*ಕೊನೆಗೂ ಕೂಡಿ ಬಂತು ಗೋಕಾಕದ ಗ್ರಾಮದೇವತೆ ಜಾತ್ರೆ. 2025ಕ್ಕೆ ಮುಹೂರ್ತ ಫಿಕ್ಸ್*
*ಮಹಾಲಕ್ಷ್ಮೀ ದೇವಸ್ಥಾನಗಳ ಜೀರ್ಣೋದ್ಧಾರಕ್ಕಾಗಿ 6.80 ಕೋಟಿ ರೂ. ವ್ಯಯ : ಶಾಸಕ ರಮೇಶ ಜಾರಕಿಹೊಳಿ*
*ಗೋಕಾಕ* : ಗೋಕಾವಿ ನೆಲದ ಇತಿಹಾಸ ಪ್ರಸಿದ್ಧ ಉಭಯ ಮಹಾಲಕ್ಷ್ಮೀ ದೇವಸ್ಥಾನಗಳನ್ನು ನವೀಕೃತಗೊಳಿಸಿ 2025 ರಲ್ಲಿ ಅತ್ಯಂತ ಸಡಗರ, ಸಂಭ್ರಮದಿಂದ ಇಡೀ ಜಿಲ್ಲೆಯೇ ಕಣ್ತುಂಬಿ ನೋಡುವಂತಹ ಗ್ರಾಮದೇವತೆ ಜಾತ್ರೆಯನ್ನು ಯಶಸ್ವಿಗೊಳಿಸೋಣ ಎಂದು ಮಹಾಲಕ್ಷ್ಮೀದೇವಿ ಜಾತ್ರಾ ಕಮೀಟಿ ಅಧ್ಯಕ್ಷರೂ ಆಗಿರುವ ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ಶನಿವಾರ ಸಂಜೆ ಇಲ್ಲಿಯ ಮಹಾಲಕ್ಷ್ಮೀ ಸಭಾ ಭವನದಲ್ಲಿ ಆಯೋಜನೆಗೊಂಡಿದ್ದ ಮಹಾಲಕ್ಷ್ಮೀ ಉಭಯ ದೇವಸ್ಥಾನಗಳ ಜೀರ್ಣೋದ್ಧಾರ ಸಂಬಂಧ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಐತಿಹಾಸಿಕ ಜಾತ್ರಾ ಮಹೋತ್ಸವದಲ್ಲಿ ಸಾರ್ವಜನಿಕರು ತನು, ಮನ, ಧನದಿಂದ ಸೇವೆ ಸಲ್ಲಿಸಿ ಮಹಾಲಕ್ಷ್ಮೀದೇವಿ ಕೃಪೆಗೆ ಪಾತ್ರರಾಗುವಂತೆ ಮನವಿ ಮಾಡಿಕೊಂಡರು.
2020 ರಲ್ಲಿ ಪ್ರತಿ 5 ವರ್ಷಕ್ಕೊಮ್ಮೆ ನಡೆಯಬೇಕಿದ್ದ ಗೋಕಾಕ ಗ್ರಾಮದೇವತೆ ಜಾತ್ರೆ ಕೋವಿಡ್ ಕಾರಣದಿಂದ ರದ್ದಾಗಿದ್ದು, ಸಕಲ ಭಕ್ತರ ಆಶಯದಂತೆ 2025 ರಲ್ಲಿ ನಡೆಸಲು ಉದ್ಧೇಶಿಸಲಾಗಿದೆ. ಜಾತ್ರೆಯನ್ನು ಅದ್ಧೂರಿಯಾಗಿ 5 ದಿನ ಆಚರಿಸಲು ಉಭಯ ದೇವಸ್ಥಾನಗಳ ಜೀರ್ಣೋದ್ಧಾರ ಕೈಗೊಳ್ಳಬೇಕಿದೆ. ಇದಕ್ಕಾಗಿ ಗೋಕಾಕ ತಾಲೂಕಿನ ಎಲ್ಲ ಸಾರ್ವಜನಿಕರು, ವ್ಯಾಪಾರಸ್ಥರ ಸಹಕಾರ ಅಗತ್ಯವಾಗಿದೆ. ಈ ದಿಸೆಯಲ್ಲಿ ಯಾವುದೇ ಜಾತಿ, ಮತಗಳೆಂಬ ತಾರತಮ್ಯ ಮಾಡದೇ ಎಲ್ಲ ಜಾತಿಯ ಜನರು ಒಂದಾಗಿ ಈ ಜಾತ್ರೆಯನ್ನು ಯಶಸ್ವಿಗೊಳಿಸಬೇಕಿದೆ. ಸಕಲರ ಸಂಕಷ್ಟಗಳನ್ನು ನಿವಾರಣೆ ಮಾಡುತ್ತಿರುವ ಮಹಾಲಕ್ಷ್ಮೀದೇವಿ ಜಾತ್ರೆಯನ್ನು ಅತ್ಯಂತ ಯಶಸ್ವಿಗೊಳಿಸುವ ಮೂಲಕ ದೇವಿಯ ಕೃಪೆಗೆ ಪಾತ್ರರಾಗೋಣ ಎಂದು ರಮೇಶ ಜಾರಕಿಹೊಳಿ ಹೇಳಿದರು.
