ ಕಾರ್ಯಗಳು, ಜಾತ್ರೆಗಳು, ಕ್ರೀಡೆಗಳು, ದವಾಖಾನೆ, ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವು ಮುಂತಾದ ಹಲವಾರು ಚಟುವಟಿಕೆಗಳಿಗೆ ನಾನು ಸ್ವಂತ ಜೇಬಿನಿಂದ ಹಣವನ್ನು ನೀಡುತ್ತಿದ್ದೇನೆ. ಇದು ನಿಮ್ಮಿಂದ ಸಾಧ್ಯನಾ..? ಎಂದು ಪ್ರಶ್ನಿಸಿದ ಅವರು, ನಾನೊಬ್ಬನೇ ಇರೋದು. ಬರುವ ದುಡ್ಡನ್ನು ಕಷ್ಟದಲ್ಲಿರುವ ನೊಂದ ಕುಟುಂಬಗಳಿಗೆ ಸಹಾಯ ಹಸ್ತ ಮಾಡುತ್ತಿರುವೆ. ಇಲ್ಲಿಯೂ ಬೇಕಾದರೆ ನಮ್ಮ ಗೋಕಾಕ ಸ್ಟೈಲ್ ಆರಂಭಿಸಿದರೆ ಇಲ್ಲಿಯೂ ನಿಮ್ಮ ಆಟವು ನಡೆಯುವುದಿಲ್ಲ. ಗೋಕಾಕ್ ಸ್ಟೈಲ್ ಬಗ್ಗೆ ಹಗುರವಾಗಿ ಮಾತನಾಡಿದರೆ ಸುಮ್ಮನಿರಲ್ಲ.
(ವಿರೋಧಿಗಳನ್ನು ಕುರಿತು) –
*ಬಾಲಚಂದ್ರ ಜಾರಕಿಹೊಳಿ*
ಬೆಮುಲ್ ಅಧ್ಯಕ್ಷರು ಮತ್ತು ಶಾಸಕರು