- ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನಮ್ಮ ಗುಂಪಿಗೆ ಅಧಿಕಾರ ಚುಕ್ಕಾಣಿ,ಲಿಂಗಾಯತ ಸಮುದಾಯಕ್ಕೆ ಅಧ್ಯಕ್ಷ- ಉಪಾಧ್ಯಕ್ಷರ ಸ್ಥಾನ; ಶಾಸಕ ಬಾಲಚಂದ್ರ ಜಾರಕಿಹೊಳಿ ಘೋಷಣೆ*
ಜಿಲ್ಲಾ ಹಾಲು ಒಕ್ಕೂಟದ ಹುಕ್ಕೇರಿ ಪ್ರಾದೇಶಿಕ ಸಭೆಯಲ್ಲಿ ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಭಾಗಿ*
*ಬಿಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನಮ್ಮ ಗುಂಪಿಗೆ ಅಧಿಕಾರ ಚುಕ್ಕಾಣಿ,*
*ಲಿಂಗಾಯತ ಸಮುದಾಯಕ್ಕೆ ಅಧ್ಯಕ್ಷ- ಉಪಾಧ್ಯಕ್ಷರ ಸ್ಥಾನ; ಶಾಸಕ ಬಾಲಚಂದ್ರ ಜಾರಕಿಹೊಳಿ ಘೋಷಣೆ*
*ಹುಕ್ಕೇರಿ-* ಅಕ್ಟೋಬರ್ 19 ರಂದು ನಡೆಯುವ ಬಿಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನಮ್ಮ ಫೆನಲ್ ಅಧಿಕಾರಕ್ಕೆ ಬರಲಿದ್ದು, ಸುಮಾರು 12 ಜನ ಅಭ್ಯರ್ಥಿಗಳು ಆಯ್ಕೆಯಾಗುವ ಮೂಲಕ ನಾವೇ ಬ್ಯಾಂಕಿನ ಅಧಿಕಾರ ಚುಕ್ಕಾಣಿ ಹಿಡಿಯಲಿದ್ದೇವೆ ಎಂದು ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಹೇಳಿದರು.
ಗುರುವಾರದಂದು ಹುಕ್ಜೇರಿ ಪಟ್ಟಣದ ರವದಿ ಫಾರ್ಮ್ ಹೌಸ್ ನಲ್ಲಿ ಜಿಲ್ಲಾ ಹಾಲು ಒಕ್ಕೂಟದ ಆಶ್ರಯದಲ್ಲಿ ಜರುಗಿದ ಹುಕ್ಕೇರಿ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು, ಆಡಳಿತ ಮಂಡಳಿಯ ಸದಸ್ಯರು ಮತ್ತು ಮುಖ್ಯ ಕಾರ್ಯನಿರ್ವಾಹಕರ 2024-25 ನೇ ಸಾಲಿನ ಪ್ರಾದೇಶಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇವರು ಮತ್ತು ರೈತರ ಆಶೀರ್ವಾದದಿಂದ ಈ ಸಲ ನಮ್ಮ ಗುಂಪು ಸಂಪೂರ್ಣ ಬಹುಮತ ಪಡೆದುಕೊಂಡು ಬಿಡಿಸಿಸಿ ಬ್ಯಾಂಕಿನ ಸಾರಥ್ಯ ವಹಿಸಿಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದರು.
ರೈತರಿಗಾಗಿಯೇ ಇರುವ ಬಿಡಿಸಿಸಿ ಬ್ಯಾಂಕ್
ಅಭಿವೃದ್ಧಿ ಮಾಡುವುದೇ ನಮ್ಮಗಳ ಗುರಿಯಾಗಿದೆ. ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲವನ್ನು ವಿತರಿಸುವ ಮೂಲಕ ಸಂಘಗಳು ಮತ್ತು ರೈತರ ಆರ್ಥಿಕ ಬಲವರ್ಧನೆಗೆ ಮಹತ್ವ ನೀಡುತ್ತೇವೆ. ಯಾರೂ ಏನೇ ಹೇಳಿದರೂ ಬ್ಯಾಂಕಿನ ಅಧಿಕಾರ ನಡೆಸುವವರು ನಾವೇ ಎಂದರು.
ನಮ್ಮ ಗುಂಪಿನವರೇ ಬ್ಯಾಂಕಿನ ಅಧ್ಯಕ್ಷ,
ಉಪಾಧ್ಯಕ್ಷರಾಗಲಿದ್ದಾರೆ. ಎರಡೂ ಸ್ಥಾನಗಳನ್ನು ಪ್ರಬಲ ಲಿಂಗಾಯತ ಸಮುದಾಯಕ್ಕೆ ನೀಡಲು ನಿರ್ಧರಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಹಿರಿಯ ನಾಯಕರಾದ ಡಾ. ಪ್ರಭಾಕರ ಕೋರೆ, ರಮೇಶ್ ಜಾರಕಿಹೊಳಿ, ಅಣ್ಣಾಸಾಹೇಬ ಜೊಲ್ಲೆಯವರ ಮುಂದಾಳತ್ವದಲ್ಲಿ ಜಿಲ್ಲೆಯ ಪ್ರತಿಷ್ಠಿತ ಬಿಡಿಸಿಸಿ ಬ್ಯಾಂಕಿನ ಚುನಾವಣೆಯನ್ನು ಎದುರಿಸುತ್ತಿದ್ದು, ಈಗಾಗಲೇ ಜಿಲ್ಲೆಯ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಒಂದು ಸುತ್ತಿನ ಚುನಾವಣಾ ಪ್ರಚಾರವನ್ನು ನಡೆಸಲಾಗಿದೆ. ಜಿಲ್ಲೆಯ ಎಲ್ಲ ರೈತ ಬಾಂಧವರು ನಮ್ಮ ಗುಂಪಿನ ಅಭ್ಯರ್ಥಿಗಳಿಗೆ ಆಶೀರ್ವಾದ ಮಾಡಲಿದ್ದಾರೆ. ಈ ಮೂಲಕ ಶತಮಾನೋತ್ಸವ ಸಂಭ್ರಮದಲ್ಲಿರುವ ಬ್ಯಾಂಕಿನ ಹೊಸ ಶಕೆ ಆರಂಭವಾಗಲಿದೆ. ಬ್ಯಾಂಕು ಮತ್ತು ರೈತರ ಸರ್ವಾಂಗೀಣ ಅಭಿವೃದ್ಧಿಯೇ ನಮ್ಮಗಳ ಆಶಯವಾಗಿದೆ ಎಂದು ಅವರು ಹೇಳಿದರು.