*ಈಗಿರುವ ಮಹಾಲಕ್ಷ್ಮೀ ದೇವಸ್ಥಾನಗಳಿಗೆ ಹೊಸ ರೂಪು ನೀಡಲು ನಿರ್ಧಾರ, ಮಹಾಲಕ್ಷ್ಮೀದೇವಿ ಸರ್ವರಿಗೂ ಒಳಿತು ಮಾಡಲಿ : ಶಾಸಕ ಬಾಲಚಂದ್ರ ಜಾರಕಿಹೊಳಿ*
ಪ್ರಾಸ್ತಾವಿಕವಾಗಿ ಮಾತನಾಡಿದ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು 2025 ರ ಜಾತ್ರೆಗೂ ಮುನ್ನ ಉಭಯ ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯ ನಡೆಯಬೇಕಿದೆ. ಇದಕ್ಕೆ ಸುಮಾರು 6.80 ಕೋಟಿ ರೂ.ಗಳ ಅಂದಾಜು ಪಟ್ಟಿಯನ್ನು ತಯಾರಿಸಲಾಗಿದೆ. ಈಗಿರುವ ದೇವಸ್ಥಾನಕ್ಕೆ ಹೊಸ ರೂಪು ನೀಡಲು ನಿರ್ಧರಿಸಲಾಗಿದೆ. ಉಭಯ ದೇವಸ್ಥಾನಗಳ ನವೀಕರಣಕ್ಕಾಗಿ 3.50 ಕೋಟಿ ರೂ. ಗೋಪುರಗಳ ನಿರ್ಮಾಣಕ್ಕಾಗಿ 60 ಲಕ್ಷ ರೂ, ಗ್ರಾಮದೇವತೆ ಉಭಯ ಹೊಸ ರಥಗಳ ನಿರ್ಮಾಣಕ್ಕಾಗಿ 1.20 ಕೋಟಿ ರೂ, ಮಹಾಲಕ್ಷ್ಮೀ ದೇವಿಯ ಉಭಯ ಹೊಸ ರಥಗಳ ನಿರ್ಮಾಣಕ್ಕಾಗಿ 50 ಲಕ್ಷ ರೂ ಮತ್ತು 2025 ರಲ್ಲಿ ನಡೆಯುವ ಗೋಕಾಕ ಗ್ರಾಮದೇವತೆ ಜಾತ್ರೆಯ ಸಂಬಂಧ ಸುಮಾರು 1 ಕೋಟಿ ರೂ.ಗಳು ಸೇರಿದಂತೆ ಒಟ್ಟಾರೆ 6.80 ಕೋಟಿ ರೂ. ವ್ಯಯವಾಗಲಿದೆ ಎಂದು ಅವರು ಹೇಳಿದರು.
ಈಗಾಗಲೇ ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ಮಹಾಲಕ್ಷ್ಮೀ ಸಭಾ ಭವನವನ್ನು ಧಾರ್ಮಿಕ ಮತ್ತು ಸಾಮಾಜಿಕ ಉದ್ಧೇಶಗಳಿಗೆ ನಿರ್ಮಿಸಲಾಗಿದ್ದು, ಈಗಾಗಲೇ ಸಭಾ ಭವನದಿಂದ 1.47 ಕೋಟಿ ರೂ.ಗಳ ಆದಾಯ ಬಂದಿದೆ. ಇದರಲ್ಲಿ 74 ಲಕ್ಷ ರೂ. ಖರ್ಚಾಗಿದ್ದು, ಇನ್ನೂ 73 ಲಕ್ಷ ರೂ. ಶಿಲ್ಕು ಉಳಿದಿದೆ. ಆದ್ದರಿಂದ ದೇವಸ್ಥಾನಗಳ ಜೀರ್ಣೋದ್ದಾರಕ್ಕಾಗಿ ಭಕ್ತರಿಂದ ದೇಣಿಗೆ ಸಂಗ್ರಹಿಸಲು ಉದ್ಧೇಶಿಸಿದ್ದೇವೆ. ಸಾರ್ವಜನಿಕರಿಂದ ಸಂಗ್ರಹಿಸುವ ನಗದು ಹಣವನ್ನು ದೇವಸ್ಥಾನದ ಅಭಿವೃದ್ಧಿಗೆ ಬಳಕೆ ಮಾಡಲಾಗುವುದು. ಈಗಾಗಲೇ ಮಹಾಲಕ್ಷ್ಮೀ ಸಭಾ ಭವನ ಕಟ್ಟಡ ನಿರ್ಮಾಣಕ್ಕೆ ಜಾತ್ರಾ ಕಮೀಟಿಯಿಂದ 1.13 ಕೋಟಿ ರೂ, ನಮ್ಮ ಕುಟುಂಬದಿಂದ 2.25 ಕೋಟಿ ರೂ. ದೇವಪ್ಪ ಉಳ್ಳಾಗಡ್ಡಿ 21.30 