ಜನರ ಆಕ್ರೋಶಕ್ಕೆ ಮಣಿದ ಸರಕಾರ: ರಾಜ್ಯದಲ್ಲಿ ಕರ್ಪ್ಯೂ ವಾಪಸ್
ಬೆಂಗಳೂರು :
ಬ್ರಿಟನ್ ನಲ್ಲಿ ರೂಪಾಂತರ ಹೊಂದಿದ ನೂತನ ಕೋವಿಡ್ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಡಿಸೆಂಬರ್ 24ರಿಂದ 9 ದಿನಗಳ ಕಾಲ ರಾಜ್ಯಾದ್ಯಂತ ಹೇರಿದ್ದ ರಾತ್ರಿ ಕರ್ಫ್ಯೂ ಆದೇಶವನ್ನು ಜಾರಿಯಾಗುವ ಮೊದಲೆ ರಾಜ್ಯ ಸರ್ಕಾರ ವಾಪಸ್ ಪಡೆದಿದೆ.
ಇಂದು ರಾತ್ರಿಯಿಂದ ಜಾರಿಯಾಗಬೇಕಿದ್ದ ನೈಟ್ ಕರ್ಫ್ಯೂವನ್ನು ರಾಜ್ಯ ಸರ್ಕಾರ ಜಾರಿಯಾಗುವ ಮುನ್ನವೆ ವಾಪಸ್ ಪಡೆದಿದೆ. ಸಾರ್ವಜನಿಕರ ತೀವ್ರ ಆಕ್ರೋಶದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ. ಈ ಕುರಿತಂತೆ ಸಿಎಂ ಯಡಿಯೂರಪ್ಪ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಕೊರೋನಾ ಭೀತಿಯ ನಿಯಂತ್ರಣಕ್ಕಾಗಿ ನೈಟ್ ಕರ್ಪ್ಯೂ ಜಾರಿಗೊಳಿಸಲಾಗಿತ್ತು.
ಆದರೆ ಇಂತಹ ರಾತ್ರಿ ಕರ್ಪ್ಯೂ ಅಗತ್ಯವಿಲ್ಲ ಎನ್ನುವ ಅಭಿಪ್ರಾಯವನ್ನು ಅನೇಕರು ವ್ಯಕ್ತ ಪಡಿಸಿದ್ದಾರೆ. ಇದರಿಂದಾಗಿ ಇಂದು ರಾತ್ರಿಯಿಂದ ಜಾರಿಗೆ ಬರಲಿದ್ದಂತ ನೈಟ್ ಕರ್ಪ್ಯೂ ಆದೇಶವನ್ನು ವಾಪಾಸ್ ಪಡೆಯಲಾಗಿದೆ ಎಂಬುದಾಗಿ ತಿಳಿಸಿದ್ದಾರೆ.
ಡಿಸೆಂಬರ್ 24ರ ರಾತ್ರಿ 11ಗಂಟೆಯಿಂದ ಬೆಳಗ್ಗೆ 5ಗಂಟೆವರೆಗೆ 9 ದಿನಗಳ ಕಾಲ ರಾತ್ರಿ ಕರ್ಫ್ಯೂ ಜಾರಿಯಲ್ಲಿರಲಿದೆ ಎಂದು ರಾಜ್ಯ ಸರ್ಕಾರ ಬುಧವಾರ ಆದೇಶ ಹೊರಡಿಸಿತ್ತು.