ರಾಯಭಾಗದ ಹೆಸ್ಕಾಂ ಕಚೇರಿ ಮೇಲೆ ನಾಲ್ಕು ಜಿಲ್ಲೆಯ ಎಸಿಬಿ ಅಧಿಕಾರಿಗಳಿಂದ ದಾಳಿ,
ಚಿಂಚಲಿ: ವಿದ್ಯುತ್ ಟ್ರಾನ್ಸಫಾರ್ಮರ ಅಳವಡಿಸಲು ಮತ್ತು ವಿದ್ಯುತ ಸಂಪರ್ಕ ನೀಡಲು ರೈತರು ಹಾಗೂ ಸಾರ್ವಜನಿಕರಿಂದ ಲಂಚವನ್ನು ಕೇಳಲಾಗುತ್ತಿದೆ ಮತ್ತು ಲಂಚ ನೀಡದಿದ್ದರೆ ವಿನಾಕಾರಣ ಪರವಾನಿಗೆಯನ್ನು ನೀಡಲು ವಿಳಂಬ ಮಾಡಲಾಗುತ್ತದೆ ಎನ್ನುವ ದೂರುಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವ ಹಿನ್ನೆಲೆಯಲ್ಲಿ ರಾಯಬಾಗ ತಾಲೂಕಿನ ಹೆಸ್ಕಾಂ ಕಚೇರಿಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ವತಿಯಿಂದ ದೊಡ್ಡ ಮಟ್ಟದಲ್ಲಿ ದಾಳಿ ನಡೆಸಲಾಗಿದೆ.
ರಾಯಬಾಗ ಹೆಸ್ಕಾಂ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ, ಶಾಖಾಧಿಕಾರಿಗಳ ಕಛೇರಿಗಳು, ವರ್ಕಶಾಪ ಮತ್ತು ಟ್ರಾನ್ಸಫಾರ್ಮರ ರಿಪೇರಿ ಕಚೇರಿಗಳ ಮೇಲೆ 30 ಕ್ಕೂ ಅಧಿಕ ಎಸಿಬಿ ಅಧಿಕಾರಿಗಳ ತಂಡದಿಂದ ಏಕಕಾಲಕ್ಕೆ ಇಂದು ದಾಳಿ ನಡೆಸಲಾಗಿದೆ. ದಾಳಿ ನಡೆಸಿದೆ ಎಲ್ಲ ಕಚೇರಿಗಳಲ್ಲಿನ ದಾಖಲೆಗಳ ಪರಿಶೀಲನೆ ರಾತ್ರಿಯಿಂಡಿ ಮುಂದುವರೆದಿದ್ದು ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಎಸಿಬಿ (ಉತ್ತರ ವಲಯ) ಎಸ್ಪಿ ಬಿ.ಎಸ್.ನ್ಯಾಮಗೌಡರ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ಜೆ.ಎಂ.ಕರುಣಾಕರ ಶೆಟ್ಟಿ ನೇತೃತ್ವದಲ್ಲಿ ಹಾಗೂ ಬೆಳಗಾವಿಯ ಇನ್ಸಪೆಕ್ಟರ್ ಗಳಾದ ಎ.ಎಸ್.ಗುದಿಗೊಪ್ಪ ಹಾಗೂ ಹೆಚ್ ಸುನಿಲಕುಮಾರ, ಧಾರವಾಡದ ವಿ.ಎಸ್.ಖಡಿ, ಗದಗದ ವೀರಣ್ಣ ಹಳ್ಳಿ, ಬಾಗಲಕೋಟೆಯ ವಿಜಯ ಮಠಪತಿ ಹಾಗೂ ಸಮೀರ ಮುಲ್ಲಾ ಸೇರಿದಂತೆ ಸಿಬ್ಬಂದಿವರ್ಗದವರು ದಾಳಿಯಲ್ಲಿ ಭಾಗವಹಿಸಿದ್ದಾರೆ.