Breaking News

ಪ್ರತಿ ಚುನಾವಣೆಯಲ್ಲಿಯೂ ಭಗೀರಥ ಉಪ್ಪಾರ ಸಮಾಜದವರು ನಮಗೆ ಸಂಪೂರ್ಣ ಬೆಂಬಲ ನೀಡಿ ಆಶೀರ್ವಾದಿಸಿದ್ದಾರೆ: ಬಾಲಚಂದ್ರ ಜಾರಕಿಹೋಳಿ

Spread the love

ಪ್ರತಿ ಚುನಾವಣೆಯಲ್ಲಿಯೂ ಭಗೀರಥ ಉಪ್ಪಾರ ಸಮಾಜದವರು ನಮಗೆ ಸಂಪೂರ್ಣ ಬೆಂಬಲ ನೀಡಿ ಆಶೀರ್ವಾದಿಸಿದ್ದಾರೆ: ಬಾಲಚಂದ್ರ ಜಾರಕಿಹೋಳಿ

ಮೂಡಲಗಿ: ಭಗೀರಥ ಉಪ್ಪಾರ ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಮುಂದಿನ ದಿನಗಳಲ್ಲಿ ಸಮಾಜದ ಎಲ್ಲ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನಿಸಲಾಗುವದು. ಸಮಾಜದ ಮಕ್ಕಳಿಗೆ ಶೈಕ್ಷಣಿಕ ಮತ್ತು ಉದ್ಯೋಗಕ್ಕಾಗಿ ಅವಶ್ಯವಿರುವ ಮೀಸಲಾತಿಯನ್ನು ನೀಡಲು ಎಲ್ಲ ರೀತಿಯ ಸಹಕಾರ ನೀಡುತ್ತೇನೆ ಎಂದು ಶಾಸಕ, ಅರಭಾವಿ ಬಿಜೆಪಿ ಅಭ್ಯರ್ಥಿ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ರವಿವಾರದಂದು ಸಂಜೆ ಪಟ್ಟಣದ ಸತ್ಯಭಾಮ ರುಕ್ಮೀಣಿ ಬಾಳಪ್ಪ ಹಂದಿಗುಂದ ಕಲ್ಯಾಣ ಮಂಟಪದಲ್ಲಿ ಜರುಗಿದ ಭಗೀರಥ ಉಪ್ಪಾರ ಸಮಾಜ ಭಾಂದವರ ಸಭೆಯಲ್ಲಿ ಮತಯಾಚಿಸಿ ಮಾತನಾಡಿದ ಅವರು, ಸಮಾಜಕ್ಕೆ ಎಸ್‌ಟಿ ಮೀಸಲಾತಿ ಸೌಲಭ್ಯ ಕಲ್ಪಿಸಿಕೊಡಲು ನನ್ನ ಹೋರಾಟ ನಿರಂತರವಾಗಿ ಮುಂದುವರೆಯಲಿದೆ ಎಂದು ತಿಳಿಸಿದರು.
ಬೇರೆಯವರಂತೆ ಕೇವಲ ಪತ್ರ ಬರೆದು ಕೈ ತೊಳೆದುಕೊಳ್ಳುವದಿಲ್ಲ. ಭಗೀರಥ ಉಪ್ಪಾರ ಹಾಗೂ ಹಾಲುಮತ ಕುರುಬ ಸಮಾಜದವರು ಈಗಾಗಲೇ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಎಸ್‌ಸಿ/ಎಸ್‌ಟಿ ಮೀಸಲಾತಿ ಸೌಲಭ್ಯವನ್ನು ನೀಡುವಂತೆ ಹೋರಾಡುತ್ತಿದ್ದಾರೆ. ಹಲವು ವರ್ಷಗಳಿಂದ ಸರಕಾರದ ಮಟ್ಟದಲ್ಲಿ ಒತ್ತಾಯ ಮಾಡುತ್ತಿದ್ದಾರೆ. ಇವರ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲ ನೀಡಿದ್ದೇನೆ. ಈ ಸಮಾಜಗಳಿಗೆ ಎಸ್‌ಟಿ ಸೌಲಭ್ಯ ದೊರಕಿಸಿಕೊಟ್ಟರೇ ರಾಜ್ಯದಲ್ಲಿ ಎಸ್‌ಟಿ ಸಮಾಜಕ್ಕೆ ಆನೆಬಲ ಬಂದಂತಾಗುತ್ತದೆ. ಹಾಲುಮತ, ಭಗೀರಥ ಸಮಾಜವು ಎಸ್‌ಟಿಗೆ ಸೇರ್ಪಡೆಗೊಂಡರೆ ಸುಮಾರು ಒಂದು ಕೋಟಿ ಜನಸಂಖ್ಯೆಯನ್ನು ನಾವು ಹೊಂದುತ್ತೇವೆ. ಇದರಿಂದ ರಾಜ್ಯ ರಾಜಕೀಯದಲ್ಲಿ ಉನ್ನತ ಸ್ಥಾನವನ್ನು ನಾವುಗಳು ಅಲಂಕರಿಸಬಹುದು. ಈ ಮೂರು ಸಮಾಜಗಳು ಒಂದಾದರೇ ಮುಖ್ಯಮಂತ್ರಿ ಸ್ಥಾನವನ್ನು ಸಹ ನಾವು ಪಡೆಯಬಹುದು ಎಂದು ಅವರು ಹೇಳಿದರು.
ಭಗೀರಥ ಉಪ್ಪಾರ ಸಮಾಜವು ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಸಬಲರಾಗಲು ಕಳೆದ ೨೦ವರ್ಷಗಳಿಂದ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ. ಸಮಾಜವು ಕೂಡ ದಿನಗಳು ಬದಲಾವಣೆಯಾದಂತೆ ಸುಧಾರಣೆಯಾಗುತ್ತಿದೆ. ಅನೇಕ ರಾಜಕೀಯ ಸ್ಥಾನಮಾನಗಳನ್ನು ಕೂಡ ದೊರಕಿಸಿಕೊಟ್ಟಿದ್ದೇನೆ. ಸರಕಾರದ ವಿವಿಧ ಹಂತದ ಕಾಮಗಾರಿಗಳ ಗುತ್ತಿಗೇಯನ್ನು ಈ ಭಾಂದವರಿಗೆ ಅತಿ ಹೆಚ್ಚಿನ ಪ್ರಮಾಣದಲ್ಲಿ ನೀಡಿ ಅವರ ಆರ್ಥಿಕ ಪರಿಸ್ಥಿತಿಯನ್ನು ಇಮ್ಮಡಿಗೊಳಿಸಿದ್ದೇನೆ. ಈ ಸಮಾಜವು ಸಹ ನಮ್ಮ ಬೆನ್ನಿಗಿದೆ. ಪ್ರತಿ ಚುನಾವಣೆಯಲ್ಲಿಯೂ ಭಗೀರಥ ಉಪ್ಪಾರ ಸಮಾಜದವರು ನಮಗೆ ತಮ್ಮ ಸಂಪೂರ್ಣ ಬೆಂಬಲ ನೀಡಿ ಆಶೀರ್ವಾದ ಮಾಡುತ್ತ ಬರುತ್ತಿದ್ದಾರೆ ಎಂದು ಹೇಳಿದರು.
ಕಳೆದ ೧೯ವರ್ಷಗಳಿಂದ ಅರಭಾಂವಿ ಕ್ಷೇತ್ರದ ಶಾಸಕನಾಗಿ ಜನಸೇವೆ ಮಾಡುತ್ತ ಬರುತ್ತಿದ್ದೇನೆ. ಎಲ್ಲ ಸಮುದಾಯಗಳು ಕೂಡ ನನ್ನ ಬೆನ್ನಿಗೆ ನಿಂತು ಆಶೀರ್ವಾದ ಮಾಡುತ್ತಿದ್ದಾರೆ. ರಾಜಕೀಯದಲ್ಲಿ ಜನಸೇವೆ ಮಾಡುವದು ದೊಡ್ಡ ಸವಾಲವೇ ಸರಿ. ಅಭಿವೃದ್ಧಿ ಕಾರ್ಯಗಳಲ್ಲಿ ಎಂದಿಗೂ ಸರಕಾರದ ಅನುದಾನ ನಿರೀಕ್ಷೆ ಮಾಡುವದಿಲ್ಲ. ಜನರಿಗೆ ಅಗತ್ಯವಿದ್ದಾಗ ಆ ಕ್ಷಣದಲ್ಲಿ ಅದು ಜನರಿಗೆ ಬೇಕಾದಾಗ ನಾನೇ ಸ್ವತಃ ದುಡ್ಡು ನೀಡಿ ಜನರ ಕಷ್ಟಗಳಿಗೆ ಸ್ಫಂಧನೆ ಮಾಡುತ್ತ ಬಂದಿದ್ದೇನೆ. ರಸ್ತೆಗಳಿಗೆ ಸ್ವಂತ ಅನುದಾನ ಕೊಟ್ಟಿದ್ದೇನೆ. ಜನರಿಗೆ ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಟ್ಟಿದ್ದೇನೆ. ನನ್ನ ಗೃಹ ಕಚೇರಿಗೆ ಬರುವವರು ಶಾಸಕರ ಕಾರ್ಯಾಲಯ ಅಂತಾ ಯಾರು ಬರುವದಿಲ್ಲ. ಇದು ನನ್ನ ಮನೆ ಅಂತಾ ತಿಳಿದುಕೊಂಡು ಎನ್‌ಎಸ್‌ಎಫ್‌ಗೆ ಬರುತ್ತಿರುತ್ತಾರೆ. ಅಷ್ಟೊಂದು ಬಾಂಧವ್ಯವನ್ನು ನಾವುಗಳು ಹೊಂದಿದ್ದೇವೆ ಎಂದು ತಿಳಿಸಿದರು.
ಈ ಚುನಾವಣೆಯಲ್ಲಿ ನನ್ನ ದಾಖಲೆಯ ಗೆಲುವಿಗೆ ಭಗೀರಥ ಉಪ್ಪಾರ ಸಮಾಜ ಬಾಂಧವರು ತಮ್ಮ ಒಗ್ಗಟ್ಟನ್ನು ಪ್ರದರ್ಶಿಸಿ ಸಂಪೂರ್ಣ ಬೆಂಬಲ ನೀಡುತ್ತಿದ್ದಾರೆ. ಅದಕ್ಕಾಗಿ ಸಮಾಜಕ್ಕೆ ಸದಾ ಋಣಿಯಾಗಿರುವೆ. ಈ ಬಾರಿ ಮೇ ೧೦ರಂದು ನಡೆಯುವ ಚುನಾವಣೆಯಲ್ಲಿ ಸಮಗ್ರ ಅಭಿವೃದ್ಧಿಗಾಗಿ ನನ್ನನ್ನು ಬೆಂಬಲಿಸಿ ಆಶೀರ್ವಾದ ಮಾಡುವಂತೆ ಕೋರಿದರು.
ಮುಂದಿನ ೨೦೨೮ರ ಸಾರ್ವತ್ರೀಕ ಚುನಾವಣೆಯಲ್ಲಿ ಕ್ಷೇತ್ರದ ಸೇವೆ ಮಾಡಲು ಪ್ರಭಲ ಜಾತಿಗಳ ವ್ಯಕ್ತಿಗಳ ಮಾನದಂಡದ ಮೇಲೆ ಸರ್ವಾನುಮತದಿಂದ ಅಭ್ಯರ್ಥಿಯನ್ನಾಗಿ ಮಾಡುವ ಸಂಕಲ್ಪ ಇದೆ. ಅದು ವೀರಶೈವ ಲಿಂಗಾಯತ ಸಮಾಜ, ಹಾಲುಮತ ಸಮಾಜ ಹಾಗೂ ಭಗೀರಥ ಉಪ್ಪಾರ ಸಮಾಜಗಳನ್ನು ಒಳಗೊಂಡು ಒಬ್ಬ ಪ್ರಭಲ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಚಿಂತನೆ ನನಗಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ವೇದಿಕೆಯಲ್ಲಿ ಹಿರಿಯ ನ್ಯಾಯವಾದಿ ಎಸ್ ಎಮ್ ಹತ್ತಿಕಟಗಿ, ಜಿಪಂ ಮಾಜಿ ಸದಸ್ಯರಾದ ವಿಠ್ಠಲ ಸವದತ್ತಿ, ಶಂಕರ ಬಿಲಕುಂದಿ, ಪಿಎಲ್‌ಡಿ ಬ್ಯಾಂಕ ಅಧ್ಯಕ್ಷ ಅಪ್ಪಯ್ಯಪ್ಪ ಬಡ್ನಿಂಗಗೋಳ, ಚಂದ್ರು ಬೆಳಗಲಿ, ರಾಮಣ್ಣ ಹಂದಿಗುಂದ, ಅಶೋಕ ಖಂಡ್ರಟ್ಟಿ, ಮುತ್ತೆಪ್ಪ ಕುಳ್ಳೂರ, ಬಸವಂತ ದಾಸನವರ, ಸಿದ್ದಪ್ಪ ಹಂಜಿ, ಹೊನ್ನಜ್ಜ ಕೋಳಿ, ಕಲ್ಲಪ್ಪ ಉಪ್ಪಾರ, ಅಡಿವೆಪ್ಪ ಚಿಪ್ಪಲಕಟ್ಟಿ, ಮುತ್ತೆಪ್ಪ ಜಲ್ಲಿ, ಸಾಬಪ್ಪ ಬಂಡ್ರೋಳಿ, ವೈ ಆರ್ ಪಾಟೀಲ, ಜಗದೀಶ ಬಂಡ್ರೊಳ್ಳಿ, ಮಾಳಪ್ಪ ಜಾಗನೂರ, ಶಂಕರ ಕಮತಿ,, ಪರಸಪ್ಪ ಬಬಲಿ, ಸಿದ್ದಪ್ಪ ಹಮ್ಮನವರ, ಶಿವಪ್ಪ ಮರ್ದಿ, ಭೀಮಶಿ ಅಂತರಗಟ್ಟಿ, ಅಶೋಕ ಮಕ್ಕಳಗೇರಿ,ಸಿಎ ಸೈದಪ್ಪ ಗದಾಡಿ,ರಾಮಣ್ಣ ಕಸ್ತೂರಿ, ಬಸು ಮಾಳೇದವರ, ಸೇರಿದಂತೆ ಅರಭಾವಿ ಕ್ಷೇತ್ರದ ಸಮಸ್ತ ಉಪ್ಪಾರ ಸಮಾಜ ಬಾಂಧವರು ಉಪಸ್ಥಿತರಿದ್ದರು.


Spread the love

About Fast9 News

Check Also

ಬಣಜಿಗರ ಕ್ಷೇಮಾಭಿವೃದ್ಧಿ ಸಂಘದ ನೂತನ ಅಧ್ಯಕ್ಷ ಚನ್ನಪ್ಪ ಕೌಜಲಗಿ, ಮಹಿಳಾ ಘಟಕ ಅಧ್ಯಕ್ಷೆ ಮಹಾದೇವಿ ಉಪ್ಪಿನ ಸರ್ವಾನುಮತದ ಆಯ್ಕೆ

Spread the loveಬಣಜಿಗರ ಕ್ಷೇಮಾಭಿವೃದ್ಧಿ ಸಂಘದ ನೂತನ ಅಧ್ಯಕ್ಷ ಚನ್ನಪ್ಪ ಕೌಜಲಗಿ, ಮಹಿಳಾ ಘಟಕ ಅಧ್ಯಕ್ಷೆ ಮಹಾದೇವಿ ಉಪ್ಪಿನ ಸರ್ವಾನುಮತದ …

Leave a Reply

Your email address will not be published. Required fields are marked *