ಲಕ್ಷ ರೂ, ಸೇರಿದಂತೆ ಸರ್ಕಾರದ ಅನುದಾನವನ್ನು ಸೇರಿಸಿ ಸುಮಾರು 5 ಕೋಟಿ ರೂ, ವೆಚ್ಚದಲ್ಲಿ ಸಭಾ ಭವನವನ್ನು ಲೋಕಾರ್ಪಣೆ ಮಾಡಲಾಗಿದೆ. ದೇವಸ್ಥಾನಗಳ ಜೀರ್ಣೋದ್ಧಾರ ಮಾಡಿದ ನಂತರವೇ 2025 ರ ಜೂನ್ ತಿಂಗಳಲ್ಲಿ ಅತೀ ವಿಜ್ರಂಭಣೆಯಿಂದ ಗ್ರಾಮದೇವತೆ ಜಾತ್ರೆಯನ್ನು ನಡೆಸಲಾಗುವುದು ಎಂದು ಅವರು ಹೇಳಿದರು.
ಎಲ್ಲರೂ ಸೇರಿ ಭಕ್ತಿ ಭಾವದಿಂದ ದೇವಿಯ ಸೇವೆ ಮಾಡೋಣ. ಇಲ್ಲಿನ ಮಹಾಲಕ್ಷ್ಮೀದೇವಿಯ ಶಕ್ತಿ ಹಾಗೂ ಅನುಗೃಹ ಬಹು ದೊಡ್ಡದಿದೆ. ಸಾಕಷ್ಟು ಇತಿಹಾಸ ಪ್ರಾಚೀನವಾದ ಮೆರಕನಟ್ಟಿ ಮಹಾಲಕ್ಷ್ಮೀ ದೇವಿಯ ಕೃಪಾಕಟಾಕ್ಷ ಎಲ್ಲರಿಗೂ ಲಭಿಸಲಿ. ಇದಕ್ಕಾಗಿ ಎಲ್ಲ ಬಾಂಧವರು ಜಾತ್ಯಾತೀತವಾಗಿ ಇಡೀ ನಾಡೇ ನಮ್ಮ ಗೋಕಾಕದತ್ತ ತಿರುಗಿ ನೋಡಲು ಗೋಕಾಕ ಗ್ರಾಮದೇವತೆ ಜಾತ್ರೆಯ ಉತ್ಸವವನ್ನು ಮಾಡಲಾಗುವುದು. ಭಾವೈಕ್ಯತೆಯ ಸಂಕೇತವಾಗಿರುವ ಮಹಾಲಕ್ಷ್ಮೀ ದೇವಿ ಎಲ್ಲರಿಗೂ ಸುಖ, ಶಾಂತಿ, ನೆಮ್ಮದಿಯನ್ನು ನೀಡಲಿ. ಮಳೆಯಾಗಿ ರೈತರ ಬದುಕು ಹಸನಾಗಲಿ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಆಶಿಸಿದರು.
*ಭಾವೈಕ್ಯತೆಯ ಸಂಕೇತದಿಂದ ಕೂಡಿರುವ ಗ್ರಾಮದೇವತೆ ಜಾತ್ರೆಗೆ ಎಲ್ಲರೂ ಒಗ್ಗಟ್ಟಾಗಿ ದುಡಿಯೋಣ : ಅಶೋಕ ಪೂಜೇರಿ*
ಮುಖಂಡ ಅಶೋಕ ಪೂಜೇರಿ ಮಾತನಾಡಿ, ಗ್ರಾಮದೇವತೆ ಜಾತ್ರೆಯನ್ನು ಮಾಡುವುದರ ಮೂಲಕ ದೇವಸ್ಥಾನಗಳ ನವೀಕರಣಗೊಳಿಸುವ ಕಾರ್ಯಕ್ಕೆ ಮುಂದಾಗಿರುವ ಶಾಸಕರಾದ ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಹಾಗೂ ಜಾತ್ರಾ ಕಮೀಟಿಯ ನಿರ್ಧಾರ ಅತ್ಯಂತ ಸ್ತುತ್ಯಾರ್ಹವಾಗಿದೆ. ಹಿಂದೂ-ಮುಸ್ಲಿಂರು ಒಗ್ಗಟ್ಟಾಗಿ ಈ ದೇವಸ್ಥಾನಗಳಿಗೆ ಭಕ್ತಿ ಪೂರ್ವಕವಾಗಿ ನಡೆದುಕೊಳ್ಳುತ್ತ ಬರುತ್ತಿದ್ದಾರೆ. ಜೀರ್ಣೋದ್ದಾರ ಕಾರ್ಯಗಳಿಗಾಗಿ ತನು, ಮನ, ಧನದಿಂದ ಎಲ್ಲರೂ ಕೈ ಜೋಡಿಸೋಣ. ಜಾತ್ರೆಯನ್ನು ಯಶಸ್ವಿಗೊಳಿಸೋಣ. ಎಲ್ಲ ರೀತಿಯಿಂದಲೂ ಸೇವೆಗೆ ನಾವೆಲ್ಲ ಸಿದ್ಧರಿದ್ದೇವೆ ಎಂದು ಅವರು ತಿಳಿಸಿದರು.
