*ಮೂಡಲಗಿಯಲ್ಲಿ ಮಾಜಿ ಸೈನಿಕರ ಸಂಘಕ್ಕೆ ಉಚಿತ ನಿವೇಶನ : ಶಾಸಕ ಬಾಲಚಂದ್ರ ಜಾರಕಿಹೊಳಿ*
*ನಾಗನೂರ ಪಟ್ಟಣದಲ್ಲಿ ಅ.ಕ.ಮಾಜಿ ಸೈನಿಕರ ಮೂಡಲಗಿ ತಾಲೂಕು ಘಟಕವನ್ನು ಉದ್ಘಾಟಿಸಿದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ*
*ಮೂಡಲಗಿ* : ದೇಶದ ಗಡಿ ಕಾಯುವ ಯೋಧರ ಬಗ್ಗೆ ನಮಗೆ ಅಪಾರ ಗೌರವವಿದ್ದು, ಮೂಡಲಗಿಯಲ್ಲಿ ಮಾಜಿ ಸೈನಿಕರ ಸಂಘದ ಕಛೇರಿಗೆ ನಿವೇಶನ ನೀಡುವುದರ ಜೊತೆಗೆ ಸಂಘದ ಕಟ್ಟಡಕ್ಕೂ ಸಹ ನೆರವು ನೀಡುವುದಾಗಿ ಶಾಸಕ ಮತ್ತು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಭಾನುವಾರದಂದು ತಾಲೂಕಿನ ನಾಗನೂರ ಪಟ್ಟಣದ ಹೊರವಲಯದಲ್ಲಿರುವ ಮಹಾಲಿಂಗೇಶ್ವರ ಮಠದ ಆವರಣದಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದ ಮೂಡಲಗಿ ತಾಲೂಕು ಘಟಕದ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಿಂಗಳೊಳಗೆ ಮೂಡಲಗಿಯಲ್ಲಿ ಮಾಜಿ ಸೈನಿಕರ ಸಂಘಕ್ಕೆ ಉಚಿತವಾಗಿ ನಿವೇಶನವನ್ನು ನೋಂದಣಿ ಮಾಡಿಕೊಡಲಾಗುವುದು. ಗಡಿ ರಕ್ಷಣೆಗೆ ತಮ್ಮ ಪ್ರಾಣದ ಹಂಗು ತೊರೆದು ಹೋರಾಡಿರುವ ಮಾಜಿ ಸೈನಿಕರಿಗೊಂದು ನಾನು ನೀಡುತ್ತಿರುವ ಚಿಕ್ಕ ಕಾಣಿಕೆ ಎಂದು ಹೇಳಿದರು.
ಮಾಜಿ ಸೈನಿಕರ ಬೇಡಿಕೆಗಳ ಕುರಿತಂತೆ ಸರ್ಕಾರದ ಮಟ್ಟದಲ್ಲಿ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ. ಬರುವ ಫೆಬ್ರುವರಿ ತಿಂಗಳ ಮೊದಲ ವಾರದಲ್ಲಿ ಅರಭಾವಿ ಮತಕ್ಷೇತ್ರದ ಮಾಜಿ ಸೈನಿಕರನ್ನು ಒಳಗೊಂಡ ನಿಯೋಗವನ್ನು ಸಂಘದ ರಾಜ್ಯಾಧ್ಯಕ್ಷ ಡಾ.ಶಿವಣ್ಣ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿಗಳ ಬಳಿ ಒಯ್ಯಲಾಗುವುದು. ನಿಮ್ಮ ಬೇಡಿಕೆಗಳೇನು ಎಂಬುದರ ಬಗ್ಗೆ ಅಧ್ಯಯನ ಮಾಡಿಕೊಂಡು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ಅವರು ಹೇಳಿದರು.
