ಅರ್ ಡಿಪಿ ಆರ್ ಇಲಾಖೆಯಿಂದ ಮೆಳವಂಕಿ ಮತ್ತು ಚಿಗಡೊಳ್ಳಿ ರಸ್ತೆಗೆ ೨.೨೦ ಕೋಟಿ ರೂ- ಶಾಸಕ ಬಾಲಚಂದ್ರ ಜಾರಕಿಹೊಳಿ
ಗೋಕಾಕ್- ಆರ್ ಡಿ ಪಿ ಆರ್ ಇಲಾಖೆಯ ಅನುದಾನದಲ್ಲಿ ಮೆಳವಂಕಿ ಮತ್ತು ಚಿಗಡೊಳ್ಳಿ ರಸ್ತೆಯ ಕಾಮಗಾರಿಗೆ ೨.೨೦ ಕೋಟಿ ರೂ ಅನುದಾನ ಮಂಜೂರಾಗಿದೆ ಎಂದು ಅರಭಾವಿ ಶಾಸಕ ಮತ್ತು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ತಾಲೂಕಿನ ಮೆಳವಂಕಿ ಗ್ರಾಮದಲ್ಲಿ ಈಚೆಗೆ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಈ ಕಾಮಗಾರಿಗಳನ್ನು ಮಾರ್ಚ್ ತಿಂಗಳೊಳಗೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಮೆಳವಂಕಿ ಗೌಡನ ಕ್ರಾಸದಿಂದ ಬಸವ ನಗರ ತನಕ ರಸ್ತೆ ಮತ್ತು ಚಿಗಡೊಳ್ಳಿಯಿಂದ ಬಸವನಗರ ಮೆಳವಂಕಿತನಕ ರಸ್ತೆ ಕಾಮಗಾರಿಗೆ ತಲಾ ೧.೧೦ ಕೋಟಿ ರೂ ಅನುದಾನ ಬಿಡುಗಡೆ ಆಗಿದೆ ಎಂದು ತಿಳಿಸಿದರು.
೨೦೧೯ ರಲ್ಲಿ ಸಂಭವಿಸಿದ ಪ್ರವಾಹದ ಸಂದರ್ಭದಲ್ಲಿ ಈ ಭಾಗದ ಸಂತ್ರಸ್ತರಿಗೆ ವಸತಿ ಸೌಕರ್ಯವನ್ನು ಕಲ್ಪಿಸಲಾಗಿದೆ. ಅಡಿಬಟ್ಟಿ, ಚಿಗಡೊಳ್ಳಿ, ಮೆಳವಂಕಿ,ಹಡಗಿನಾಳ, ಹುಣಶ್ಯಾಳ ಪಿಜಿ, ತಳಕಟ್ನಾಳ, ಉದಗಟ್ಟಿ ಸೇರಿದಂತೆ ಪ್ರವಾಹ ಪೀಡಿತ ಪ್ರದೇಶಗಳ ಸಂತ್ರಸ್ತರಿಗೆ ಸಾಕಷ್ಟು ಅನುಕೂಲ ಮಾಡಿ ಕೊಡಲಾಗಿದೆ. ಆದರೂ ಇನ್ನು ಕೆಲ ಫಲಾನುಭವಿಗಳು ಉಳಿದುಕೊಂಡಿದ್ದು, ಜೂನ್ ತಿಂಗಳ ಒಳಗಾಗಿ ಸಂತ್ರಸ್ತ ಫಲಾನುಭವಿಗಳಿಗೆ ಮನೆಗಳ ಸೌಲಭ್ಯಗಳನ್ನು ಮಾಡಿಕೊಡುವುದಾಗಿ ಭರವಸೆ ನೀಡಿದರು.
ಮೆಳವಂಕಿ ಭಾಗದವರು ಮೊದಲಿನಿಂದಲೂ ನನಗೆ ಬೆಂಬಲ, ಸಹಕಾರವನ್ನು ನೀಡುತ್ತ ಬರುತ್ತಿದ್ದಾರೆ. ಈ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಪರ ಕಾಮಗಾರಿಗಳನ್ನು ಕೈ ಕೊಳ್ಳಲಾಗಿದೆ. ಎಪ್ರಿಲ್- ಮೇ ತಿಂಗಳಲ್ಲಿ ವಿಧಾನ ಸಭಾ ಚುನಾವಣೆ ನಡೆಯಲಿದ್ದು, ಹೆಚ್ಚಿನ ಬಹುಮತದಿಂದ ಆಯ್ಕೆ ಮಾಡುವಂತೆ ಮನವಿ ಮಾಡಿಕೊಂಡರು.
ಜಿಲ್ಲಾ ಸಹಕಾರಿ ಯುನಿಯನ್ ಅಧ್ಯಕ್ಷ ಬಿ.ಡಿ.ಪಾಟೀಲ, ಮುಖಂಡರಾದ ಸಿದ್ದಪ್ಪ ಹಂಜಿ, ಮಹಾದೇವ ಪತ್ತಾರ, ಅಲ್ಲಪ್ಪ ಕಂಕಣವಾಡಿ, ಈರಪ್ಪ ಬೀರನಗಡ್ಡಿ,ಆನಂದ ಮೂಡಲಗಿ, ಸತ್ತೆಪ್ಪ ಬಬಲಿ, ರಮೇಶ ಬೀರನಗಡ್ಡಿ, ನಾಗಪ್ಪ ಮಂಗಿ, ಅಧಿಕಾರಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.