ಸಮ್ಮೇದ ಶಿಖರ್ಜಿಯನ್ನು ಪ್ರವಾಸಿ ತಾಣವೆಂದು ಆದೇಶ ವಿರೋದಿಸಿ ಜೈನ ಸಮುದಾಯದ ಬೃಹತ್ ಪ್ರತಿಭಟನೆ.
ಜಾರ್ಖಂಡ ರಾಜ್ಯದಲ್ಲಿರುವ ಜೈನ ಧರ್ಮಿಯರ ಪವಿತ್ರ ತೀರ್ಥಕ್ಷೇತ್ರವಾದ ಸಮ್ಮೇದ ಶಿಖರ್ಜಿಯನ್ನು ಜಾರ್ಖಂಡ್ ಸರಕಾರ ಪ್ರವಾಸಿ ತಾಣವೆಂದು ಮಾರ್ಪಾಡು ಮಾಡುತ್ತಿರುವುದನ್ನು ವಿರೋಧಿಸಿ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಜೈನ ಸಮುದಾಯದ ವತಿಯಿಂದ ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಯಿತು,
ಸೋಮವಾರ ಬೆಳಿಗ್ಗೆ ಪಟ್ಟಣದ ಮಹಾವೀರ ವೃತ್ತದಲ್ಲಿ ಜಮಾಯಿಸಿದ ತಾಲೂಕಿನ ಸಾವಿರಾರು ಸಂಖ್ಯೆಯ ಜೈನ ಸಮುದಾಯದವರು ಒಂದುಗೂಡಿ ಶಿಖರ್ಜಿ ಬಚಾವೋ ಪ್ರತಿಭಟನಾ ರ‍್ಯಾಲಿಯನ್ನು, ಕೊಲ್ಲಾಪುರದ ಸ್ವಸ್ತಿ ಶ್ರೀ ಲಕ್ಷ್ಮೀ ಸೇನ ಭಟ್ಟಾರಕ ಮಹಾಸ್ವಾಮಿಜಿಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸಿ ಜಾರ್ಖಂಡ ಸರಕಾರ ತನ್ನ ಆದೇಶವನ್ನು ಕೂಡಲೇ ಹಿಂಪಡೆದು ಅದೊಂದು ಪವಿತ್ರ ತೀರ್ಥಕ್ಷೇತ್ರವೆಂದು ಸಂರಕ್ಷಿಸಬೇಕು ಎಂದು ಆಗ್ರಹಿಸಿ ತಹಸೀಲ್ದಾರ ಸುರೇಶ ಮುಂಜೆ ಅವರ ಮೂಲಕ ರಾಷ್ಟ್ರಪತಿ ಹಾಗೂ ಪ್ರಧಾನ ಮಂತ್ರಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ವೇಳೆ ಕೊಲ್ಲಾಪುರದ ಸ್ವಸ್ತಿ ಶ್ರೀ ಲಕ್ಷ್ಮೀ ಸೇನ ಭಟ್ಟಾರಕ ಮಹಾಸ್ವಾಮಿಜಿಗಳು ಮಾತನಾಡುತ್ತಾ ಈ ಕ್ಷೇತ್ರದಲ್ಲಿ 24 ತೀರ್ಥಂಕರರ ಪೈಕಿ 20 ತೀರ್ಥಂಕರರು ಮೋಕ್ಷವಾದ ಕ್ಷೇತ್ರವಾಗಿದೆ, ಇದಲ್ಲದೆ ಜೈನ ಮುನಿಗಳು ಮೋಕ್ಷಕ್ಕೆ ಹೋದ ಕ್ಷೇತ್ರವಾಗಿದೆ. ಇದನ್ನು ಪ್ರವಾಸಿ ತಾಣ ಮಾಡಬಾರದು ಎಂದು ಒಕ್ಕೋರಲಿನಿಂದ ಜೈನ ಸಮಾಜದ ಸಾವಿರಾರು ಶ್ರಾವಕ, ಶ್ರಾವಕಿಯರು, ಮುಖಂಡರು ಆಗ್ರಹವಾಗಿದೆ