ಸೈನಿಕ ಭವನ ಕುರಿತಂತೆ ಮುಖ್ಯಮಂತ್ರಿಗಳೊಂದಿಗೆ ಮಾತನಾಡಲಾಗುವುದು. ಪ್ರತಿ ಜಿಲ್ಲೆಗೊಂದರಂತೆ ಸೈನಿಕ ಭವನ ನಿರ್ಮಾಣ ಹಾಗೂ ಜಮೀನು ನೀಡುವುದರ ಬಗ್ಗೆ ಬರುವ ಬಜೆಟ್ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯಲಾಗುವುದು. ಕೆಲವೆಡೆ ಮಾಜಿ ಸೈನಿಕರಿಗೆ ಮೀಸಲಿಟ್ಟ ಜಮೀನುಗಳು ಒತ್ತುವರಿಯಾಗಿದ್ದರಿಂದ ಅರ್ಹರಿಗೆ ಜಮೀನುಗಳು ಸಿಗುತ್ತಿಲ್ಲ. ಇದು ಕೂಡ ನನ್ನ ಗಮನಕ್ಕೆ ಮಾಜಿ ಸೈನಿಕರು ತಂದಿದ್ದಾರೆ. ಮುಂದಿನ ದಿನಗಳಲ್ಲಿ ಮಾಜಿ ಸೈನಿಕರಿಗೆ ಸಿಗಬೇಕಾದ ನ್ಯಾಯಯುತ ಬೇಡಿಕೆಗಳನ್ನು ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.
ಗಡಿ ಕಾಯುವ ಯೋಧ ಹಾಗೂ ಅನ್ನ ನೀಡುವ ರೈತ ಈ ದೇಶದ ಎರಡು ಕಣ್ಣುಗಳಿದ್ದಂತೆ. ತಮ್ಮ ಪ್ರಾಣವನ್ನೇ ಲೆಕ್ಕಿಸದೇ ದೇಶದ ರಕ್ಷಣೆಗೆ ಸೇವೆ ಸಲ್ಲಿಸುತ್ತಿರುವ ಯೋಧರ ಬಗ್ಗೆ ನಾವು ಗೌರವವನ್ನು ಇಟ್ಟುಕೊಳ್ಳಬೇಕು. ನಾವಿಂದು ಸುರಕ್ಷಿತವಾಗಿ ಇದ್ದೇವೆ ಎಂದರೆ ಅದಕ್ಕೆ ಯೋಧರೇ ಕಾರಣರು. ಜೊತೆಗೆ ಸ್ವಾತಂತ್ರ್ಯ ಹೋರಾಟಗಾರರನ್ನು ನಾವಿಂದು ಸ್ಮರಿಸಬೇಕಾಗಿದೆ. ಅವರ ತ್ಯಾಗ ಬಲಿದಾನಗಳಿಂದ ಭಾರತಕ್ಕೆ ಸ್ವಾತಂತ್ರ್ಯ ಬಂದಿದೆ. ಇಂದಿನ ಯುವ ಪೀಳಿಗೆಯು ರಾಷ್ಟ್ರದ ಮಹಾನ್ ಪುರುಷರ ತತ್ವಾದರ್ಶಗಳನ್ನು ತಮ್ಮ ಜೀವನದಲ್ಲಿ ಬೆಳೆಸಿಕೊಳ್ಳಬೇಕಾದ ಅಗತ್ಯತೆಯನ್ನು ಅವರು ಪ್ರತಿಪಾದಿಸಿದರು.
