Breaking News

ಕರ್ನಾಟಕವು ಸೌಹಾರ್ದತೆಗೆ ಹೆಸರುವಾಸಿಯಾದ ಹೆಮ್ಮೆಯ ನಾಡು- ಕೆ.ಎಂ.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೋಳಿ

Spread the love

*ಕರ್ನಾಟಕವು ಸೌಹಾರ್ದತೆಗೆ ಹೆಸರುವಾಸಿಯಾದ ಹೆಮ್ಮೆಯ ನಾಡು- ಕೆ.ಎಂ.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೋಳಿ

*ಮೂಡಲಗಿ*: ಜಾತಿ, ಧರ್ಮ, ಮೇಲು, ಕೀಳು ಭಾವನೆಗಳು ತೊರೆದು ಕರ್ನಾಟಕವು ಸೌಹಾರ್ದತೆಗೆ ಹೆಸರುವಾಸಿಯಾದ ಹೆಮ್ಮೆಯ ನಾಡು ಎಂದು ಕೆ.ಎಂ.ಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಮೂಡಲಗಿಯಲ್ಲಿ ತಾಲ್ಲೂಕು ರಾಜ್ಯೋತ್ಸವ ಸಮಿತಿಯಿಂದ ಗುರುವಾರ ಆಚರಿಸಿದ 67ನೇ ಕರ್ನಾಟಕ ರಾಜ್ಯೋತ್ಸವದ ಬೃಹತ್ ಮೆರವಣಿಗೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕನ್ನಡ ನಾಡಿನ ಪ್ರತಿಯೊಬ್ಬರೂ ಕನ್ನಡ ಭಾಷೆ, ನಾಡು, ನುಡಿಯ ಬಗ್ಗೆ ಅಭಿಮಾನ ಗೌರವವನ್ನು ಹೊಂದಿರಬೇಕು ಎಂದರು.
ಮೂಡಲಗಿಯ ರಾಜ್ಯೋತ್ಸವದ ಮೆರವಣಿಗೆಯು ಮೈಸೂರು ದಸರಾ ಉತ್ಸವವನ್ನು ನೆನಪಿಸುವ ರೀತಿಯಲ್ಲಿ ಅದ್ದೂರಿಯಾಗಿ ಜರುಗಿದ್ದು, ಇದು ಮೂಡಲಗಿಯ ಇತಿಹಾಸದಲ್ಲಿ ಅದ್ದೂರಿಯ ಮೆರವಣಿಗೆಯಾಗಿದೆ ಎಂದು ಹೇಳಿದರು.
