ವಿದ್ಯುತ್ ದರ ಏರಿಕೆ ಹಾಗೂ ಕನಿಷ್ಟ ಶುಲ್ಕ ಹೆಚ್ಚಳ ಖಂಡಿಸಿ ಪ್ರತಿಭಟನೆ
ಚನ್ನಮ್ಮನ ಕಿತ್ತೂರು : ವಿದ್ಯುತ್ ದರ ಏರಿಕೆ ಹಾಗೂ ಕನಿಷ್ಟ ಶುಲ್ಕ ಹೆಚ್ಚಳವನ್ನು ಖಂಡಿಸಿ ಮಂಗಳವಾರ ಕಿತ್ತೂರಿನ ತಹಶೀಲ್ದಾರ ಹಾಗೂ ಹೆಸ್ಕಾಂ ಕಚೇರಿಗೆ ಉತ್ತರ ಕರ್ನಾಟಕ ವೃತ್ತಿ ಪರ ನೇಕಾರ ಹೋರಾಟ ಸಮಿತಿ ಸದಸ್ಯರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ನೇಕಾರಿಕೆ ಉದ್ಯೋಗ ಈಗ ಹಳಿ ತಪ್ಪಿದೆ ಮತ್ತು ಜವಳಿ ಉದ್ಯಮಕ್ಕೆ ನೆಲೆ ಸಿಗದಂತಾಗಿದೆ. ಒಂದೆಡೆ ನೇಕಾರರು ತಯಾರಿಸಿದ ಸೀರೆಗಳ ಬೇಡಿಕೆ ಕೂಡಾ ಕುಸಿದಿದೆ, ಸೀರೆಗಳ ಉತ್ಪಾದನೆಗೆ ಬೇಕಾಗುವ ಕಚ್ಚಾ ವಸ್ತುಗಳ ಬೆಲೆ ಗಗನಕ್ಕೇರಿದೆ ಹೀಗಾಗಿ ವಿದ್ಯುತ್ ದರ ಏರಿಕೆ ಹಾಗೂ ಕನಿಷ್ಟ ಶುಲ್ಕ ಹೆಚ್ಚಳದಿಂದ ನೇಕಾರಿಕೆ ಉದ್ಯೋಗದ ಮೇಲೆ ಬರೆ ಎಳೆದಂತಾಗಿದೆ ಎಂದು ಆಗ್ರಹಿಸಿದರು.
ಸರಕಾರ ಈ ಹಿಂದೆ ನಿಗದಿ ಪಡಿಸಿರುವ ದರ ಮುಂದೆವರೆಯಬೇಕು, ನೇಕಾರಿಕೆ ಉದ್ಯೋಗಕ್ಕೆ ಕನಿಷ್ಟ ಶುಲ್ಕ ಹಾಗೂ FAC ಶುಲ್ಕ ನ್ನು ರದ್ದು ಗೊಳಿಸಬೇಕು ಹಾಗೂ ಗೃಹ ಬಳಿಕೆ ವಿದ್ಯುತ್ ದರ ಗಗನಕ್ಕೇರಿದ್ದು ಕೂಡಲೇ ಕಡಿಮೆ ಆಗಬೇಕು. ನಮ್ಮ ಬೇಡಿಕೆಗಳು ಈಡೇರಿಸುವವರೆಗೂ ಯಾವುದೇ ಕಾರಣಕ್ಕೂ ನಾವುಗಳು ಬಿಲ್ ಪಾವತಿ ಮಾಡುವುದಿಲ್ಲ ಎಂದು ಇಲ್ಲಿಯ ನೇಕಾರ ನಿವಾಸಿಗಳು ತಹಶೀಲ್ದಾರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ.