ಗ್ರಾಮೀಣ ಮಕ್ಕಳಿಗೆ ಶಿಕ್ಷಣ ನೀಡುವ ನಿಜಗುಣದೇವ ಸ್ವಾಮಿಜಿಯವರ ಕಾರ್ಯ ಶ್ಲಾಘನೀಯ: ಸರ್ವೋತ್ತಮ ಜಾರಕಿಹೊಳಿ
ಸಂಗನಕೇರಿ ಗ್ರಾಮದಲ್ಲಿ ಶ್ರೀ ಸಿದ್ಧಲಿಂಗೇಶ್ವರ ಶಾಲೆಯ ನೂತನ ಶಾಲಾ ಕಟ್ಟಡದ ಅಡಿಗಲ್ಲು ಸಮಾರಂಭ
ಘಟಪ್ರಭಾ: ಗ್ರಾಮೀಣ ಮಕ್ಕಳಿಗೆ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ನಿಜಗುಣದೇವ ಮಹಾಸ್ವಾಮಿಜಿಯವರ ಕಾರ್ಯ ಶ್ಲಾಘನೀಯವಾಗಿದೆ ಎಂದು ಗೋಕಾಕದ ಶ್ರೀ ಲಕ್ಷ್ಮೀ ಎಜ್ಯುಕೇಶನ್ ಶಿಕ್ಷಣ ಸಂಸ್ಥೆಯ ನಿರ್ದೇಶಕ ಸರ್ವೋತ್ತಮ ಜಾರಕಿಹೊಳಿ ಹೇಳಿದರು.
ಅವರು ಗುರುವಾರದಂದು ಸಮೀಪದ ಸಂಗನಕೇರಿ ಗ್ರಾಮದಲ್ಲಿ ಶ್ರೀ ನಿಜಗುಣದೇವರ ವಿದ್ಯಾ ಸಂಸ್ಥೆಯ ಶ್ರೀ ಸಿದ್ಧಲಿಂಗೇಶ್ವರ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ನೂತನ ಶಾಲಾ ಕಟ್ಟಡದ ಅಡಿಗಲ್ಲು ಸಮಾರಂಭದ ಪೂಜೆ ಸಲ್ಲಿಸಿ ಮಾತನಾಡಿದರು.
ಇಂದಿನ ತಂತ್ರಜ್ಞಾನ ಯುಗದಲ್ಲಿ ಶಿಕ್ಷಣ ಅತೀಅವಶ್ಯವಾಗಿದೆ. ಪೂಜ್ಯ ಶ್ರೀ ನಿಜಗುಣದೇವ ಮಹಾಸ್ವಾಮಿಗಳು ಧಾರ್ಮಿಕ,ಅಧ್ಯಾತ್ಮಿಕ, ಸಾಹಿತ್ಯ,ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡುವ ಮೂಲಕ ಶೈಕ್ಷಣಿಕವಾಗಿ ಹೆಚ್ಚಿನ ಮಹತ್ವ ನೀಡುತ್ತಿದ್ದು ಶಿಕ್ಷಣದ ಜೊತೆಗೆ ಸಂಸ್ಕಾರವು ಮುಖ್ಯವಾಗಿದ್ದು ಈ ಮೂಲಕ ಶ್ರೀ ನಿಜಗುಣದೇವ ಮಹಾಸ್ವಾಮಿಗಳು ಮಾಡುತ್ತಿರುವುದು ಗ್ರಾಮೀಣ ಪ್ರದೇಶದ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ. ಇದಕ್ಕೆ ನಮ್ಮ ಜಾರಕಿಹೊಳಿ ಮನೆತನದ ಸಂಪೂರ್ಣ ಸಹಕಾರ ನೀಡುತ್ತೇವೆ. ಶೈಕ್ಷಣಿಕವಾಗಿ ಗ್ರಾಮೀಣ ಮಕ್ಕಳು ಮುಂದೆ ಬಂದು ಉನ್ನತ ಹುದ್ದೆ ಪಡೆಯುವ ಮೂಲಕ ಗ್ರಾಮಕ್ಕೆ ಶಿಕ್ಷಣ ಸಂಸ್ಥೆಗೆ ಕೀರ್ತಿ ತರುವಂತಹ ಕಾರ್ಯವಾಗಬೇಕು. ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಅವರನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಜವಾಬ್ದಾರಿ ಅವರ ಮೇಲಿದೆ ಎಂದರು.
