ರಾಜ್ಯದ ‘ಗುತ್ತಿಗೆ, ಹೊರಗುತ್ತಿಗೆ ನೌಕರ’ರಿಗೆ ಭರ್ಜರಿ ಸಿಹಿಸುದ್ದಿ: ಸಮಾನ ಕೆಲಸಕ್ಕೆ, ‘ಸಮಾನ ವೇತನ’ ಜಾರಿ
ಬೆಂಗಳೂರು : ರಾಜ್ಯದ ಎಲ್ಲಾ ಮಹಾನಗರ ಪಾಲಿಕೆಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೇರಪಾವತಿ, ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಸಮಾನ ಕೆಲಸಕ್ಕೆ ಸಮಾನ ವೇತನೆ, ದಿನಗೂಲಿ, ಕ್ಷೇಮಾಭಿವೃದ್ಧಿಯಡಿ ಡಿ-ವೃಂದದ ನೌಕರರ ವೇತನ ಪಾವತಿಸಲು ಸರ್ಕಾರ ಆದೇಶ ಹೊರಡಿಸಿದೆ.
ಈ ಸಂಬಂಧ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು ಸುತ್ತೋಲೆಯನ್ನು ಹೊರಡಿಸಿದ್ದು, ರಾಜ್ಯದ ಎಲ್ಲಾ ಮಹಾನಗರಪಾಲಿಕೆಗಳು ಮತ್ತು ನಗರ ಸ್ಥಳೀಯ ಸಂಸ್ತೆಗಳಲ್ಲಿ ನೇರಪಾವತಿ, ಗುತ್ತಿಗೆ/ಹೊರಗುತ್ತಿಗೆ, ಸಮಾನ ಕೆಲಸಕ್ಕೆ ಸಮಾನ ವೇತನ, ದಿನಗೂಲಿ, ಕ್ಷೇಮಾಭಿವೃದ್ಧಿಯಡಿ ಡಿ ವೃಂದದ ಪೌರಕಾರ್ಮಿಕರು, ಲೋಡರ್ಸ್, ಕ್ಲೀನರ್ಸ್, ಹಲ್ಬರ್ (ವಾಲ್‌ಮನ್ ಮುಂತಾದ ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದು, ಈ ನೌಕರರುಗಳು ಸಾರ್ವಜನಿಕರಿಗೆ ಅತಿ ಅಗತ್ಯ ಸೇವೆಗಳನ್ನು ಪೂರೈಸುವ ಕಾರ್ಯವನ್ನು ನಿರ್ವಹಿಸುತ್ತಿರುತ್ತಾರೆ ಎಂದಿದ್ದಾರೆ.
ಈ ನೌಕರರುಗಳ ವೇತನವನ್ನು ಸ್ಥಳೀಯ ಸಂಸ್ಥೆಯ ನಿಧಿಯಿಂದ ಪ್ರಥಮ ಆದ್ಯತೆಯ ಮೇಲೆ ಪ್ರತಿ ತಿಂಗಳು ಪಾವತಿಸಬೇಕಿರುತ್ತದೆ, ಆದರೆ, ಬಹುತೇಕ ಮಹಾನಗರಪಾಲಿಕೆಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸದರಿ ಸಿಬ್ಬಂದಿಗಳಿಗೆ ಸಕಾಲದಲ್ಲಿ ವೇತನವನ್ನು ಪಾವತಿಸದ ಅಭಿವೃದ್ಧಿ ಕಾಮಗಾರಿಗಳಿಗೆ ಮತ್ತು ಗುತ್ತಿಗೆದಾರರ ಬಿಲ್ಲುಗಳನ್ನು ಪಾವತಿಸುವುದಕ್ಕಾಗಿ ವಿನಿಯೋಗಿಸುತ್ತಿರುವುದನ್ನು ಗಮನಿಸಿದೆ. ಇದರಿಂದಾಗಿ ಪ್ರಸ್ತಾಪಿತ ನೌಕರರುಗಳು ಆರ್ಥಿಕವಾಗಿ ಸಂಕಷ್ಟದಿಂದ ಬಳಲುತ್ತಿರುವುದು ನಿರ್ದೇಶನಾಲಯದ ಗಮನಕ್ಕೆ ಬಂದಿರುತ್ತದೆ ಎಂದು ತಿಳಿಸಿದ್ದಾರೆ.
ಆದರಿಂದ ಮಹಾನಗರಪಾಲಿಕೆಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ನೇರಪಾವತಿ, ಗುತ್ತಿಗೆ/ಹೊರಗುತ್ತಿಗೆ, ಸಮಾನ ಕೆಲಸಕ್ಕೆ ಸಮಾನ ವೇತನ, ದಿನಗೂಲಿ, ಕ್ಷೇಮಾಭಿವೃದ್ಧಿಯಡಿ ಕರ್ತವ್ಯ ನಿರ್ವಹಿಸುತ್ತಿರುವ ಡಿ ವೃಂದದ ನೌಕರರುಗಳ ವೇತನವನ್ನು ಸಾಮಾನ್ಯ ನಿಧಿಯಿಂದ ಪ್ರಥಮ ಆದ್ಯತೆ ಮೇರೆಗೆ ಪರಿಗಣಿಸಿ, ಪ್ರತಿ ತಿಂಗಳ 5ನೇ ತಾರೀಖಿನೊಳಗಾಗಿ ಕಡ್ಡಾಯವಾಗಿ ಪಾವತಿಸಲು ಎಲ್ಲಾ ಆಯುಕ್ತರು/ಪೌರಾಯುಕ್ತರು/ ಮುಖ್ಯಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದೆ. ತಪ್ಪಿದಲ್ಲಿ, ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು ಎಂಬುದಾಗಿ ಎಚ್ಚರಿಸಿದ್ದಾರೆ.