ಅಕಮಾಜಿ ಸೈನಿಕರ ಸಂಘದ ರಾಜ್ಯಾಧ್ಯಕ್ಷ ಡಾ.ಶಿವಣ್ಣ ಎನ್.ಕೆ ಮಾತನಾಡಿ, ನ್ಯಾಷನಲ್ ಆರ್ಮಿ ಕಟ್ಟಿರುವ ಯುಗ ಪುರುಷ ನೇತಾಜಿ ಸುಭಾಸಚಂದ್ರ ಭೋಸ್ ಅವರು ನಮಗೆಲ್ಲ ಭಾರತದ ಪ್ರಪ್ರಥಮ ಪ್ರಧಾನಿ ಇದ್ದಂತೆ. ಭಾರತದ ಸ್ವಾತಂತ್ರ್ಯಕ್ಕಾಗಿ 7.32 ಲಕ್ಷ ಜನರು ತಮ್ಮ ಪ್ರಾಣವನ್ನೇ ಬಿಟ್ಟಿದ್ದಾರೆ. ದೇಶ ಪ್ರೇಮದ ಬಗ್ಗೆ ಜಾಗೃತಿ ಮೂಡಿಸುತ್ತಿರುವ ನಮ್ಮ ಮಾಜಿ ಸೈನಿಕರಿಗೆ 1962 ಭೂ ಕಾಯ್ದೆ ಅನ್ವಯ ರಾಜ್ಯಪತ್ರ ಹೊರಡಿಸಿದ್ದರೂ ಇದುವರೆಗೂ ಯಾವುದೇ ಜಮೀನುಗಳನ್ನು ನೀಡುತ್ತಿಲ್ಲ. ಜೊತೆಗೆ ಸೈನಿಕರ ಕಾರ್ಯಕ್ರಮಗಳಿಗೆ ಕೆಲ ಅಧಿಕಾರಿಗಳು ಗೈರು ಹಾಜರಾಗುವ ಮೂಲಕ ಅಗೌರವ ಸೂಚಿಸುತ್ತಿದ್ದಾರೆ. ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಸೈನಿಕರಿಗಾಗಿ ಪ್ರತಿ ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಸಮುದಾಯ ಭವನವನ್ನು ನಿರ್ಮಿಸಬೇಕು. ದೇಶದ ರಕ್ಷಣೆಗೆ ನಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡುತ್ತಿರುವ ನಮ್ಮಂತಹ ಸೈನಿಕರನ್ನು ಸಮಾಜವು ರೀಲ್ ಆಗಿ ನೋಡುತ್ತಿರುವುದು ವಿಪರ್ಯಾಸವಾಗಿದೆ. ಜೊತೆಗೆ ನಮ್ಮ ಸೈನಿಕರಿಗಾಗಿಯೇ ಸರ್ಕಾರವು ಹೊಸ ನಿಗಮ ಮಂಡಳಿಯನ್ನು ರಚಿಸುವಂತೆ ಆಗ್ರಹಿಸಿದರು.
ಮಾಜಿ ಸೈನಿಕ ಹಾಗೂ ಅವರಾದಿ ಗ್ರಾಪಂ ಮಾಜಿ ಅಧ್ಯಕ್ಷ ಸತ್ತೆಪ್ಪ ನಾಯಿಕ ಮಾತನಾಡಿ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕ್ಷೇತ್ರದಲ್ಲಿ ಎಲ್ಲ ಸಮಾಜಗಳನ್ನು ಒಂದುಗೂಡಿಸುವ ಕೆಲಸ ಮಾಡುತ್ತಿದ್ದಾರೆ. ಎಲ್ಲರನ್ನು ಸಹೋದರತ್ವ ಭಾವನೆಯಿಂದ ನೋಡುತ್ತಿರುವ ಬಾಲಚಂದ್ರ ಜಾರಕಿಹೊಳಿ ಅವರಿಗೆ ಮುಂಬರುವ ಚುನಾವಣೆಯಲ್ಲಿ ಎಲ್ಲ ಮಾಜಿ ಸೈನಿಕರು ಬೆಂಬಲವಾಗಿ ನಿಂತುಕೊಂಡು ಅವರಿಗೆ ಶಕ್ತಿಯಾಗಿ ನಿಲ್ಲೋಣ ಎಂದು ಸೈನಿಕರಿಗೆ ಪ್ರತಿಜ್ಞೆಯನ್ನು ಬೋಧಿಸಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸುಣಧೋಳಿಯ ಶಿವಾನಂದ ಮಹಾಸ್ವಾಮಿಗಳು, ನಾಗನೂರಿನ ಸದಾನಂದ ಸ್ವಾಮಿಗಳು ಮತ್ತು ಶಾಂತಾನಂದ ಸ್ವಾಮಿಗಳು ವಹಿಸಿದ್ದರು.
