*ಮುಂಬರುವ ವಿಧಾನ ಸಭಾ ಸಾರ್ವತ್ರಿಕ ಚುನಾವಣೆ* : *ಮತ ಎಣಿಕೆ ಕೇಂದ್ರದ ಪೂರ್ವಭಾವಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ ದಾನಮ್ಮನವರ*
ವಿಜಯಪುರ : ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳು ಆದ ಡಾ.ವಿಜಯ ಮಹಾಂತೇಶ ದಾನಮ್ಮನವರ ಅವರು ಮಂಗಳವಾರ ನಗರದ ಸೈನಿಕ ಶಾಲೆಗೆ ಭೇಟಿ ನೀಡಿ, ಮುಂಬರುವ ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023ರ ಹಿನ್ನೆಲೆಯಲ್ಲಿ ಮತ ಎಣಿಕೆ ಕೇಂದ್ರ ಭದ್ರತಾ ಕೊಠಡಿ ಸೇರಿದಂತೆ ವಿವಿಧ ಕೊಠಡಿಗಳ ಕುರಿತ ಪರಿಶೀಲನೆ ನಡೆಸಿದರು.
ಜಿಲ್ಲೆಯ ಎಲ್ಲಾ ಎಂಟು ವಿಧಾನಸಭಾ ಕ್ಷೇತ್ರಗಳ ವಿದ್ಯುನ್ಮಾನ ಮತಯಂತ್ರಗಳ ದಾಸ್ತಾನು ಕೊಠಡಿ, ಮತ ಎಣಿಕೆ ಕೊಠಡಿ ಮತ್ತು ಭದ್ರತಾ ಕೊಠಡಿಗಳನ್ನು ಸ್ಥಾಪಿಸುವ ಕುರಿತು ಸೈನಿಕ ಶಾಲೆಯ ಪ್ರಾಂಶುಪಾಲರಾದ ಗ್ರೂಫ್ ಕ್ಯಾಪ್ಟನ್ ಪ್ರತಿಭಾ ಬಿಷ್ಟ್ ಹಾಗೂ ಜಿಲ್ಲಾ ವರಿಷ್ಠಾಧಿಕಾರಿಗಳಾದ ಎಚ್.ಡಿ ಆನಂದ ಕುಮಾರ ಅವರೊಂದಿಗೆ ಜಿಲ್ಲಾಧಿಕಾರಿಗಳು ಚರ್ಚೆ ನಡೆಸಿದರು.
ಮಾಧ್ಯಮ ಕೊಠಡಿ, ಪೊಲೀಸ್ ಕಂಟ್ರೋಲ್ ರೂಂ, ಗಣಕ ಯಂತ್ರ, ಇಂಟರ್ನೆಟ್ ಸಂಪರ್ಕ ವ್ಯವಸ್ಥೆ, ಭದ್ರತಾ ವ್ಯವಸ್ಥೆ, ಸ್ಡ್ರಾಂಗ್ ರೂಂ ವಿವಿಧ ಕೊಠಡಿಗಳ ಸ್ಥಾಪಿಸುವ ಹಾಗೂ ಪಾರ್ಕಿಂಗ್ ವ್ಯವಸ್ಥೆಯ ಕುರಿತು ಸ್ಥಳ ವೀಕ್ಷಣೆ ಮಾಡಿ, ಅಗತ್ಯ ಎಲ್ಲಾ ವ್ಯವಸ್ಥೆಗಳನ್ನು ಆದ್ಯತೆಯ ಮೇರೆಗೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತರಾದ ವಿಜಯಕುಮಾರ್ ಮೆಕ್ಕಳಕಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶಂಕರ ಮಾರಿಹಾಳ, ಡಿವೈಎಸ್ ಪಿ ಸಿದ್ದೇಶ್ವರ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರಾದ ಗೋಪಿನಾಥ ಮಲಜಿ, ಎನ್ ಐ ಸಿ ಅಧಿಕಾರಿ ಶಿವಾನಂದ ಗೂಗವಾಡ, ವಿಜಯಪುರ ತಹಶೀಲ್ದಾರ ಸುರೇಶ ಮುಂಜೆ, ಸೈನಿಕ ಶಾಲೆಯ ಆಡಳಿತಾಧಿಕಾರಿ ಆಕಾಶ ವತ್ಸ, ಲೋಕೋಪಯೋಗಿ ಇಲಾಖೆ, ಜಿಲ್ಲಾ ಅಗ್ನಿ ಶಾಮಕ ಇಲಾಖೆ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.