ಸಾರಿಗೆ ಸಚಿವರಿಗೆ ಒಳ್ಳೆಯ ಬುದ್ದಿ ನೀಡಲೆಂದು ದೇವರ ಮೊರೆ ಹೋದ ಗೋಕಾಕ್ ಸಾರಿಗೆ ನೌಕರರು
ಆರನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಸಾರಿಗೆ ನೌಕರರ ಹೋರಾಟ 9ನೇ ದಿನಕ್ಕೆ ಕಾಲಿಟ್ಟಿದೆ. ಸಧ್ಯ ತಮ್ಮ ಬೇಡಿಕೆ ಈಡೇರಿಸುವ ಸಲುವಾಗಿ ಸಾರಿಗೆ ಸಿಬ್ಬಂದಿ ದೇವರ ಮೊರೆ ಹೋಗಿರುವ ಘಟನೆ ಗೋಕಾಕ್‍ನಲ್ಲಿ ನಡೆದಿದೆ.
ಕಳೆದ 8 ದಿನಗಳಿಂದ 6ನೇ ವೇತನ ಆಯೋಗ ಜಾರಿಗೊಳಿಸುವಂತೆ ಆಗ್ರಹಿಸಿ ರಾಜ್ಯಾಧ್ಯಂತ ಸಾರಿಗೆ ಸಂಚಾರ ಬಂದ್ ಮಾಡಿ ಸಾರಿಗೆ ನೌಕರರು ಪ್ರತಿಭಟನೆ ನಡೆಸುತ್ತಿದ್ದಾರೆ. ಗುರುವಾರ ಪ್ರತಿಭಟನೆ 9ನೇ ದಿನಕ್ಕೆ ಕಾಲಿಟ್ಟಿರುವ ಹಿನ್ನೆಲೆ ಗೋಕಾಕ್ ಡಿಪೋದಲ್ಲಿ ಚಾಲಕ, ನಿರ್ವಾಹಕರಾಗಿ ಕಾರ್ಯನಿರ್ವಹಿಸುತ್ತಿರುವ ಸುಮಾರು 50ಕ್ಕೂ ಹೆಚ್ಚು ಸಾರಿಗೆ ನೌಕರರು ಗೋಕಾಕದಲ್ಲಿರುವ ಲಕ್ಷ್ಮೀ ದೇವಸ್ಥಾನಕ್ಕೆ ತೆರಳಿ ಮೇಣದ ಬತ್ತಿ ಹಚ್ಚಿ ನಮ್ಮ ಬೇಡಿಕೆ ಈಡೇರಿಸುವಂತೆ ದೇವಿಯಲ್ಲಿ ಪ್ರಾರ್ಥಿಸಿದರು.
ಸಾರಿಗೆ ನೌಕರರ ಕುಟುಂಬಗಳು ಕತ್ತಲಲ್ಲಿವೆ ಸರಕಾರಕ್ಕೆ ಕಾಣುತ್ತಿಲ್ಲ ಅದು ಬೆಳಕಿನಲ್ಲಿದೆ. ಸರಕಾರ ಸಾರಿಗೆ ನೌಕರರ ಬಾಳಲ್ಲಿ ಬೆಳಕು ಚೆಲ್ಲಲಿ ಎಂದು ಸರಕಾರಕ್ಕೆ ಮುಖ್ಯಮಂತ್ರಿಯವರಿಗೆ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿಯವರಿಗೆ ನಮ್ಮ ಬೇಡಿಕೆ ಈಡೇರಿಸುವಂತೆ ಲಕ್ಷ್ಮೀ ದೇವಿ ಒಳ್ಳೆಯ ಬುದ್ದಿ ನೀಡಲಿ ಎಂದು ಕೇಳಿಕೊಳ್ಳುತ್ತಿದ್ದೇವೆ ಎಂದು ಸಾರಿಗೆ ಸಿಬ್ಬಂದಿ ಹೇಳಿದರು.
ಒಟ್ಟಾರೆ ವಿಭಿನ್ನ ಪ್ರತಿಭಟನೆ ಮೂಲಕ ರಾಜ್ಯ ಸರ್ಕಾರದ ಗಮನ ಸೆಳೆಯಲು ಸಾರಿಗೆ ನೌಕರರು ಮುಂದಾಗಿದ್ದು. ಮುಂದೆ ಇನ್ನು ಯಾವ ರೀತಿಯ ಹೋರಾಟಕ್ಕೆ ಸಾರಿಗೆ ಸಿಬ್ಬಂದಿ ಮುಂದಾಗುತ್ತಾರೆ ಎಂದು ಕಾಯ್ದು ನೋಡಬೇಕಿದೆ.