Breaking News

ನನಗೇ ಮೊದಲ ಸ್ಥಾನ ನೀಡಲು ಮತದಾರರ ನಿರ್ಧಾರ

Spread the love

ನನಗೇ ಮೊದಲ ಸ್ಥಾನ ನೀಡಲು ಮತದಾರರ ನಿರ್ಧಾರ
—–
ಎರಡನೇ ಸ್ಥಾನಕ್ಕೆ ಯಾರು ಬರುತ್ತಾರೆಂದು ವಿರೋಧಿಗಳಿಬ್ಬರೂ ಪೈಪೋಟಿ ನಡೆಸಿದ್ದಾರೆ: ಬಾಲಚಂದ್ರ ಜಾರಕಿಹೊಳಿ

ಮೂಡಲಗಿ: ಕ್ಷೇತ್ರದ ಮತದಾರರು ಈಗಾಗಲೇ ನಿರ್ಧಾರ ಮಾಡಿದ್ದು, ನನಗೆ ಮೊದಲ ಸ್ಥಾನ ನೀಡಲಿದ್ದಾರೆ. ಆದರೆ, ವಿರೋಧ ಪಕ್ಷದ ಅಭ್ಯರ್ಥಿಗಳು ಎರಡನೇ ನಂಬರ್‌ಗೆ ಯಾರು ಬರುತ್ತಾರೆ ಎಂದು ಸ್ಪರ್ಧೆ ಮಾಡುತ್ತಿದ್ದಾರೆ. ಮೊದಲ ಸ್ಥಾನ ದೂರದ ಮಾತು. ನನ್ನನ್ನು ನೀವೇ ಮೊದಲ ಸ್ಥಾನದಲ್ಲಿ ಕೂರಿಸಿದ್ದಿರಿ. ನಾನು ಅದಕ್ಕೆ ಆಭಾರಿಯಾಗಿದ್ದೇನೆ. ತಾವೆಲ್ಲ ೨ನೇ ಸ್ಥಾನದವರ ಬಗ್ಗೆ ತಲೆಕೆಡಿಸಿಕೊಳ್ಳಬಾರದು. ಮೊದಲ ಸ್ಥಾನದಲ್ಲಿದ್ದವರಿಗೆ ಮತ್ತೊಮ್ಮೆ ಅವಕಾಶ ಕಲ್ಪಿಸಬೇಕೆಂದು ಅರಬಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಾಲಚಂದ್ರ ಜಾರಕಿಹೊಳಿ ಮನವಿ ಮಾಡಿದರು.
ಪಟ್ಟಣದಲ್ಲಿ ಸೋಮವಾರ ಅರಬಾವಿ ಮತಕ್ಷೇತ್ರದ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ವಿರೋಧಿಗಳು ಕರೆ ಮಾಡಿ ಮತ ಹಾಕುವಂತೆ ಕುಳಿತಲ್ಲೇ ಮನವಿ ಮಾಡುತ್ತಿದ್ದಾರೆ. ಆದರೆ, ಅವರು ಮುಂದಿನ ೫ ವರ್ಷಗಳಲ್ಲಿ ನಿಮ್ಮ ಕಷ್ಟ ಕಾಲದಲ್ಲಿ ನೆರವಾಗುತ್ತಾರಾ ಎಂದು ಪ್ರಶ್ನಿಸಿದ ಅವರು, ನಿಮ್ಮ ಮತ ತೆಗೆದುಕೊಂಡು ಅವರು ದೊಡ್ಡವರಾಗಲು ಹೊರಟಿದ್ದಾರೆ. ಹೀಗಾಗಿ ಎಲ್ಲರೂ ವಿಚಾರ ಮಾಡಿ, ಯಾರಿಗೆ ಮತ ಹಾಕಿದರೆ ತಮಗೆ, ತಮ್ಮ ಕ್ಷೇತ್ರಕ್ಕೆ ಅನುಕೂಲ ಎಂಬುವುದನ್ನು ನಿರ್ಧರಿಸಿ. ತಾವೆಲ್ಲ ಮೇ ೧೦ರಂದು ನಡೆಯುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ನನಗೇ ಮತ ಹಾಕಬೇಕು ಎಂದು ಮನವಿ ಮಾಡಿದರು.
ವಿರೋಧ ಪಕ್ಷದವರಿಗೆ ಈಗಾಗಲೇ ಸೋಲುತ್ತೇವೆಂದು ಗೊತ್ತಾಗಿ ಅಪಪ್ರಚಾರ ಮಾಡಲು ಮುಂದಾಗಿದ್ದರು. ಆದರೆ, ಅರಭಾವಿ ಮತಕ್ಷೇತ್ರ ಮತದಾರರು ಇಂತಹ ಅಪಪ್ರಚಾರಕ್ಕೆ ಕಿವಿಗೊಡಬಾರದು. ಮತಪ್ರಚಾರದಲ್ಲಿ ಹೆಚ್ಚು ಘಟಪ್ರಭಾ ಸಕ್ಕರೆ ಕಾರ್ಖಾನೆ ಬಗ್ಗೆ ಮಾತನಾಡಿದ್ದಾರೆ. ಆದರೆ, ೧೯೯೨ರಿಂದ ಘಟಪ್ರಭಾ ಸಕ್ಕರೆ ಕಾರ್ಖಾನೆ ಆಡಳಿತ ನಡೆಸುತ್ತ ಬಂದಿದ್ದು, ಇದರೊಂದಿಗೆ ಇದ್ದ ಸುಮಾರು ಕಾರ್ಖಾನೆಗಳು ಬಂದಾಗಿ ಕೀಲಿ ಹಾಕಿ ಖಾಸಗಿಯವರ ಕೈಯಲ್ಲಿ ಕೊಟ್ಟಿರುವುದು ನಿಮ್ಮ ಮುಂದೆಯೇ ಇದೆ. ವಿರೋಧ ಪಕ್ಷದವರು ಮಾಡುವ ಅಪಪ್ರಚಾರಕ್ಕೆ ಯಾರೂ ತಲೆ ಕೆಡಿಸಿಕೊಳ್ಳುವ ಅಗತ್ಯತೆ ಇಲ್ಲ ಎಂದರು.
ಮೇ ೧೩ರಂದು ಎಲ್ಲರೂ ಇತ್ತ ನೋಡಬೇಕು:
ಮೇ ೧೩ರಂದು ನಡೆಯುವ ಮತದಾನ ಎಣಿಕೆಯಂದು ಇಡೀ ಕರ್ನಾಟಕದ ಜನ ಅರಬಾವಿ ಕ್ಷೇತ್ರದತ್ತ ನೋಡುವಂತೆ ಮಾಡಬೇಕು. ಬಿಜೆಪಿ ಅಭ್ಯರ್ಥಿಗೆ ಇಷ್ಟೊಂದು ಮತ ಹಾಕಿ ಇತಿಹಾಸ ನಿರ್ಮಾಣ ಮಾಡಿದ್ದಾರೆಂದು ರಾಜ್ಯದ ಜನ ಇತ್ತ ಚಿತ್ತ ಹರಿಸಬೇಕು ಎಂದ ಅವರು, ಕೊರೋನಾ, ಪ್ರವಾಹ ಸೇರಿದಂತೆ ಕ್ಷೇತ್ರದಲ್ಲಿನ ಎಲ್ಲ ಜನರಿಗೂ ಸಹಾಯ ಮಾಡಿದ್ದೇನೆ. ಈ ಸಂದರ್ಭದಲ್ಲಿ ಯಾವುದೇ ಜಾತಿ ಧರ್ಮವನ್ನು ನೋಡಿಲ್ಲ. ನಮ್ಮವರು, ತಮ್ಮವರು ಎಂದು ನೋಡಿಲ್ಲ. ಎನ್‌ಎಸ್‌ಎಫ್ ಕಚೇರಿಗೆ ಬಂದಾಗ ಯಾರನ್ನೂ ಬರಿಗೈಲಿ ವಾಪಸ್ ಕಳಿಸಿಲ್ಲ. ಕೈಚಾಚಿ ಸಹಾಯ ಮಾಡಿದ್ದೇನೆ. ವಿರೋಧಿಗಳು ಯಾರಾದರೂ ಈ ರೀತಿಯ ಸಹಾಯ ಮಾಡಿದ್ದರೆ ಬಹಿರಂಗವಾಗಿ ಹೇಳಲಿ ಎಂದು ಸವಾಲು ಹಾಕಿದರು.
ವಿರೋಧಿಗಳು ಸದಾ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಆದರೆ, ಯಾರೂ ಅವರ ಮಾತನ್ನು ಕೇಳೋಕೆ ಹೋಗಬೇಡಿ. ಮೇ ೧೩ರಂದು ನಿಮ್ಮ ನಿಜರೂಪ ಹೊರಗೆ ಬರಲಿದೆ ಎಂದು ವಿರೋಧಿಗಳಿಗೆ ಟಾಂಗ್ ಕೊಟ್ಟ ಅವರು, ಮತದಾರರು ಈಗಾಗಲೇ ನಿರ್ಧಾರ ಮಾಡಿದ್ದು, ಬಿಜೆಪಿಯನ್ನು ಅತೀ ಹೆಚ್ಚು ಅಂತರದಿಂದ ಗೆಲ್ಲಿಸುವ ತೀರ್ಮಾನ ಕೈಗೊಂಡಿದ್ದಾರೆ ಆತ್ಮವಿಶ್ವಾಸದಿಂದ ನುಡಿದರು.
ನನ್ನನ್ನು ಗೆಲ್ಲಿಸುವ ಮೂಲಕ ಕ್ಷೇತ್ರದಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಅವಕಾಶ ಕಲ್ಪಿಸಬೇಕು. ಈ ಮೂಲಕ ನಾನು ಶಕ್ತಿಮೀರಿ ನಾನು ಕೆಲಸ ಮಾಡುತ್ತೇನೆ ಎಂದ ಅವರು, ರಾಜ್ಯದ ಅಭಿವೃದ್ಧಿ ನಿಟ್ಟಿನಲ್ಲಿ ಪ್ರಧಾನಿ ಆದಿಯಾಗಿ ಎಲ್ಲರೂ ಶ್ರಮಿಸುತ್ತಿದ್ದೇವೆ. ಈ ಮೂಲಕ ಕರ್ನಾಟಕದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದು ಕ್ಷೇತ್ರವನ್ನು, ರಾಜ್ಯವನ್ನು ಮತ್ತಷ್ಟು ಅಭಿವೃದ್ಧಿ ಮಾಡೋಣ ಎಂದರು.
ರಾಮಲಿಂಗೇಶ್ವರ ಏತ ನೀರಾವರಿ ಸೇರಿದಂತೆ ಹತ್ತಾರು ನೀರಾವರಿ ಯೋಜನೆಗಳನ್ನು ಜಾರಿಗೆ ತರಬೇಕೆಂದು ನಾವು ಎಂಎಲ್‌ಎ ಆಗುತ್ತಿದ್ದೇವೆ. ಅದನ್ನು ಬಿಟ್ಟು ಯಾರನ್ನೋ ಟೀಕೆ, ಟಿಪ್ಪಣೆ ಮಾಡಬೇಕು, ಅಪಪ್ರಚಾರ ಮಾಡಬೇಕೆಂದು ಚುನಾವಣೆ ಮಾಡುತ್ತಿಲ್ಲ ಎಂದು ವಿರೋಧ ಪಕ್ಷದವರಿಗೆ ಟಾಂಗ್ ನೀಡಿದರು.
ಕಳೆದ ೨೦೦೪ ರಿಂದ ಚುನಾವಣೆ ಕೊನೆಯ ಪ್ರಚಾರ ಸಭೆಯನ್ನು ಬಸವ ಮಂಟಪದಲ್ಲಿ ಮಾಡುತ್ತ ಬಂದಿದ್ದು, ಇಲ್ಲಿ ಯಾರು ಪ್ರಚಾರದ ಕೊನೆಯ ಸಭೆ ಮಾಡುತ್ತಾರೆ ಅವರಿಗೆ ಗೆಲುವು ಖಚಿತ ಎನ್ನುವುದು ಎಲ್ಲರಿಗೆ ಗೊತ್ತು. ಅದರಿಂದಲೇ ವಿರೋಧ ಪಕ್ಷದವರು ತಹಸೀಲ್ದಾರ್ ಕಚೇರಿಯಲ್ಲಿ ಈ ಮಂಟಪದಲ್ಲಿ ಕೊನೆಯ ಪ್ರಚಾರ ಸಭೆಗಾಗಿ ಅನುಮತಿ ಪಡೆದುಕೊಂಡಿದ್ದರು. ಆದರೆ, ಚುನಾವಣೆಯ ಕೊನೆ ದಿನ ಮೇ ೮ ಎಂದು ಗೊತ್ತಾಗಿದ್ದು, ವಿರೋಧ ಪಕ್ಷದವರು ಮೇ ೭ರಂದು ತೆಗೆದುಕೊಂಡಿದ್ದರು. ದೇವರ ದಯದಿಂದ ಮೇ ೮ರಂದು ಸಂಜೆ ೪ರಿಂದ ೬ರವರೆಗೆ ನಮಗೆ ಅನುಮತಿ ಸಿಕ್ಕಿದೆ ಎಂದರು.
ಬಹಳ ಕಡೆ ಹಳ್ಳಿಯಲ್ಲಿ ಪ್ರಚಾರ ಮಾಡಲು ಆಗಲಿಲ್ಲ. ಆದರೆ, ಜನವರಿ, ಫೆಬ್ರುವರಿ, ಮಾರ್ಚ್‌ನಲ್ಲಿ ಸತತವಾಗಿ ಎಲ್ಲ ಸಮಾಜದ ಸಭೆ ಮಾಡಿದ್ದೇವೆ. ಬಿಜೆಪಿ ಕಾರ್ಯಕ್ರಮ ಮಾಡಿದ್ದೇವೆ. ೩ ತಿಂಗಳಲ್ಲಿ ಸಾಕಷ್ಟು ಕಾರ್ಯಕ್ರಮ ಮಾಡಿ ಹೆಚ್ಚುಕಮ್ಮಿ ಪ್ರಚಾರವನ್ನು ಅಲ್ಲಿಗೆ ನಿಲ್ಲಿಸಿದ್ದೆವು. ಅದಾದ ನಂತರ ಎಲ್ಲ ಮುಖಂಡರನ್ನು ಕರೆದು ಸಭೆ ಮಾಡಿ ಬಿಸಿಲು ಹೆಚ್ಚು ಇರುವುದರಿಂದ ಸಭೆ ಸಮಾರಂಭಗಳನ್ನು ಮಾಡುವುದು ಬೇಡ ಎಂದು ನಿರ್ಧರಿಸಿ ಬೂತ್‌ಮಟ್ಟದಲ್ಲಿ ಕಮಿಟಿ ಮಾಡಿಕೊಂಡು ಮನೆ ಮನೆಗೆ ಹೋಗಿ ಪ್ರಚಾರ ಮುಂದುವರೆಸಿದ್ದೇವೆ ಎಂದು ಹೇಳಿದರು.
ಮುಖಂಡರ ಹಾಗೂ ಕಾರ್ಯಕರ್ತರ ಪ್ರಚಾರ ಮೂಲಕ ಮತಯಾಚನೆ ಮಾಡಲಾಗಿದೆ. ದಯಮಾಡಿ ಯಾರು ತಪ್ಪು ತಿಳಿದುಕೊಳ್ಳಬಾರದು. ಮೇ ೧೩ರ ನಂತರ ನಿಮ್ಮ ಹಳ್ಳಿಯಲ್ಲಿಯೇ ವಿಜಯೋತ್ಸವ ಆಚರಿಸಲಾಗುವುದು ಎಂದು ಭರವಸೆ ನೀಡಿದರು.
ವೀರಶೈವ ಲಿಂಗಾಯತ ಸೇರಿದಂತೆ ಸರ್ವ ಸಮುದಾಯದ ಜನರನ್ನು ತೆಗೆದುಕೊಂಡು ಕ್ಷೇತ್ರದ ಅಭಿವೃದ್ಧಿ ಮಾಡಲಾಗುವುದು. ಸರ್ವ ಜನಾಂಗದ ಶಾಂತಿ ತೋಟ ಅರಭಾವಿ ಮತಕ್ಷೇತ್ರ ಎನ್ನುವುದು ಮೇ.೧೩ರಂದು ಗೊತ್ತಾಗಲಿದೆ ಎಂದು ತಿಳಿಸಿದರು.
ಶೈಕ್ಷಣಿಕ ಕ್ಷೇತ್ರದಲ್ಲಿ ಹತ್ತಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ ಪರಿಣಾಮ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ರಾಜ್ಯದಲ್ಲಿ ಚಿಕ್ಕೋಡಿ ಶೈಕ್ಷಣಿಕ ವಿಭಾಗಕ್ಕೆ ೧೨ನೇ ಸ್ಥಾನ ಬಂದರೆ, ಇದೇ ವಿಭಾಗದಲ್ಲಿ ಮೂಡಲಗಿ ತಾಲೂಕಿಗೆ ಮೊದಲ ಸ್ಥಾನ ಬಂದಿದೆ ಎಂದು ಹೇಳಿದರು.
ಸಭೆಯಲ್ಲಿ ಸರ್ವೋತ್ತಮ ಜಾರಕಿಹೊಳಿ, ಮಹಾದೇವ ಶಕ್ಕಿ, ಹನಮಂತ ಗುಡ್ಲಮನಿ, ಬಸವಪ್ರಭು ನಿಡಗುಂದಿ, ರವಿ ಸೋನವಾಲ್ಕರ, ಸುಭಾಸ ಡವಳೇಶ್ವರ, ಬಾಬು ಸೋನವಾಲ್ಕರ, ಪ್ರಕಾಶ ಮಾದರ, ಅಪ್ಪಾಸಾಬ ಹೊಸಕೋಟೆ, ರಮೇಶ ಸಣ್ಣಕ್ಕಿ, ಅಜೀಜ ಡಾಂಗೆ, ಬಿ.ಎಚ್.ಸೋನವಾಲ್ಕರ, ರುದ್ರಪ್ಪ ವಾಲಿ, ಮಹಾದೇವ ಗೋಕಾಕ, ಕೆ.ಬಿ.ಪಾಟೀಲ, ರಾಮಣ್ಣಾ ಹಂದಿಗುಂದ, ಅನ್ವರ ನದಾಫ, ಸೇರಿದಂತೆ ಇತರರು ಇದ್ದರು.
——–
ಕೋಟ್….
ಜನರ ಕಷ್ಟ ಸುಖಗಳಿಗೆ ಸದಾ ನಾನು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಇನ್ನು ಮುಂದೆಯೂ ಮಾಡುತ್ತೇನೆ. ನಿಮ್ಮೆಲ್ಲರ ಆಶೀರ್ವಾದದಿಂದ ೬ನೇ ಬಾರಿ ಶಾಸಕನಾಗಿ ನಿಮ್ಮೆಲ್ಲರ ಸೇವೆ ಮಾಡುವುದಕ್ಕೆ ಅವಕಾಶ ಮಾಡಿಕೊಡಬೇಕು. ಕ್ಷೇತ್ರದಲ್ಲಿ ಇನ್ನೂ ಸಾಕಷ್ಟು ಅಭಿವೃದ್ಧಿ ಮಾಡಲು ತಾವೆಲ್ಲ ಅವಕಾಶ ನೀಡಬೇಕು. ಮೇ ೧೩ರಂದು ಕರ್ನಾಟಕದ ಜನತೆ ಅರಬಾವಿ ಕ್ಷೇತ್ರದತ್ತ ತಿರುಗಿ ನೋಡುವಂತೆ ಕ್ಷೇತ್ರದ ಮತದಾರರು ಮಾಡಲಿದ್ದಾರೆ ಎಂಬ ಅಚಲ ವಿಶ್ವಾಸ ನನ್ನಲ್ಲಿದೆ.
– ಬಾಲಚಂದ್ರ ಜಾರಕಿಹೊಳಿ, ಅರಬಾವಿ ಬಿಜೆಪಿ ಅಭ್ಯರ್ಥಿ


Spread the love

About Fast9 News

Check Also

ಶಾಸಕ ಬಾಲಚಂದ್ರ ಜಾರಕಿಹೋಳಿ ಇವರಿಂದ  ಡ್ರಟ್ಟಿ ಗ್ರಾಮದಲ್ಲಿ  ಅಂಗನವಾಡಿ ಕಟ್ಟಡಕ್ಕೆ ಗುದ್ದಲಿ ಪೂಜೆ

Spread the loveಶಾಸಕ ಬಾಲಚಂದ್ರ ಜಾರಕಿಹೋಳಿ ಇವರಿಂದ  ಡ್ರಟ್ಟಿ ಗ್ರಾಮದಲ್ಲಿ  ಅಂಗನವಾಡಿ ಕಟ್ಟಡಕ್ಕೆ ಗುದ್ದಲಿ ಪೂಜೆ ಗೋಕಾಕ- ಅಂಗನವಾಡಿ ಕಟ್ಟಡ …

Leave a Reply

Your email address will not be published. Required fields are marked *