ನೂರಾರು ವರ್ಷ ಭಾರತವನ್ನು ಆಳಿದ್ದ ಬ್ರಿಟನ್ ದೇಶಕ್ಕೆ ರಿಷಿ ಸುನಕ್ ಪ್ರಧಾನಿಯಾಗಿದ್ದು ಅವರು ಕನ್ನಡ ನಾಡಿನ ಅಳಿಯನಾಗಿದ್ದರೆ, ಕೆನಡಾ ಸಂಸತ್ತಿನಲ್ಲಿ ಕನ್ನಡದಲ್ಲಿ ಭಾಷಣ ಮಾಡಿರುವ ಚಂದ್ರ ಆರ್ಯ್ ಅವರು ಕರ್ನಾಟಕ ಮೂಲದವರಾಗಿದ್ದು ಚಾರಿತ್ರಿಕ ಇತಿಹಾಸ ನಿರ್ಮಿಸಿದ್ದಾರೆ. ಹೀಗೆ ಕನ್ನಡದ ಕಂಪು ಇಡೀ ವಿಶ್ವವ್ಯಾಪ್ತಿಯಲ್ಲಿ ಹರಡಿರುವ ಬಗ್ಗೆ ನಾವೆಲ್ಲರೂ ಅಭಿಮಾನ ಹಾಗೂ ಹೆಮ್ಮೆ ಪಡಬೇಕು ಎಂದರು.
ಕೆಎಂಎಫ್ ಉತ್ಪನ್ನಗಳಿಗೆ ಅಂಬಾಸಿಡರ್ ಆಗಿದ್ದ ಅಪ್ಪು ಭಾವ ಚಿತ್ರವನ್ನು ಹಿಡಿದು ಸಂಭ್ರಮಿಸಿದ ಅವರು, ಅಪ್ಪು ಹೆಸರಲ್ಲಿ ಇಷ್ಟರಲ್ಲಿಯೇ ಕೆಎಂಎಫ್ ಉತ್ಪನ್ನವನ್ನು ಬಿಡುಗಡೆ ಮಾಡುವ ಮೂಲಕ ಕೆಎಂಎಫ್‍ವು ಅವರನ್ನು ಸದಾ ಸ್ಮರಿಸುತ್ತದೆ. ಅರಭಾವಿ ಕ್ಷೇತ್ರದ ಮೂಡಲಗಿಯಲ್ಲಿ ಮಾಡಿರುವ ರಾಜ್ಯೋತ್ಸವ ಕಾರ್ಯಕ್ರಮವನ್ನು ‘ಅಪ್ಪು’ಗೆ ಸಮರ್ಪಣೆ ಮಾಡುತ್ತಿದ್ದೇವೆ. ಅಪ್ಪು ಅಗಲಿ ಒಂದು ವರ್ಷ ಗತಿಸಿದರೂ ಅವರ ಜನಪ್ರಿಯತೆ ಇನ್ನೂ ಕಡಿಮೆಯಾಗಿಲ್ಲ. ಇಂತಹ ಮೇರು ನಟ ಮತ್ತೆ ಯಾವತ್ತೂ ಹುಟ್ಟಿ ಬರಲ್ಲ ಎಂದು ಕೆ.ಎಂ.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ರತ್ನ ಡಾ:ಪುನೀತ್ ರಾಜಕುಮಾರ ಅವರ ಭಾವಚಿತ್ರವನ್ನು ಅನಾವರಣಗೊಸುತ್ತಿದ್ದಂತೆ *ಬೊಂಬೆ ಹೇಳುತೈತೆ, ಮತ್ತೆ ಹೇಳುತೈತೆ ನೀನೇ ರಾಜಕುಮಾರ* ಹಾಡು ಸೇರಿದ ಜನರಲ್ಲಿ ಪ್ರತಿಧ್ವನಿಸಿತು.