ಜಾರ್ಖಂಡ ಸರಕಾರದ ವಿನಂತಿಯ ಮೇರೆಗೆ ಕೇಂದ್ರ ಸರಕಾರವೂ ಸಹ ಒಂದು ಆದೇಶ ಹೊರಡಿಸಿ ಇದೊಂದು ಪ್ರವಾಸಿ ಕ್ಷೇತ್ರ ಮಾಡಲು ಮುಂದಾಗಿರುವುದು ಖಂಡನೀಯ. ಜೈನ ಸಮಾಜ ಯಾವಾಗಲು ಅಹಿಂಸೆ ಮಾರ್ಗದಲ್ಲಿ ನಡೆಯುವ ಸಮಾಜವಾಗಿದೆ. ಒಂದು ವೇಳೆ ಪ್ರವಾಸಿ ತಾಣವಾದರೆ ಅಲ್ಲಿ ಮದ್ಯ, ಮಾಂಸ ಸೇವನೆ ಮತ್ತು ಇನ್ನಿತರ ಅನೈತಿಕ ಚಟುವಟಿಕೆಗಳು ನಡೆದು ತೀರ್ಥಕ್ಷೇತ್ರದ ಪಾವಿತ್ರ್ಯತೆ ಹಾಳಾಗಲಿದೆ. ಹಾಗಾಗಿ ಜಾರ್ಖಂಡ ಸರಕಾರ ಮತ್ತು ಕೇಂದ್ರ ಸರಕಾರ ತೀರ್ಥಕ್ಷೇತ್ರವನ್ನು ಪ್ರವಾಸಿ ತಾಣ ಮಾಡುವ ಯೋಜನೆಯನ್ನು ಕೈಬಿಟ್ಟು ತೀರ್ಥ ಕ್ಷೇತ್ರದ ಪಾವಿತ್ಯತೆ ಕಾಪಾಡಬೇಕೆಂದು ಆಗ್ರಹಿಸಿದರು
ಈ ಸಂದರ್ಭದಲ್ಲಿ ಜೈನ ಸಮಾಜದ ಮುಖಂಡರು ಹಾಗೂ ನ್ಯಾಯವಾದಿ ಕೆ ಎ ವನಜೋಳ ಮಾತನಾಡಿ ಜಾರ್ಖಂಡ್ ರಾಜ್ಯದಲ್ಲಿ ಜೈನ ಧರ್ಮೀಯರ ಪವಿತ್ರ ತೀರ್ಥಕ್ಷೇತ್ರವಾಗಿರುವ ಸಮ್ಮೇದ ಶಿಖರ್ಜಿಯನ್ನು ಅಲ್ಲಿನ ಸರ್ಕಾರ ಪ್ರವಾಸಿತಾಣವಾಗಿ ಘೋಷಿಸಿರುವುದು ಜೈನ ಸಮಾಜದ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದೆ ಜೈನ ಧರ್ಮದ ಪರಮ ಪಾವನ ಕ್ಷೇತ್ರವಾದ ಸಮ್ಮೇದ ಶಿಖರ್ಜಿ ಈ ಕ್ಷೇತ್ರದ ದರ್ಶನ ಮಾಡಿದರೆ ಸಕಲ ಪಾಪಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆ ಜೈನ ಧರ್ಮೀಯರಲ್ಲಿದೆ. ವಿಶ್ವದ ನಾನಾಭಾಗಗಳಿಂದ ಜೈನರು ಸಮ್ಮೇದ ಶಿಖರ್ಜಿಗೆ ಬರುತ್ತಾರೆ. ಇಂತಹ ಪವಿತ್ರ ಸ್ಥಳವನ್ನು ವ್ಯಾಪಾರ ಕೇಂದ್ರವನ್ನಾಗಿಸಲು ಹೊರಟಿರುವ ಜಾರ್ಖಂಡ್ ಸರ್ಕಾರದ ಕ್ರಮ ಖಂಡನೀಯ ಎಂದರು,
