ಮತದಾರರಿಗೆಕೃತಜ್ಞತೆ ಸಲ್ಲಿಸಿದ ಮಾಜಿ ಸಚಿವ ರಮೇಶ ಜಾರಕಿಹೋಳಿ
ಗೋಕಾಕ : ರಾಜ್ಯದಲ್ಲಿ ನಡೆದ ಮೂರು ಉಪಚುನಾವಣೆಗಳಲ್ಲಿ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಬೆಳಗಾವಿಯ ಲೋಕಸಭಾ ಉಪಚುನಾವಣೆಯಲ್ಲಿ ಪ್ರಥಮ ಬಾರಿಗೆ ಮಹಿಳಾ ಸಂಸದೆಯಾಗಿ ಮಂಗಲಾ ಅಂಗಡಿ ಆಯ್ಕೆಯಾಗಿರುವದು ಸಂತಸ ತಂದಿದೆ ಎಂದು ಮಾಜಿ ಸಚಿವ ಹಾಗೂ ಶಾಸಕ ರಮೇಶ ಜಾರಕಿಹೊಳಿ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುವ ಅವರು, ದಿ.ಸುರೇಶ ಅಂಗಡಿಯವರ ಪತ್ನಿ ಮಂಗಲಾ ಅಂಗಡಿಯವರ ಮೇಲೆ ಜಿಲ್ಲೆಯ ಜನತೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಬರುವ ದಿನಗಳಲ್ಲಿ ಅವರು ಹಂತಹಂತವಾಗಿ ಅವುಗಳನ್ನು ಈಡೇರಿಸುವುದರಲ್ಲಿ ಯಾವುದೇ ಸಂದೇಹವಿಲ್ಲ. ಸುರೇಶ್ ಅಂಗಡಿ ಅವರು ಬೆಳಗಾವಿಯಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳಿಗೆ ನಾಂದಿ ಹಾಡಿದ್ದರು. ಅವುಗಳನ್ನು ಮುಂದುವರಿಸಿ ಕೊಂಡು ಹೋಗುವಲ್ಲಿ ಮಂಗಲಾ ಅಂಗಡಿ ಅವರು ಶ್ರಮಿಸಲಿದ್ದಾರೆ.
ಮೋದಿ ಹಾಗೂ ಯಡಿಯೂರಪ್ಪನವರ ಕೈ ಬಲಪಡಿಸಲು ಶ್ರಮಿಸಿದ ಬಿಜೆಪಿ ಕಾರ್ಯಕರ್ತರಿಗೆ ಅಭಿನಂದನೆಗಳು. ಉಪಚುನಾವಣೆಯ ಸಂದರ್ಭದಲ್ಲಿ ನನಗೆ ಕೊರೋನಾ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಚುನಾವಣೆ ಪ್ರಚಾರದಲ್ಲಿ ಭಾಗವಹಿಸಲಾಗಲಿಲ್ಲ. ಆದರೆ ನನ್ನ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಮಂಗಲಾ ಅಂಗಡಿಯವರ ಪರ ಪ್ರಚಾರಕೈಗೊಂಡು ಗೋಕಾಕ ವಿಧಾನಸಭಾ ಕ್ಷೇತ್ರದಲ್ಲಿ 28ಸಾವಿರಕ್ಕೂ ಹೆಚ್ಚು ಬಹುಮತಗಳನ್ನು ನೀಡಿದ್ದು, ಕ್ಷೇತ್ರದ ಜನತೆಗೆ ನನ್ನ ಕೃತಜ್ಞತೆಗಳು ಎಂದು ರಮೇಶ ಜಾರಕಿಹೊಳಿ ಮತದಾರರನ್ನು ಅಭಿನಂದಿಸಿದ್ದಾರೆ.