ಮೆರವಣಿಗೆಯಲ್ಲಿ ಭಾಗವಹಿಸಿದ್ದ ದತ್ತಾತ್ರೇಯಬೋಧ ಸ್ವಾಮೀಜಿಯವರು ಮಾತನಾಡಿ, ಜನಮನ ಸೂರೆಗೊಳಿಸುವಂತ ರಾಜ್ಯೋತ್ಸವದ ಮೆರವಣಿಗೆಯು ತಾಲ್ಲೂಕಿನ ಜನರಲ್ಲಿ ಕನ್ನಡ ಅಭಿಮಾನವನ್ನು ಉಕ್ಕಿಸಿದೆ ಎಂದು ಶ್ಲಾಘಿಸಿದರು. ಪ್ರತಿಯೊಬ್ಬರೂ ಕನ್ನಡಾಭಿಮಾನವನ್ನು ಬೆಳೆಸಿಕೊಳ್ಳುವಂತೆ ಕರೆ ನೀಡಿದರು.

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ನಾಗನೂರ ಪಟ್ಟಣದಿಂದ ನೂರಕ್ಕೂ ಅಧಿಕ ವಾಹನಗಳಲ್ಲಿ ಜಯಘೋಷಗಳೊಂದಿಗೆ ಮೆರವಣಿಗೆ ಪ್ರಾರಂಭದ ಸ್ಥಳವಾದ ಎಸ್‍ಎಸ್‍ಆರ್ ಕಾಲೇಜುವರೆಗೆ ಬರಮಾಡಿಕೊಂಡರು.
*ಕಣ್ಮನ ಸೆಳೆದ ಮೆರವಣಿಗೆ:* ಎಲ್ಲೆಡೆ ಕನ್ನಡ ಬಾವುಟ ಹಾರಾಟ, ಮುಗಿಲು ಮುಟ್ಟುವ ಕನ್ನಡ ಪರ ಘೋಷಣೆಗಳು, ಮೂಡಲಗಿ ತಾಲ್ಲೂಕಿನ ಕಲಾ ಸಂಸ್ಕøತಿಯನ್ನು ಬಿಂಬಿಸುವ ತಾಲ್ಲೂಕಿನ ವಿವಿಧ ಕಲಾ ತಂಡಗಳಿಂದ ಕರ್ನಾಟಕ ರಜ್ಯೋತ್ಸವ ಆಚರಣೆಯ ಮೆರವಣಿಗೆಯು ಕಳೆಕಟ್ಟಿತ್ತು.
ಎಸ್‍ಎಸ್‍ಆರ್ ಕಾಲೇಜುದಿಂದ ಪ್ರಾರಂಭಗೊಂಡ ನಾಡದೇವಿ ಭುವನೇಶ್ವರಿ ಭಾವಚಿತ್ರದ ಮೆರವಣಿಗೆಯು ಕಣ್ಮನ ಸೆಳೆಯಿತು. ಅಲಂಕೃತ ಆನೆ, ಕುದರೆ ಹಾಗೂ ಒಂಟಿಗಳು ಮೆರವಣಿಗೆಗೆ ವಿಶೇಷ ಮೆರಗು ನೀಡಿದ್ದವು. ಕಲ್ಲೋಳಿಯ ಪ್ರಸಿದ್ದ ಸಂಬಾಳ ವಾದ್ಯ, ಉದಗಟ್ಟಿಯ ದಟ್ಟಿ ಕುಣಿತ, ಜೋಕಾನಟ್ಟಿಯ ಯುವತಿಯರ ಡೊಳ್ಳು ಕುಣಿತ, ಮೂಡಲಗಿಯ ಸಿದ್ದಿ ಸೋಗು, ಕೋಲಾಟ ಮೂಡಲಗಿ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಬಂದಿದ್ದ ಜಾನಪದ ಕಲಾ ತಂಡಗಳು, ನಾಡು, ನುಡಿಯನ್ನು ಬಿಂಬಿಸುವ ಶಾಲಾ ಮಕ್ಕಳ ರೂಪಕಗಳು ಮೈಲುದ್ದದ ಮೆರವಣಿಗೆಗೆ ಕಳೆಕಟ್ಟಿತ್ತು.
ಮೂಡಲಗಿ ಪಟ್ಟಣ ಸೇರಿದಂತೆ ತಾಲ್ಲೂಕಿನ ಎಲ್ಲ ಗ್ರಾಮಗಳ ಜನಪ್ರತಿನಿದಿಗಳು, ಸಂಘ, ಸಂಸ್ಥೆಗಳ ಪದಾಧಿಕಾರಿಗಳು, ಕನ್ನಡ ಪರ ಸಂಘಟನೆಗಳು ಭಾಗವಹಿಸಿದ್ದರು.


Spread the love

About Fast9 News

Check Also

ಆಸರೆ ಇಲ್ಲದವನಿಗೆ ಆಸರೆಯಾದ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ.

Spread the loveಆಸರೆ ಇಲ್ಲದವನಿಗೆ ಆಸರೆಯಾದ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ. ಗೋಕಾಕ :ವೃದ್ದಾಪ್ಪದಲ್ಲಿ ಅಶಕ್ತನಾಗಿ,ದುಡಿಯಲು ಆಗದ ಕಾರಣ ಅವರನ್ನು ನೋಡಿಕೊಳ್ಳಲು …

Leave a Reply

Your email address will not be published. Required fields are marked *