ಸಮಾರಂಭದ ಸಾನಿಧ್ಯವನ್ನು ಹುಣಶ್ಯಾಳ ಪಿಜಿಯ ಶ್ರೀ ಸಿದ್ಧಲಿಂಗ ಕೈವಲ್ಯಾಶ್ರಮದ ಅಧಿಪತಿ ಹಾಗೂ ಸಂಸ್ಥೆಯ ಅಧ್ಯಕ್ಷರಾದ ಪೂಜ್ಯ ಶ್ರೀ ನಿಜಗುಣದೇವ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಗ್ರಾಮೀಣ ಪ್ರದೇಶದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಲ್ಲರೂ ಶಿಕ್ಷಣವಂತರಾಗಿ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಜೀವನ ನಡೆಸಬೇಕೆಂಬ ಸದುದ್ದೇಶದಿಂದ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಿ ಬಡಮಕ್ಕಳಿಗೆ ಅಧ್ಯಾತ್ಮೀಕತೆಯ ಜೊತೆಗೆ ಒಳ್ಳೇಯ ಶಿಕ್ಷಣ ನೀಡುವಂತಹ ಕಾರ್ಯವನ್ನು ನಮ್ಮ ಶಿಕ್ಷಣ ಸಂಸ್ಥೆಯಿಂದ ಮಾಡುತ್ತಿದ್ದು ಇದಕ್ಕೆ ಗ್ರಾಮದ ಎಲ್ಲ ಗಣ್ಯರು ಮತ್ತು ಅಧಿಕಾರಿಗಳು ಸಹಕಾರ ನೀಡುತ್ತಿದ್ದಾರೆ. ಶಿಕ್ಷಣ ಸಂಸ್ಥೆಗೆ ಶಾಸಕರು, ಸಂಸದರು, ಸಚಿವರು, ಗಣ್ಯರು, ಅಧಿಕಾರಿಗಳ ಮಾರ್ಗದರ್ಶನ ಹಾಗೂ ಸಹಕಾರ ಅವಶ್ಯವಾಗಿದೆ. ಈಗಾಗಲೇ ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಮಕ್ಕಳಿಗೆ ನುರಿತ ಶಿಕ್ಷಕರಿಂದ ಶಿಕ್ಷಣ ನೀಡುತ್ತಿದ್ದು, ಸಂಸ್ಥೆಯ ವತಿಯಿಂದ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸುತ್ತಾ ಬಂದಿದ್ದು, ಪಾಲಕರು ತಮ್ಮ ಮಕ್ಕಳಿಗೆ ನಮ್ಮ ಸಂಸ್ಥೆಯಲ್ಲಿ ಶಿಕ್ಷಣದ ಸದುಪಯೋಗ ಪಡೆಯಬೇಕು ಎಂದು ತಿಳಿಸಿದರು.
ವೇದಿಕೆ ಮೇಲೆ ಬಸಗೌಡ ಪಾಟೀಲ, ಮುತ್ತೇಪ್ಪ ಜಲ್ಲಿ, ಮಹೇಶ ಚಿಕ್ಕೋಡಿ, ಶಾಮಾನಂದ ಪೂಜೇರಿ, ಪಟ್ಟಣ ಪಂಚಾಯತ ಅಧಿಕಾರಿ ವಿನಾಯಕ ಬಬಲೇಶ್ವರ ಸೇರಿದಂತೆ ಪಟ್ಟಣ ಪಂಚಾಯತ ಸದಸ್ಯರುಗಳಾದ ಹಣಮಂತ ಕಂದಾರಿ. ಸುರೇಶ ದೊಡ್ಡಲಿಂಗಣ್ಣವರ್. ರಮೇಶ್ ಸಂಪಗಾವಿ. ಭೀಮಶಿ ಮಳೆದವರ ಹಾಗೂ ಸಂಘ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.