ಇದರ ಜತೆಗೆ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘದ ಚುನಾವಣೆಯು ನಡೆಯುತ್ತಿದ್ದು, ದಿ. ಅಪ್ಪಣ್ಣಗೌಡ ಪಾಟೀಲ ಸಹಕಾರ ಫೆನಲ್ ಮೂಲಕ ನಮ್ಮ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದು, ಇದರಲ್ಲಿಯೂ ನಮ್ಮ ಬೆಂಬಲಿತ ಅಭ್ಯರ್ಥಿಗಳು ಬಹುಮತದಿಂದ ಆಯ್ಕೆಯಾಗುವ ಮೂಲಕ ನಮ್ಮವರೇ ಇದರಲ್ಲಿಯೂ ಸಹ ಆಡಳಿತ ನಡೆಸುವ ಸೌಭಾಗ್ಯವು ಕೂಡಿ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ಅತ್ಯಲ್ಪ ಅವಧಿಯಲ್ಲಿಯೇ ಒಕ್ಕೂಟವನ್ನು ಭಾರೀ ಲಾಭದತ್ತ ಮುನ್ನಡೆಸಲಾಗಿದೆ. ಕೇವಲ 68 ಲಕ್ಷ ರೂಪಾಯಿ ಲಾಭದಲ್ಲಿದ್ದ ಈ ರೈತರ ಸಂಸ್ಥೆಯನ್ನು 13 ಕೋಟಿ ರೂಪಾಯಿ ಲಾಭವನ್ನು ಮಾಡಲಾಗಿದೆ. ರೈತರ ಜೀವನಾಡಿಯಾಗಿರುವ ಈ ಸಂಸ್ಥೆಗಾದ ಲಾಭವನ್ನು ರೈತರಿಗೆ ವಿತರಿಸುವ ಮಹತ್ಕಾರ್ಯವನ್ನು ಮಾಡಲಾಗುತ್ತಿದೆ. ಹೈನುಗಾರ ರೈತರಿಗೆ ಅವಶ್ಯವಿರುವ ಎಲ್ಲ ಸೌಲಭ್ಯಗಳನ್ನು ಪ್ರತಿಶತ 60 ರ ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ. ಹಾಲು ಪೂರೈಕೆ ಮಾಡಿದ ಹತ್ತು ದಿನಗಳ ಒಳಗೆ ರೈತರ ಖಾತೆಗಳಿಗೆ ಬಿಲ್ ಸಂದಾಯವಾಗುತ್ತಿದೆ. ರೈತರು ಸಹ ಆರ್ಥಿಕವಾಗಿ ಮುಂದೆ ಬರಬೇಕು. ಆ ನಿಟ್ಟಿನಲ್ಲಿ ಹತ್ತು ಹಲವಾರು ಯೋಜನೆಗಳನ್ನು ರೂಪಿಸುವ ಉದ್ದೇಶವನ್ನು ನಮ್ಮ ಒಕ್ಕೂಟವು ಹೊಂದಿದೆ ಎಂದವರು ತಿಳಿಸಿದರು.
ಹಲವಾರು ವರ್ಷಗಳಿಂದ ಹೈನುಗಾರಿಕೆಯನ್ನು ನಂಬಿ ಬದುಕುತ್ತಿರುವ ರೈತರ ಏಳ್ಗೆಯೇ ನಮಗೆ ಮುಖ್ಯವಾಗಿದೆ. ಬೆಳಗಾವಿ ಹಾಲು ಒಕ್ಕೂಟವನ್ನು ರಾಜ್ಯದಲ್ಲಿಯೇ ಮಾದರಿ ಸಂಸ್ಥೆಯನ್ನಾಗಿ ಪರಿವರ್ತಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆಂದು ಅವರು ಹೇಳಿದರು.
ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕರಾದ ರಾಯಪ್ಪ ಡೂಗ, ಮಲ್ಲಪ್ಪ ಪಾಟೀಲ, ಕಲ್ಲಪ್ಪ ಗಿರೆಣ್ಣವರ, ಪ್ರಕಾಶ ಅಂಬೋಜಿ, ಮಾಜಿ ಸಚಿವ ಶಶಿಕಾಂತ ನಾಯಿಕ, ಹೀರಾ ಶುಗರ್ಸ್ ಅಧ್ಯಕ್ಷ ಅಜ್ಜಪ್ಪ ಕಲ್ಲಟ್ಟಿ, ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘದ ಅಧ್ಯಕ್ಷ ಜಯಗೌಡ ಪಾಟೀಲ, ಸಂಗಮ ಕಾರ್ಖಾನೆ ಅಧ್ಯಕ್ಷ ರಾಜೇಂದ್ರ ಪಾಟೀಲ, ಅನೇಕ ಸಹಕಾರಿ ಮುಖಂಡರು, ಗಣ್ಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಶ್ರೀಕಾಂತ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು.