ಸಮಾಜದ ಬದಲಾವಣೆಯಲ್ಲಿ ಶಿಕ್ಷಣವೊಂದೇ ಪ್ರಮುಖ ಅಸ್ತ್ರ: ಶಾಸಕ ಬಾಲಚಂದ್ರ ಜಾರಕಿಹೋಳಿ
ಗೋಕಾಕ- ಹಿಂದುಳಿದ ಹಣಬರ ಸಮಾಜವು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಮುಂದೆ ಬರಬೇಕಾದರೆ ವ್ಯವಸ್ಥಿತ ಸಂಘಟನೆ ಮುಖ್ಯವಾಗಿದೆ. ಈ ದಿಸೆಯಲ್ಲಿ ಸಮಾಜಕ್ಕೆ ಅಗತ್ಯವಿರುವ ಎಲ್ಲ ನೆರವನ್ನು ನೀಡಲು ಸಿದ್ಧ. ಸಮಾಜ ಬಾಂಧವರು ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡುವ ಮೂಲಕ ಸಮಾಜವು ಮುಖ್ಯವಾಹಿನಿಗೆ ಬರಬೇಕಾದ ಅಗತ್ಯವಿದೆ ಎಂದು ಅರಭಾವಿ ಶಾಸಕ ಮತ್ತು ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಬುಧವಾರದಂದು ನಗರದ ಮಹಾಲಕ್ಷ್ಮೀ ಸಭಾ ಭವನದಲ್ಲಿ ಹಣಬರ (ಯಾದವ) ಸಮಾಜ ಕ್ಷೇಮಾಭಿವೃದ್ಧಿ ಸಂಘದ ಗೋಕಾಕ ಮತ್ತು ಮೂಡಲಗಿ ತಾಲ್ಲೂಕು ಜಂಟಿಯಾಗಿ ಹಮ್ಮಿಕೊಂಡಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದ ಬದಲಾವಣೆಯಲ್ಲಿ ಶಿಕ್ಷಣವೊಂದೇ ಪ್ರಮುಖ ಅಸ್ತ್ರವಾಗಿದೆ ಎಂದು ತಿಳಿಸಿದರು.
ಗೋಕಾಕ ಮತ್ತು ಅರಭಾವಿ ಕ್ಷೇತ್ರಗಳಲ್ಲಿ ಜನತೆಯ ಆಶೀರ್ವಾದದಿಂದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ. ಎಲ್ಲ ಸಮುದಾಯದ ಜನರಿಗೂ ರಾಜಕೀಯ ಸ್ಥಾನಮಾನ ನೀಡಲಾಗಿದೆ. ಎಲ್ಲ ಸಮುದಾಯಗಳಿಗೆ ಆಧ್ಯತೆ ನೀಡುವ ಮೂಲಕ ಸರ್ವ ಸಮಾಜಗಳಿಗೆ ಗೌರವ ನೀಡಲಾಗುತ್ತಿದೆ. ಎಲ್ಲ ಸಮಾಜಗಳ ಪ್ರಗತಿಗಾಗಿ ನಮ್ಮ ಕುಟುಂಬ ಸದಾ ಸಿದ್ಧವಿದೆ ಎಂದು ಹೇಳಿದರು.
ಹಣಬರ ಸಮಾಜವು ನಮ್ಮ ಭಾಗದಲ್ಲಿ ಕಡಿಮೆ ಜನಸಂಖ್ಯೆಯನ್ನು ಹೊಂದಿದ್ದು, ಉತ್ತರ ಪ್ರದೇಶ, ಬಿಹಾರದಂತಹ ರಾಜ್ಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈಗಿರುವ ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ ಯಾದವ ಅವರು ಈ ಸಮಾಜಕ್ಕೆ ಸೇರಿರುವುದು ಹೆಮ್ಮೆ ಮತ್ತು ಅಭಿಮಾನ ಪಡಬೇಕಾಗಿದೆ. ಈ ಸಮಾಜವು ಎಲ್ಲ ಕ್ಷೇತ್ರಗಳಲ್ಲಿ ಮುಂಚೂಣಿಗೆ ಬರಬೇಕಿದ್ದು, ಸಮಾಜದ ಅಶೋತ್ತರಗಳನ್ನು ಈಡೇರಿಸಲು ನಮ್ಮ ಜಾರಕಿಹೊಳಿ ಕುಟುಂಬ ಸಿದ್ಧವಿದೆ ಎಂದು ತಿಳಿಸಿದರು.
ಕಳೆದ ಮೂರು ದಶಕಗಳಿಂದ ಅವಿಭಜಿತ ಗೋಕಾಕ ತಾಲ್ಲೂಕಿನ ಶ್ರೇಯೋಭಿವೃದ್ಧಿಗಾಗಿ ಜಾತ್ಯಾತೀತವಾಗಿ. ಪಕ್ಷಬೇಧ ಮರೆತು ಶ್ರಮಿಸುತ್ತಿದ್ದು, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯ ಕ್ಷೇತ್ರ ಸೇರಿದಂತೆ ನಾನಾ ಕ್ಷೇತ್ರಗಳಲ್ಲಿ ಸೇವೆ ಮಾಡಲಿಕ್ಕೆ ಎಲ್ಲ ಸಮುದಾಯದ ಜನರು ಸದಾ ನಮ್ಮೊಂದಿಗೆ ಕೈ ಜೋಡಿಸಿದ್ದು, ಇಂತಹ ಜನರನ್ನು ಪಡೆದಿರುವುದು ನಮ್ಮ ಪುಣ್ಯ, ಪ್ರಬಲ ಸಮುದಯಗಳ ಜತೆಗೆ ಹಿಂದುಳಿದ, ಅಲ್ಪ ಸಂಖ್ಯಾತರು, ಸಣ್ಣ ಹಾಗೂ ಅತೀ ಸಣ್ಣ ಸಮಾಜಗಳು ನಮ್ಮನ್ನು ಎಲ್ಲ ಸಂದರ್ಭಗಳಲ್ಲಿ ಕೈ ಹಿಡಿದಿದ್ದು, ಅವರ ಋಣ ನಮ್ಮ ಮೇಲಿದೆ ಎಂದು ಅಭಿಮಾನದ ಮಾತುಗಳನ್ನಾಡಿದರು.
ಈಗಾಗಲೇ ಬಹುತೇಕ ಸಮಾಜಗಳ ಸಮಾವೇಶಗಳನ್ನು ಸಂಘಟಿಸುವ ಮೂಲಕ ಸಮಾಜಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಎಲ್ಲ ಜಾತಿಗಳನ್ನು ಸಂಘಟಿಸಿ ಅವರಲ್ಲಿ ಒಗ್ಗಟ್ಟು, ಸಾಮರಸ್ಯ ತರುವ ಮೂಲಕ ಒಗ್ಗಟ್ಟಿನ ಮಂತ್ರಗಳನ್ನು ಜಪಿಸುತ್ತಿದ್ದೇವೆ. 12 ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ಪ್ರತಿಪಾದಿಸಿದ ಸಾಮಾಜಿಕ ನ್ಯಾಯದ ಅನುಭವ ಮಂಟಪದ ಮಾದರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇವೆ. ಪ್ರತಿ ಸಮಾಜಕ್ಕೂ ಅಧಿಕಾರ ಕಲ್ಪಿಸುವ ಮೂಲಕ ಅವರ ಪ್ರಗತಿಗೆ ಸದಾ ಸಿದ್ಧರಿದ್ದೇವೆ ಎಂದು ಅವರು ತಿಳಿಸಿದರು.
ವಿಷ್ಣುವಿನ ಹತ್ತು ಅವತಾರಗಳಲ್ಲಿ ಒಬ್ಬನಾಗಿರುವ ಶ್ರೀಕೃಷ್ಣನು ಪವಾಡಗಳು ಅಷ್ಟಿಷ್ಟಲ್ಲ. ಸಾಕಷ್ಟು ಲೀಲೆಗಳನ್ನು ಬಾಲ್ಯದ ದಿನಗಳಲ್ಲಿ ಮಾಡಿರುವ ನಿದರ್ಶನಗಳಿವೆ. ಭಾರತಾದ್ಯಂತ ಆಚರಿಸುವ ಪ್ರಮುಖ ಹಬ್ಬವಾಗಿರುವ ಕೃಷ್ಣ ಜನ್ಮಾಷ್ಟಮಿಯನ್ನು ಕೃಷ್ಣನು ಹುಟ್ಟಿದ ದಿನವನ್ನು ಗೋಕುಲಾಷ್ಟಮಿ ಅಥವಾ ಜನ್ಮಾಷ್ಟಮಿಯನ್ನು ಅತೀ ವೈಭವದಿಂದ ಆಚರಿಸಲಾಗುತ್ತಿದೆ. ಶ್ರಾವಣ ಮಾಸದಲ್ಲಿ ಬರುವ ಕೃಷ್ಣ ಪಕ್ಷದ ಅಷ್ಟಮಿ ಕೃಷ್ಣನು ಹುಟ್ಟಿದ ದಿನವಾಗಿದ್ದು, ಅಷ್ಟಮಿಯ ಮಧ್ಯರಾತ್ರಿಯ ಕಾರಾಗೃಹದಲ್ಲಿ ಕೃಷ್ಣನು ಹುಟ್ಟಿದನೆಂದು ಇತಿಹಾಸಗಳಿಂದ ತಿಳಿದಿದೆ. ಮಥುರಾ ಕೃಷ್ಣನ ಜನ್ಮ ಸ್ಥಳವಾಗಿದ್ದು, ದೇವಕಿಯು ಕೃಷ್ಣನ ತಾಯಿಯಾದರೂ ಯಶೋಧೆ ಕೃಷ್ಣನನ್ನು ಸಾಕು ಬೆಳೆಸಿದ ತಾಯಿ ಎಂದು ಪುರಾಣಗಳಲ್ಲಿ ಉಲ್ಲೇಖವಾಗಿದೆ. ಮಹಾಭಾರತದಲ್ಲಿ ಕೃಷ್ಣನು ಪ್ರಮುಖ ಪಾತ್ರಧಾರಿಯಾಗಿದ್ದು, ಕುರುಕ್ಷೇತ್ರದ ಯುದ್ಧದಲ್ಲಿ ಅರ್ಜುನನ ಸಾರಥಿಯಾಗಿ ಗುರುತಿಸಿಕೊಂಡು, ಯಾವ ಆಯುಧಗಳನ್ನೂ ಬಳಕೆ ಮಾಡದೇಯೇ ಕುರುಕ್ಷೇತ್ರ ಯುದ್ಧದಲ್ಲಿ ಪಾಂಡವರಿಗೆ ಜಯ ತಂದು ಕೊಡುತ್ತಾನೆ. ಶ್ರೀ ಕೃಷ್ಣನ ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ. ಎಂದು ಅವರು ಹೇಳಿದರು.
ಕಾರ್ಯಕ್ರಮದ ಸಾನಿಧ್ಯವನ್ನು ಚಿತ್ರದುರ್ಗದ ಹಣಬರ ಮಠದ ಯಾದವಾನಂದ ಮಹಾ ಸ್ವಾಮಿಗಳು ವಹಿಸಿದ್ದರು.ಜಯಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ಪ್ರಭಾ ಶುಗರ್ ನಿರ್ದೆಶಕ ಶಿವಲಿಂಗ ಪೂಜೇರಿ, ಸಿದಗೌಡ ಪಾಟೀಲ, ಬಿ.ಎಲ್. ಪಾಟೀಲ, ಡಾ. ಅರವಿಂದ ತೇಣಗಿ, ಶೀತಲ ಮುಂಡೆ, ಮಂಜುನಾಥ ಪಾಟೀಲ, ಕಸಾಪ ಅಧ್ಯಕ್ಷ ಡಾ. ಸಂಜಯ ಸಿಂಧಿಹಟ್ಟಿ, ಶ್ರೀಪತಿ ಗಣೇಶವಾಡಿ, ಸುರೇಶ ಜಾಧವ, ಸಿದ್ರಾಮ ದ್ಯಾಗಾನಟ್ಟಿ, ಸಿದ್ರಾಮ ಮೂಲಿಮನಿ, ರಮೇಶ ಪೂಜೇರಿ, ಮಾಯಪ್ಪ ಏಕಣಿ, ರಮೇಶ ಜುಪ್ರಿ, ಗೋಪಾಲ ಮಲ್ಲನವರ, ಈರಪ್ಪ ಸಂಗಪ್ಪಗೋಳ, ವಿಠ್ಠಲ ಶಿಂಧಿಹಟ್ಟಿ, ಕಾಡಪ್ಪ ಮಲ್ಲನ್ನವರ, ಗಂಗಾಧರ ಪಾಟೀಲ, ಲಗಮಣ್ಣಾ ಪಾಟೀಲ, ರಾಜು ಕರೆನ್ನವರ, ಭೀಮನಗೌಡ ಪಾಟೀಲ, ಕರೆಪ್ಪ ಪಾಟೀಲ, ಆನಂದ ಪಾಟೀಲ, ಆನಂದ ಪೂಜೇರಿ, ಮಲ್ಲಪ್ಪ ಬೋರನ್ನವರ, ಕೆಂಚಪ್ಪ ಬಾದನವರ, ಲಕ್ಷ್ಮಣ
ಹಮ್ಮನವರ, ರಾಮಣ್ಣಾ ಮಿಟ್ಟು, ಆನಂದ ಸೊಂಟಲಕ್ಕಪ್ಪನವರ, ಬಸವರಾಜ ಹಮ್ಮನ್ನವರ ಸೇರಿದಂತೆ ಸಮಾಜ ಬಾಂಧವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಗೋಕಾಕ ಮತ್ತು ಮೂಡಲಗಿ ತಾಲ್ಲೂಕುಗಳ ಹಣಬರ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು.
ಇದಕ್ಕೂ ಮುನ್ನ ನಡೆದ ಕುಂಭಮೇಳಕ್ಕೆ ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರು ಚಾಲನೆ ನೀಡಿದರು.