ಈ ವೇಳೆ ಇನ್ನೋರ್ವ ಸಮಾಜ ಮುಖಂಡರಾದ ಅರುಣ ಯಲಗುದ್ರಿ ಮಾತನಾಡಿ ವಫೇಲಾ ರಾಜವಂಶದ ವಿರಾಢವಲ ಮತ್ತು ವಿಶಾಲದೇವನ ಆಳ್ವಿಕೆಯಲ್ಲಿ ಪ್ರಧಾನಮಂತ್ರಿಯಾಗಿದ್ದ ವಾಸ್ತುಪಾಲನು ಸಮ್ಮೇದ ಶಿಖರ್ಜಿಯನ್ನು ಜೈನ ಧರ್ಮಿಯರ ತೀರ್ಥಕ್ಷೇತ್ರವೆಂದು ಘೋಷಿಸಿದ್ದಾನೆ. ಮೊಗಲ್ ದೊರೆ ಅಕ್ಬರ್ ಕೂಡ ಜೈನರ ತೀರ್ಥಕ್ಷೇತ್ರ ಎಂದು ಆದೇಶ ಹೊರಡಿಸಿದ್ದಾನೆ. ಬ್ರಿಟಿಷರೂ ಸಮ್ಮೇದ ಶಿಖರ್ಜಿಯನ್ನು ಜೈನರ ಪುಣ್ಯಕ್ಷೇತ್ರ ಎಂದಿದ್ದಾರೆ. ಆದರೆ ಸ್ವಾತಂತ್ರ್ಯ ನಂತರದ ಬಂದ ಸರ್ಕಾರಗಳು ಅಲ್ಪಸಂಖ್ಯಾತರಾದ ಜೈನರ ತೀರ್ಥಕ್ಷೇತ್ರದ ವಿಚಾರದಲ್ಲಿ ಅಭದ್ರತೆಯ ವಾತಾವರಣ ನಿರ್ಮಿಸುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು,
ಜೈನ ಸಮಾಜ ಮುಖಂಡರಾದ ಸಂಜಯ ನಾಡಗೌಡರ ಮಾತನಾಡಿ ಜೈನ ಸಮಾಜದ ಪುತಿರೋಧದ ನಡುವೆಯೂ ಜಾರ್ಖಂಡ್ ಸರ್ಕಾರ ಸುಮ್ಮೇದ ಶಿಖರ್ಜಿಯಂತಹ ಪವಿತ್ರ ಸ್ಥಳವನ್ನು ಪುವಾಸಿತಾಣವನ್ನಾಗಿ ಘೋಷಿಸಿ ಅಪವಿತ್ರಗೊಳಿಸುವ ಹುನ್ನಾರಕ್ಕೆ ಮುಂದಾಗಿದೆ. ಅನ್ಯ ಧರ್ಮೀಯರ ತೀರ್ಥಕ್ಷೇತ್ರಗಳ ಬಗ್ಗೆ ಸರ್ಕಾರಕ್ಕೆ ಇರುವ ಕಾಳಜಿ ಜೈನ ಧರ್ಮೀಯರ ಪವಿತ್ರ ಕ್ಷೇತ್ರಗಳ ಮೇಲೂ ಇರಬೇಕು ಎಂದು ಆಗ್ರಹಿಸಿದರು.
ಈ ವಿವಿಧ ರಾಜಕೀಯ ಮುಖಂಡರುಗಳು ಹಾಗೂ ವಿವಿಧ ಧರ್ಮಗಳ ಮುಖಂಡರುಗಳು ಜೈನ ಸಮಾಜದ ಪ್ರತಿಭಟನೆಯಲ್ಲಿ ಭಾಗಿಯಾಗುವ ಮೂಲಕ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು,
ಈ ಸಂದರ್ಭದಲ್ಲಿ ಭಾರಿ ಸಂಖ್ಯೆಯಲ್ಲಿ ತಾಲೂಕಿನ ಹಲವು ಗ್ರಾಮಗಳ ಮಾಹಿಳಾ ಮಂಡಳ ಸದಸ್ಯರು, ಸೇವಾದಳದ ಕಾರ್ಯಕರ್ತರು ಸೇರಿದಂತೆ ಸಮಸ್ತ ಜೈನ ಸಮಾಜದ ಶ್ರಾವಕ ಶ್ರಾವಕಿಯರು ಹಾಗೂ ಮುಖಂಡರು ಪ್ರತಿಭಟನಾ ರ‍್ಯಾಲಿಯಲ್ಲಿ ಭಾಗವಹಿಸಿದ್ದರು
ವರದಿ : *ವಿಲಾಸ ಕಾಂಬಳೆ,ಅಥಣಿ*