ಜಾರಕಿಹೊಳಿ ಸಾಮ್ರಾಜ್ಯ ನಿರ್ಮಿಸುವಲ್ಲಿ ಕಲಾಲ ಸಮಾಜದ ಕೊಡುಗೆ ಅಪಾರ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ
ಕಲ್ಲೋಳಿ ಪಟ್ಟಣದಲ್ಲಿ ಮೂಡಲಗಿ-ಗೋಕಾಕ ತಾಲೂಕುಗಳ ಸೂರ್ಯವಂಶ ಕ್ಷತ್ರೀಯ ಕಲಾಲ ಸಮಾಜದ ಸಮಾವೇಶದಲ್ಲಿ ಈ ಹೇಳಿಕೆ ನೀಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ
ಮೂಡಲಗಿ : ಕಳೆದ ಐದು ದಶಕಗಳ ಹಿಂದೆ ನಮ್ಮ ಕುಟುಂಬ ಸ್ಥಾಪಿಸಿರುವ ಸಾಮ್ರಾಜ್ಯದಲ್ಲಿ ಕಲಾಲ ಸಮಾಜದವರ ಪರಿಶ್ರಮ ಅಪಾರವಾಗಿದೆ ಎಂದು ಕೆಎಂಎಫ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಶನಿವಾರದಂದು ತಾಲೂಕಿನ ಕಲ್ಲೋಳಿ ಪಟ್ಟಣದ ನಿಯೋಜಿತ ಬಲಭೀಮ ದೇವರ ಕಲ್ಯಾಣ ಮಂಟಪದಲ್ಲಿ ಮೂಡಲಗಿ ಮತ್ತು ಗೋಕಾಕ ತಾಲೂಕುಗಳ ಸೂರ್ಯವಂಶ ಕ್ಷತ್ರೀಯ ಕಲಾಲ ಸಮಾಜದ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಲಾಲ ಸಮಾಜದವರು ತಮ್ಮ ಕುಟುಂಬದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದಾರೆ ಎಂದು ಶ್ಲಾಘಿಸಿದರು.
1972 ರಲ್ಲಿ ನಮ್ಮ ತಂದೆಯವರಾದ ದಿ.ಲಕ್ಷ್ಮಣರಾವ್ ಜಾರಕಿಹೊಳಿಯವರು ನಮ್ಮ ಕುಟುಂಬದ ಸಾಮ್ರಾಜ್ಯವನ್ನು ಆರಂಭಿಸಿದರು. ಆರಂಭದ ದಿನಗಳಲ್ಲಿ ನಾವು ಸಮಾಜದ ಮುಖ್ಯವಾಹಿನಿಗೆ ಬರಲು ಕಲಾಲ ಸಮಾಜದವರು ಸಾಕಷ್ಟು ಪರಿಶ್ರಮ ಪಟ್ಟಿದ್ದಾರೆ. ನಾವು ಆರಂಭಿಸಿದ ಉದ್ಯೋಗದ ಬೆಳವಣಿಗೆಯಲ್ಲಿ ಈ ಸಮಾಜವು ನಮಗೆ ತುಂಬ ಸಹಕಾರ ನೀಡುತ್ತಿದೆ. ನಾವೂ ಕೂಡ ಕಲಾಲ ಸಮಾಜದ ಬೆನ್ನಿಗಿದ್ದೇವೆ ಎಂದು ತಿಳಿಸಿದರು.
ದೇಶದ ಉದ್ದಗಲಕ್ಕೂ ಸೂರ್ಯವಂಶ ಕ್ಷತ್ರೀಯ ಸಮಾಜವು ಆವರಿಸಿದೆ. ಪ್ರತಿ ಮೂಲೆ ಮೂಲೆಗಳಲ್ಲೂ ಈ ಸಮಾಜ ಬಾಂಧವರು ತಮ್ಮ ವೃತ್ತಿಯ ಜೊತೆಗೆ ಸಮಾಜ ಸೇವೆಯಲ್ಲಿ ನಿರತರಾಗಿದ್ದಾರೆ. ಅಪ್ಪ ಮಾಡುತ್ತಿರುವ ಕಾಯಕವನ್ನು ಮಕ್ಕಳು ಮುಂದುವರೆಸದೇ ಸಮಾಜದ ಬೆಳವಣಿಗೆಗಳಲ್ಲಿ ಸಮಾಜ ಗುರುತಿಸುವ ಕಾಯಕದಲ್ಲಿ ತೊಡಗಿಕೊಳ್ಳಬೇಕು. ಸಮಾಜವು ಆರ್ಥಿಕವಾಗಿ ಪ್ರಗತಿ ಸಾಧಿಸಿದೆಯಾದರೂ ಶಿಕ್ಷಣದಲ್ಲಿ ಇನ್ನೂ ಮುಂದು ಬರಬೇಕಿದೆ. ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಪ್ರಗತಿ ಸಾಧಿಸಬೇಕಿದೆ. ಈ ಸಮಾಜದ ಆಶೋತ್ತರಗಳನ್ನು ಈಡೇರಿಸಲು ನಾನು ಬದ್ಧನಿದ್ದೇನೆ. ನಿಮ್ಮ ಪ್ರೀತಿ, ವಿಶ್ವಾಸಗಳಿಗೆ ಸದಾ ಚಿರಋಣಿಯಾಗಿರುವೆ ಎಂದು ಹೇಳಿದರು.