ಮಾಜಿ ನಗರಾಧ್ಯಕ್ಷ ಸಿದ್ಧಲಿಂಗ ದಳವಾಯಿ, ವಕೀಲರ ಸಂಘದ ಮಾಜಿ ಅಧ್ಯಕ್ಷ ಶಶಿಧರ ದೇಮಶೆಟ್ಟಿ, ಸಿದ್ರಾಮ ಜಗದಾಳ, ಶ್ರೀದೇವಿ ತಡಕೋಡ ಸೇರಿದಂತೆ ಅನೇಕರು ಮಾತನಾಡಿದರು.
ಹಿರಿಯ ಕಾನೂನು ಸಲಹೆಗಾರ ಎಂ.ವಾಯ್. ಹಾರೂಗೇರಿ ಅವರು ಇದೇ ಸಂದರ್ಭದಲ್ಲಿ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ 5,05,555 ರೂ.ಗಳನ್ನು ನೀಡುವ ವಾಗ್ದಾನ ಮಾಡಿದರು.
ಈ ಸಂದರ್ಭದಲ್ಲಿ ಜಾತ್ರಾ ಕಮೀಟಿಯ ಉಪಾಧ್ಯಕ್ಷ ಅಶೋಕ ಮುಲ್ಕಿಪಾಟೀಲ, ಪ್ರಭು ಚೌಹ್ವಾನ್, ಜಾತ್ರಾ ಕಮೀಟಿ ಸದಸ್ಯರು ಉಪಸ್ಥಿತರಿದ್ದರು.
ಈ ಪೂರ್ವಭಾವಿ ಸಭೆಯಲ್ಲಿ ತಾಲೂಕಿನ ವ್ಯಾಪಾರಸ್ಥರು, ಉದ್ದಿಮೆದಾರರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ವಕೀಲರ ಸಂಘದ ಪದಾಧಿಕಾರಿಗಳು ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು. ಪ್ರಭಾಶುಗರ ಅಧ್ಯಕ್ಷ ಅಶೋಕ ಪಾಟೀಲ ವಂದಿಸಿದರು.
*ಫೋಟೋ ಕ್ಯಾಪ್ಷನ್* : ಗೋಕಾಕ 1 : ಮಹಾಲಕ್ಷ್ಮೀದೇವಿ ದೇವಸ್ಥಾನಗಳ ಜೀರ್ಣೋದ್ಧಾರ ಕೈಗೊಳ್ಳುವ ಸಂಬಂಧ ಶನಿವಾರದಂದು ನಗರದ ಮಹಾಲಕ್ಷ್ಮೀ ಸಭಾಭವನದಲ್ಲಿ ನಡೆದ ಪೂರ್ವಭಾವಿ ಸಭೆಯನ್ನು ಜಾತ್ರಾ ಕಮೀಟಿ ಅಧ್ಯಕ್ಷರೂ ಆಗಿರುವ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಉದ್ಘಾಟಿಸಿದರು. ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ, ಮುಖಂಡ ಅಶೋಕ ಪೂಜೇರಿ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಗೋಕಾಕ 2 : ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅವರ ಅಧ್ಯಕ್ಷತೆಯಲ್ಲಿ ಮಹಾಲಕ್ಷ್ಮೀ ಸಭಾಭವನದಲ್ಲಿ ಮಹಾಲಕ್ಷ್ಮೀ ದೇವಸ್ಥಾನದ ಜೀರ್ಣೋದ್ಧಾರ ಸಂಬಂಧ ಪೂರ್ವಭಾವಿ ಸಭೆ ಜರುಗಿತು. ಶಾಸಕ ಬಾಲಚಂದ್ರ ಜಾರಕಿಹೊಳಿ, ಮುಖಂಡ ಅಶೋಕ ಪೂಜೇರಿ ಉಪಸ್ಥಿತರಿದ್ದರು.