ಹಗಲು ರಾತ್ರಿ ದುಡಿಯುವ ನಮಗೂ ಸರಕಾರಿ ನೌಕರರೆನ್ನಿ
ಗೋಕಾಕ : ಎಲ್ಲರಂತೆ ನಾವು ಸಹ ಕಷ್ಟಪಟ್ಟು ದುಡಿಯುವ ಮೂಲಕ ಜನಸಾಮಾನ್ಯರಿಗೆ ಸೇವೆ ಸಲ್ಲಿಸುತ್ತಿದ್ದೇವೆ. ಇದನ್ನು ಅರಿತು ರಾಜ್ಯ ಸರಕಾರ ತಮ್ಮನ್ನು ಸರಕಾರಿ ನೌಕರರು ಎಂದು ಪರಿಗಣಿಸುವಂತೆ ಸಾರಿಗೆ ನೌಕರರು ಗೋಕಾಕದಲ್ಲಿ ಬಸ್ಸುಗಳನ್ನು ಬಂದ್ ಮಾಡಿ ಆಗ್ರಹಿಸಿದರು.
ಸಾರಿಗೆ ಸಂಸ್ಥೆಗಳು ಉತ್ತಮ ಲಾಭದೊಂದಿಗೆ ಚಲಿಸುತ್ತಲಿದೆ. ಹೀಗಾಗಿ ಸಂಸ್ಥೆಗೆ ಯಾವುದೇ ನಷ್ಟ ಇಲ್ಲ ನಮಗೆ ಸಂಬಳ, ಇನ್ನಿತರ ಸೌಲಭ್ಯ ನೀಡಿದರೆ ಸರಕಾರದ ಬೊಕ್ಕಸಕ್ಕೆ ನಷ್ಟವಾಗಲಿದೆ ಎನ್ನುವುದು ಸರಿಯಲ್ಲ.ಎಂದು ಪ್ರತಿಭಟನಾಕಾರರು ಹೇಳಿದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರನ್ನು ಸರಕಾರಿ ನೌಕರರೆಂದು ಪರಿಗಣಿಸಿ ಸಮಾನ ವೇತನ ನೀಡಬೇಕು. ಕೆಎಸ್ಸಾರ್ಟಿಸಿ ಸರಕಾರದ ಒಡೆತನದ ಸಂಸ್ಥೆಯಾಗಿದ್ದೂ ದೇಶದಲ್ಲಿಯೇ ಅತ್ಯುತ್ತಮ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದರೆ, ಇದಕ್ಕೆ ಸರಕಾರ ಅಗತ್ಯ ಸೌಲಭ್ಯ ನೀಡದೆ ವಂಚಿಸುತ್ತಿದೆ ಎಂದು ದೂರಿದರು.
ಸಾರಿಗೆ ನೌಕರರ ಪ್ರತಿಭಟನೆ ಬೆಂಬಲಿಸಿ ಮಾತನಾಡಿದ ಸಾರ್ವಜನಿಕರಲ್ಲೊಬ್ಬರು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಹೋರಾಟ ನ್ಯಾಯಯುತವಾಗಿದೆ,ಅವರ ಬೇಡಿಕೆ ಈಡೆರಿಸದ ಕಾರಣ ಇವತ್ತು ಸಾರಿಗೆ ನೌಕರರು ಬೀದಿಗೆ ಬಂದಿರುವ ಪರಿಸ್ಥಿತಿ ಬಂದಿದೆ ,ಅದಕ್ಕಾಗಿ ರಾಜ್ಯ ಸರಕಾರ ಕೂಡಲೇ ಇವರನ್ನು ಸರಕಾರಿ ನೌಕರರೆಂದು ಪರಿಗಣಿಸಬೇಕೆಂದು ಒತ್ತಾಯಿಸಿದರು.