ಕರವೇ ನಾರಾಯಣ ಗೌಡರ ಬಂಧಿಸಿರುವ ಹಿನ್ನೆಲೆ ಕನ್ನಡ ಸೇನೆ ತೀವ್ರ ಖಂಡನೆ
ಘಟಪ್ರಭಾ : ಕನ್ನಡ ನಾಮಫಲಕಗಳ ವಿರುದ್ಧದ ಪ್ರತಿಭಟನೆ ಸಂಬಂಧದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರನ್ನು ಪೊಲೀಸರು ವಿನಾಕರಣ ಬಂಧನಕ್ಕೆ ಒಳಪಡಿಸಿ ನ್ಯಾಯಾಂಗ ಬಂಧನಕ್ಕೆ ಕಾರಣವಾಗಿರುವುದು ಖಂಡನೀಯ ಎಂದು ಕನ್ನಡ ಸೇನೆ ತಾಲೂಕಾಧ್ಯಕ್ಷ ಅಪ್ಪಾಸಾಬ ಮುಲ್ಲಾ ತಿಳಿಸಿದ್ದಾರೆ.
ಈ ಪ್ರತಿಭಟನೆಯು ವಾಣಿಜ್ಯೋದ್ಯಮ, ಬ್ಯಾಂಕ್, ಅಂಗಡಿಗಳು, ಮಾಲ್‍ಗಳು, ಹೋಟಲ್ ಮೊದಲಾದ ಸಂಸ್ಥೆಗಳಲ್ಲಿ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಭಾಷೆಯೇ ಇರಬೇಕು ಎನ್ನುವ ರಾಜ್ಯ ಸರಕಾರದ ನಿಯಮದ ಜಾರಿಗಾಗಿ ಒತ್ತಾಯಿಸಿದ್ದು, ಕಾನೂನು ಸಮ್ಮತವೇ ಆಗಿದೆ. ಈ ಆಂದೋಲನದ ಕುರಿತು ಟಿ.ಎ.ನಾರಾಯಣಗೌಡರು ಸಾಕಷ್ಟು ಮುಂಚೆಯೇ ಸಾಮಾಜಿಕ ಜಾಲತಾಣ ಕರಪತ್ರ, ಜಾಹಿರಾತುಗಳ ಮೂಲಕ ಪ್ರಕಟಣೆಯನ್ನು ನೀಡಿದ್ದರು. ಹೀಗಿದ್ದರೂ ಅದನ್ನು ಗಂಭೀರವಾಗಿ ಪರಿಗಣಿಸದೆ ಪ್ರತಿಭಟನೆ ಅನಿವಾರ್ಯತೆಗೆ ಸಿಲುಕಿಸಿ ಈಗ ಬಂಧನಕ್ಕೆ ಕಾರಣವಾಗಿರುವುದು ಕನ್ನಡ ನಾಮಫಲಕಗಳನ್ನು ಹಾಕದೆ ಇದ್ದರೂ ನಡೆಯುತ್ತದೆ ಎನ್ನುವ ಪರಭಾಷಿಕರ ಉಡಾಫೆ ಧೋರಣೆಯನ್ನು ಬೆಂಬಲಿಸಿದಂತಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರಕಾರ ಮತ್ತು ಪೊಲೀಸರು ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆಕಾರರ ವಿಷಯದಲ್ಲಿ
ಸಂವೇದನಾಶೀಲವಾಗಿ ವರ್ತಿಸಬಹುದಾಗಿತ್ತು.
ಆದರೆ ಕರವೇ ರಾಜ್ಯ ಅಧ್ಯಕ್ಷ ಟಿ.ಎ.ನಾರಾಯಣಗೌಡ ಸೇರಿದಂತೆ ಉಳಿದ 38 ಕಾರ್ಯಕರ್ತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಅವರೆಲ್ಲರನ್ನೂ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ.
ಸರಕಾರವು ಟಿ.ಎ.ನಾರಾಯಣ ಗೌಡರನ್ನು ಮತ್ತು ಬಂಧಿತ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರನ್ನು ಈ ಕೂಡಲೇ ಬೇಷರತ್ತಾಗಿ ಬಿಡುಗಡೆ ಮಾಡಬೇಕು ಎಂದು ಅಪ್ಪಾಸಾಬ ಮುಲ್ಲಾ ಪತ್ರಿಕಾ ಪ್ರಕಟನೆ ಮೂಲಕ ಆಗ್ರಹಿಸಿದ್ದಾರೆ.