ಗುರುಗಳ ಅಪೇಕ್ಷೆಗಿಂತ ಭಕ್ತರು ನಿಷ್ಕಲ ಮನಸ್ಸಿನಿಂದ ಕಾರ್ಯ ಮಾಡಿ: ಕೃಪಾನಂದ ಶ್ರೀಗಳು
ಘಟಪ್ರಭಾ: ಗುರುಗಳ ಅಪೇಕ್ಷೆಗಿಂತ ಭಕ್ತರು ನಿಷ್ಕಲ ಮನಸ್ಸಿನಿಂದ ಕಾರ್ಯ ಮಾಡಿದರೆ ಗುರುವಿನ ಆಶೀರ್ವಾದ ಸದಾ ಇರುತ್ತದೆ. ಎಂದು ಜಾರಕಿಹೊಳಿ ಗ್ರಾಮದ ಶ್ರೀ ಕಾಡಸಿದೇಶ್ವರ ಮಠದ ಪೂಜ್ಯ ಶ್ರೀ ಕೃಪಾನಂದ ಮಹಾಸ್ವಾಮಿಜಿ ಹೇಳಿದರು.
ಅವರು ಗುರುವಾರಂದು ಸಮೀಪದ ಝಾಂಗಟಿಹಾಳ ಗ್ರಾಮದ ಶ್ರೀ ಯಲ್ಲಾಲಿಂಗಮಠದಲ್ಲಿ ಜರುಗಿದ ಶ್ರೀ ಚಂದ್ರಶೇಖರ ಮಹಾಸ್ವಾಮಿಜಿಯವರ ಗುರುವಂದನಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಆಶೀರ್ವಚನ ನೀಡಿದರು.
ಮನುಷ್ಯನಿಗೆ ಯಾವುದೇ ಕಷ್ಟ ಬಂದರೂ ಸಹ ಗುರು ಅದನ್ನು ದೂರ ಮಾಡುತ್ತಾನೆ. ಗುರುವಿನ ಸೇವೆ ಅತೀಅಮೂಲ್ಯವಾದದ್ದು ಅದನ್ನು ಸದುಪಯೋಗ ಪಡಿಸಿಕೊಂಡರೆ ಮನುಷ್ಯ ಜನ್ಮವು ಪಾವನವಾಗುತ್ತದೆ. ಭಕ್ತಿ,ಶೃದ್ಧೆಯಿಂದ ಗುರುವಿನಲ್ಲಿ ಕಾಣಬೇಕು. ಶ್ರೀ ಚಂದ್ರಶೇಖರ ಮಹಾಸ್ವಾಮಿಜಿಯವರು ಎಲ್ಲಾ ಸಂಪ್ರದಾಯದೊಂದಿಗೆ ಬೆರೆತು ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ ಎಂದರು.
ಗೋಕಾಕದ ಜ್ಞಾನ ಮಂದಿರದ ಮಾತೋಶ್ರೀ ಸುವರ್ಣಾತಾಯಿ ಹೊಸಮಠ ಅವರು ಆಶೀರ್ವಚನ ನೀಡಿ ಮಹಿಳೆಯರು ತಮ್ಮ ಕೌಟುಂಬಿಕ ಜೀವನ ಸುಖಮಯವಾಗಲಿಕ್ಕೆ ಗುರುವಿನ ಸೇವೆ ಮಾಡಬೇಕು. ಮನೆಯಲ್ಲಿ ವಯೋವೃದ್ಧರನ್ನು ಚನ್ನಾಗಿ ನೋಡಿಕೊಳ್ಳುವ ಮೂಲಕ ಪುಣ್ಯ ಪ್ರಾಪ್ತಿಯಾಗುತ್ತದೆ. ಗುರುವಿನ ಮೇಲೆ ಅಪಾರವಾದ ಭಕ್ತಿ ಇಟ್ಟು ನಂಬಿಕೆ,ಶೃದ್ಧೆಯಿಂದ ನಡೆದುಕೊಂಡರೆ ಜೀವನ ಪಾವನವಾಗುತ್ತದೆ ಎಂದರು
ವೇದಿಕೆ ಮೇಲೆ ಶ್ರೀಮಠದ ಪೂಜ್ಯ ಶ್ರೀ ಚಂದ್ರಶೇಖರ ಮಹಾಸ್ವಾಮಿಜಿ, ಘಟಪ್ರಭಾದ ಯಲ್ಲಾಲಿಂಗಮಠದ ಮಾತೋಶ್ರೀ ಸಂಗಮ್ಮತಾಯಿ, ಲಕ್ಷ್ಮಣ ಆಲೋಶಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಚಂದ್ರಶೇಖರ ಮಹಾಸ್ವಾಮಿಜಿಯವರಿಗೆ ಭಕ್ತರಿಂದ ಕಿರೀಟ ಪೂಜೆ ಮತ್ತು ಪಾದಪೂಜೆ, ಸನ್ಮಾನ ಕಾರ್ಯಕ್ರಮ ಜರುಗಿತು.