ಘಟಪ್ರಭಾ ಜೆ.ಜಿ ಕೋ ಆಸ್ಪತ್ರೆಯ ಅಧ್ಯಕ್ಷ ಬಿ.ಆರ್. ಪಾಟೀಲ, ಮಾಜಿ ಸಚಿವ ಆರ್.ಎಂ. ಪಾಟೀಲ, ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷ ಬಸಪ್ಪ ತಳವಾರ, ಮೂಡಲಗಿ ತಾಲೂಕು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಆರ್.ಎಂ. ಮಾಳೇದವರ, ಉಪಾಧ್ಯಕ್ಷ ಅರ್ಜುನ ಕೋಲುರ, ಶಿವಪ್ಪ ಮಾಲಗಾರ, ಬಿಇಓ ಅಜೀತ ಮನ್ನಿಕೇರಿ, ಪಿಎಸ್‍ಐ ಎಚ್.ವಾಯ್. ಬಾಲದಂಡಿ, ಡಾ. ಭಾರತಿ ಕೋಣಿ, ರಮೇಶ ಚೌಗಲಾ, ವಿರುಪಾಕ್ಷ ತಿಳಗಂಜಿ, ಜಗದೀಶ ಪೂಜೇರಿ, ನಿಂಗಪ್ಪ ಸಿಂಗೋಟಿ, ಬಸಲಿಂಗಪ್ಪ ಮುಂಡರಗಿ, ಪುಂಡಲೀಕ ಕೋಟಿನತೋಟ, ರಾಯಪ್ಪ ಬನ್ನಕ್ಕಗೋಳ, ಶಿವಮಲ್ಲಪ್ಪ ಕುಳಲಿ, ಬಸಪ್ಪ ಮುಂಗರವಾಡಿ, ಮಹಾದೇವ ಹೂಗಾರ, ಎಂ.ಬಿ. ಶೇಗುಣಸಿ, ಮೂಡಲಗಿ ತಾಲೂಕು ಮಾಜಿ ಸೈನಿಕರ ಸಂಘದ ನಿರ್ದೇಶಕರಾದ ಮಲ್ಲಪ್ಪ ಸಾಯನ್ನವರ, ಮಹಾಲಿಂಗ ಬಬಲಿ, ರಾಜಪ್ಪ ದಬಾಡಿ, ಭೀಮಪ್ಪ ಪಾಟೀಲ, ನಾಮದೇವ ಸಂಗಾನಟ್ಟಿ, ಪಾಂಡಪ್ಪ ಕೊಪ್ಪದ, ಸುರೇಶ ಅಂಗಡಿ, ರಾಮಪ್ಪ ಮುಗಳಖೋಡ, ಅನಿತಾ ಮಿರ್ಜಿ, ಸೇರಿದಂತೆ ಅನೇಕ ಮಾಜಿ ಸೈನಿಕರ ಸಂಘದ ಸದಸ್ಯರು, ವೀರ ನಾರಿಯರು ಉಪಸ್ಥಿತರಿದ್ದರು.
ಚರಂತಯ್ಯಾ ಮಳಿಮಠ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ನೇತಾಜಿ ಸುಭಾಸಚಂದ್ರ ಭೋಸ್ ಜಯಂತಿ ನಿಮಿತ್ಯ ಬಾಲಚಂದ್ರ ಜಾರಕಿಹೊಳಿ ಅವರು ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಗೌರವ ಸಲ್ಲಿಸಿದರು.