ಕಾರ ಇದ್ದವರ ಬಿಪಿಎಲ್ ಕಾರ್ಡ ರದ್ದು ಮಾಡದಂತೆ ಸೂಚನೆ:ಗೊವಿಂದ ಕಾರಜೋಳ
ಬೆಳಗಾವಿ: ಮಾನದಂಡಗಳ ಪ್ರಕಾರ ಬಿಪಿಎಲ್ ಕಾರ್ಡ್ ರದ್ದು ಸ್ಥಗಿತ ಮಾಡಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡುವುದಾಗಿ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಬಿಜೆಪಿ ಶಾಸಕ ಎಂ.ಪಿ. ಕುಮಾರಸ್ವಾಮಿ ವಿಷಯ ಪ್ರಸ್ತಾಪಿಸಿ, 30 ಸಾವಿರ ರೂಪಾಯಿಗೂ ಹಳೆಯ ಕಾರು ಸಿಗುತ್ತಿದ್ದು, ಬಡವರು ಕಾರ್ ನಲ್ಲಿ ಓಡಾಡಬಾರದೇ?
ಕಾರು ಹೊಂದಿದ್ದಾರೆ ಎಂದು ಸಾವಿರಾರು ಬಡವರ ಬಿಪಿಎಲ್ ಕಾರ್ಡ್ ರದ್ದು ಮಾಡಲಾಗಿದೆ ಎಂದು ಕಿಡಿಕಾರಿದರು.
ಅವರ ಪ್ರಸ್ತಾಪಕ್ಕೆ ಉತ್ತರಿಸಿದ ಸಚಿವ ಗೋವಿಂದ ಕಾರಜೋಳ, ನಾಲ್ಕು ಚಕ್ರಗಳ ವಾಹನ ಸೇರಿದಂತೆ ಮಾನದಂಡಗಳ ಪ್ರಕಾರ ಬಿಪಿಎಲ್ ಕಾರ್ಡ್ ರದ್ದು ಸ್ಥಗಿತ ಮಾಡಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸುವುದಾಗಿ ತಿಳಿಸಿದರು.
ಹಿಂದೆ ದ್ವಿಚಕ್ರ ವಾಹನ ಹೊಂದಿದವರಿಗೂ ಬಿಪಿಎಲ್ ಕಾರ್ಡ್ ಇಲ್ಲ ಎನ್ನುವ ಮಾನದಂಡವಿತ್ತು. ಈಗ ನಾಲ್ಕು ಚಕ್ರಗಳ ವಾಹನ ಹೊಂದಿರುವ ಕುಟುಂಬಗಳು ಅರ್ಹವಲ್ಲ ಎಂದು ಪರಿಗಣಿಸಲಾಗಿದ್ದು, ತರಕಾರಿ ಮಾರುವವರು, ಬಾಡಿಗೆ ವಾಹನಗಳ ಚಾಲಕರ ಕುಟುಂಬಗಳು ಸೇರಿದಂತೆ ಲಕ್ಷಾಂತರ ಬಡ ಕುಟುಂಬಗಳು ನಾಲ್ಕು ಚಕ್ರಗಳ ವಾಹನ ಹೊಂದಿವೆ, ಈ ಮಾನದಂಡದಲ್ಲಿ ಬಿಪಿಎಲ್ ಕಾರ್ಡ್ ರದ್ದು ಪಡಿಸುವುದು ಸರಿಯಲ್ಲ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುವುದು ಮಾನದಂಡಗಳಲ್ಲಿ ಬದಲಾವಣೆಗೆ ಸೂಚಿಸಲಾಗುವುದು ಎಂದು ಹೇಳಿದ್ದಾರೆ.