*ಸಂಘದ ಶೇಅರುದಾರರ ಆರ್ಥಿಕ ಪ್ರಗತಿಗೆ ಯೋಜನೆಗಳನ್ನು ಮುಟ್ಟಿಸಿ; ಶಾಸಕ ಬಾಲಚಂದ್ರ ಜಾರಕಿಹೊಳಿ*
*ಮಸಗುಪ್ಪಿಯಲ್ಲಿ ವಿವಿಧೋದ್ದೇಶ ಪಿಕೆಪಿಎಸ್ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ*
*ಮೂಡಲಗಿ*- ಯಾವುದೇ ಒಂದು ಸಂಘ- ಸಂಸ್ಥೆಗಳು ಬೆಳೆಯಬೇಕಾದರೆ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗದವರು ಒಂದಾಗಿ ಕೆಲಸ ಮಾಡಬೇಕು. ಶೇರುದಾರರ ಆರ್ಥಿಕ ಮಟ್ಟವನ್ನು ಸುಧಾರಿಸುವ ಸಂಬಂಧ ಸರ್ಕಾರದಿಂದ ಸಿಗುವ ಯೋಜನೆಗಳನ್ನು ನೇರವಾಗಿ ಶೇರುದಾರರಿಗೆ ತಲುಪಿಸುವ ಕಾರ್ಯ ಮಾಡಬೇಕು ಎಂದು ಶಾಸಕ ಮತ್ತು ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಸಲಹೆ ಮಾಡಿದರು.
ತಾಲ್ಲೂಕಿನ ಮಸಗುಪ್ಪಿ ಗ್ರಾಮದಲ್ಲಿ ಈಚೆಗೆ ನಡೆದ ವಿವಿಧೊದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ರೈತರಿಗೆ ಸಿಗುವ ಎಲ್ಲ ಸವಲತ್ತುಗಳನ್ನು ಒದಗಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ರೈತ ಸಮುದಾಯದ ಅನುಕೂಲಕ್ಕಾಗಿ ಅನೇಕ ಯೋಜನೆಗಳಿವೆ. ಅವುಗಳನ್ನು ಜಾರಿ ಮಾಡುವ ಕೆಲಸ ಸಂಘದ ಮುಖ್ಯ ಕಾರ್ಯನಿರ್ವಾಹಕರ ಜವಾಬ್ದಾರಿಯಾಗಿದೆ. ಪಿಕೆಪಿಎಸ್ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡಲು ಬಿಡಿಸಿಸಿ ಬ್ಯಾಂಕಿನಲ್ಲಿ ಇರುವ ಪ್ರಯೋಜನಗಳನ್ನು ಪಡೆದುಕೊಳ್ಳುವಂತೆ ಅವರು ಹೇಳಿದರು.
ಇಲ್ಲಿನ ಎಲ್ಲ ಮುಖಂಡರು ಒಂದಾಗಿ ಒಗ್ಗಟ್ಟಾಗಿ ಕೆಲಸ ಮಾಡುತ್ತಿರುವುದು ಸಂತಸ ಮೂಡಿಸುತ್ತಿದೆ. ಹೀಗಾದಾಗ ಮಾತ್ರ ಸರ್ಕಾರದ ಯೋಜನೆಗಳನ್ನು ಪಡೆಯಲಿಕ್ಕೆ ಸಾಧ್ಯವಾಗುತ್ತದೆ. ಇಲ್ಲಿನ ಪ್ರಸಿದ್ಧ ಮಹಾಲಕ್ಷ್ಮಿ ದೇವತೆಯ ಅನುಗ್ರಹವು ಎಲ್ಲರಿಗೂ ಸಿಗಲಿ. ಈ ಮೂಲಕ ಸುಖ, ಶಾಂತಿ, ನೆಮ್ಮದಿ, ಸಮೃದ್ಧಿ ಪ್ರಾಪ್ತಿಯಾಗಲಿ. ದೇಶಕ್ಕೆ ಅನ್ನ ನೀಡುತ್ತಿರುವ ರೈತನ ಬದುಕು ಉಜ್ವಲಗೊಳ್ಳಲಿ ಎಂದು ದೇವಿಯಲ್ಲಿ ಪ್ರಾರ್ಥಿಸಿಕೊಂಡರು.
ಸುಣಧೋಳಿಯ ಶಿವಾನಂದ ಸ್ವಾಮಿಗಳು ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು.
ವೇದಿಕೆಯಲ್ಲಿ ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ(ಪ್ರ) ಎಸ್.ಜಿ.ಢವಳೇಶ್ವರ, ನಿರ್ದೇಶಕ ನೀಲಕಂಠ ಕಪ್ಪಲಗುದ್ದಿ, ಜಿ.ಪಂ. ಮಾಜಿ ಸದಸ್ಯ ರಾಜೇಂದ್ರ ಸಣ್ಣಕ್ಕಿ, ವಿವಿಧೋದ್ದೇಶ ಪಿಕೆಪಿಎಸ್ ಅಧ್ಯಕ್ಷ ರಾಜೇಶ ಕೊಳವಿ, ಗ್ರಾಮ ಪಂಚಾಯತಿ ಅಧ್ಯಕ್ಷ ಬಸವರಾಜ ಭುಜನ್ನವರ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸುಭಾಸ ಪಾಟೀಲ, ಮುಖಂಡರಾದ ಕಲ್ಲಪ್ಪ ಉಪ್ಪಾರ, ಸಂಜು ಹೊಸಕೋಟಿ, ರಾಮಣ್ಣ ಗಂಗಣ್ಣವರ, ಪತ್ರಯ್ಯ ಚರಂತಿಮಠ, ಕೆಂಚಪ್ಪ ಶಿಂತ್ರಿ, ಭರಮಪ್ಪ ಗಂಗಣ್ಣವರ, ವಿಠ್ಠಲ ಹೊಸೂರ, ಬಂಡುಸಾಬ ನದಾಫ, ಸಂಘದ ಮುಖ್ಯ ಕಾರ್ಯನಿರ್ವಾಹಕ ಫಕೀರಪ್ಪ ಸುಣಧೋಳಿ, ಬಿಡಿಸಿಸಿ ಬ್ಯಾಂಕಿನ ಅಧಿಕಾರಿಗಳು, ಪಿಕೆಪಿಎಸ್ ಸದಸ್ಯರು ಸೇರಿದಂತೆ ಹಲವು ಉಪಸ್ಥಿತರಿದ್ದರು.