ಪ್ರತಿ ಸಮಾಜಗಳನ್ನು ಒಂದುಗೂಡಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದ್ದೇವೆ. ಸಣ್ಣ ಪುಟ್ಟ ಸಮಾಜಗಳು ಇಂದು ಮುಂದೆ ಬರಬೇಕಿದೆ. ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾಣಬೇಕಿದೆ. ಅದಕ್ಕಾಗಿ ಗೋಕಾಕ ಮತ್ತು ಮೂಡಲಗಿ ತಾಲೂಕುಗಳಲ್ಲಿ ಪ್ರತಿ ಸಮಾಜಗಳನ್ನು ಒಗ್ಗೂಡಿಸಿ ಆ ಸಮಾಜಗಳಲ್ಲಿ ಜಾಗೃತಿ ಮೂಡಿಸುವ ಕೆಲಸಗಳನ್ನು ಮಾಡುತ್ತಿದ್ದೇವೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಉಡುಪಿ ರಾಜರಾಜೇಶ್ವರಿ ಸಂಸ್ಥಾನ ಕ್ಷತ್ರೀಯ ಪೀಠದ ವಿಶ್ವಧಿರಾಜ್ ತೀರ್ಥ ಮಹಾಸ್ವಾಮಿಗಳು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಬೆಳಗಾವಿಯ ಹಿರಿಯ ಸಾಹಿತಿ ಡಾ. ಸಿ.ಕೆ. ಜೋರಾಪೂರ, ಸೂರ್ಯವಂಶ ಕ್ಷತ್ರೀಯ ಕಲಾಲ ಸಮಾಜದ ಗೋಕಾಕ ತಾಲೂಕಾ ಅಧ್ಯಕ್ಷ ಕುಬೇಂದ್ರ ಕಲಾಲ, ಪಟ್ಟಣದ ಸಮಾಜದ ಮುಖಂಡ ದತ್ತು ಕಲಾಲ, ಜಿಪಂ ಮಾಜಿ ಅಧ್ಯಕ್ಷ ಬಸಗೌಡ ಪಾಟೀಲ, ಪರಪ್ಪ ಕಡಾಡಿ, ಸಮಾಜದ ಅಧ್ಯಕ್ಷ ಮನೋಹರ ಕಲಾಲ, ಸುಭಾಸ ಕುರಬೇಟ, ಬಸವಂತ ದಾಸನವರ, ಬಸು ಜಗದಾಳ, ಮಾರುತಿ ಸಾವಳೇಕರ, ರಾಜು ಕಲಾಲ, ನಾರಾಯಣ ಕಲಾಲ, ಮನೋಹರ ಬಿ. ಕಲಾಲ, ಶ್ರೀಕಾಂತ ಕಲಾಲ, ಪರಶುರಾಮ ಕಲಾಲ, ಮಾರುತಿ ಕಲಾಲ, ರಮೇಶ ಕಲಾಲ, ದುಂಡಪ್ಪ ಕಲಾಲ, ಅಶೋಕ ಕಲಾಲ, ಭೀಮಶಿ ಕಲಾಲ, ಅಶೋಕ ಗಂ. ಕಲಾಲ, ರಮೇಶ ಕಲಾಲ, ಸುರೇಶ ಕಲಾಲ, ಸಂತೋಷ ಜೋರಾಪೂರ, ಭೀಮಶಿ ಕಲಾಲ, ಲಕ್ಷ್ಮಣ ಕಲಾಲ, ವಿಠ್ಠಲ ಜಾನ್ವೆಕರ, ಮಾರ್ತಂಡ ಪಾಸಲಕರ, ಬಸವರಾಜ ಕಲಾಲ, ಸೇರಿದಂತೆ ಅನೇಕ ಸಮಾಜ ಬಾಂಧವರು ಉಪಸ್ಥಿತರಿದ್ದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಸೂರ್ಯವಂಶ ಕ್ಷತ್ರೀಯ ಕಲಾಲ ಸಮಾಜದ ಪರವಾಗಿ ಲಕ್ಷ್ಮೀಯ ಬೆಳ್ಳಿಯ ವಿಗ್ರಹವನ್ನು ನೀಡಿ ಸನ್ಮಾನಿಸಲಾಯಿತು.