ಪತ್ರಕರ್ತರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ 27ರಂದು ಕಾಪದ್ವನಿಯಿಂದ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ
ಬೆಳಗಾವಿ: ರಾಜ್ಯದ ಪತ್ರಕರ್ತರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ 27ರಂದು ಸುವರ್ಣ ವಿಧಾನಸೌಧ ಬಳಿಯ ಬಸ್ತವಾಡ ವೇದಿಕೆಯಲ್ಲಿ ಧರಣಿ ನಡೆಸಲಾಗುವುದು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿಯ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ತಿಳಿಸಿದರು.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ರಾಜ್ಯದ 16 ಸಾವಿರ ಪತ್ರಕರ್ತರ ಪೈಕಿ ವಾರ್ತಾ ಇಲಾಖೆಯಿಂದ ಕೇವಲ 1600 ಪತ್ರಕರ್ತರಿಗೆ ಮಾತ್ರ ಪತ್ರಕರ್ತರ ಮಾನ್ಯತಾ ಪತ್ರ ನೀಡಲಾಗಿದೆ. ಇದರಲ್ಲಿಯೂ 700 ಬೋಗಸ್ ಮಾನ್ಯತಾ ಪತ್ರ ನೀಡಲಾಗಿದೆ ಎಂದು ಆರೋಪಿಸಿದರು.
ನಿವೃತ್ತಿಯಾದ ಎಲ್ಲ ಪತ್ರಕರ್ತರಿಗೆ ಮಾಸಾಶನ 20 ಸಾವಿರ ರೂ. ಗೆ ಹೆಚ್ಚಿಸಬೇಕು. ಮಾಧ್ಯಮ ಪಟ್ಟಿಯಲ್ಲಿ ಇರುವ ಇಲ್ಲವೇ ಆರ್.ಎನ್.ಐ ಹೊಂದಿರುವ ಪತ್ರಿಕೆಗಳಿಗೆ ಬೆಂಗಳೂರಿನಲ್ಲಿ ನೀಡುತ್ತಿರುವ 10 ಸಾವಿರ ರೂ. ಜಾಹೀರಾತು ನೀಡುತ್ತಿರುವುದನ್ನು ರಾಜ್ಯದ ಎಲ್ಲಾ ಪತ್ರಿಕೆಗಳಿಗೂ ವಿತರಿಸುವುದು ಮತ್ತು ಎಲ್ಲ ಪತ್ರಕರ್ತರಿಗೆ ಬಸ್ ಪಾಸ್ ವಿತರಿಸಬೇಕು ಎಂದು ಒತ್ತಾಯಿಸಿದರು.
ವಾರ್ತಾ ಇಲಾಖೆ ನೀಡಿರುವ 167 ಹವ್ಯಾಸಿ ಪತ್ರಕರ್ತರ ಪಟ್ಟಿಯಲ್ಲಿ 80ಕ್ಕೂ ಹೆಚ್ಚು ಪತ್ರಕರ್ತರಿಗೆ ನಿಯಮಗಳನ್ನು ಗಾಳಿಗೆ ತೂರಿ ಮಾನ್ಯತಾ ಪತ್ರ ಪಡೆದಿರುವ ಬಗ್ಗೆ ತನಿಖೆ ನಡೆಸಿ ಅವುಗಳನ್ನು ರದ್ಧುಪಡಿಸಬೇಕು. ಪತ್ರಕರ್ತರ ರಕ್ಷಣಾ ಕಾಯಿದೆ, ಕಾರ್ಯನಿರತ ಪತ್ರಕರ್ತರಿಗೆ ಹಾಗೂ ಕುಟುಂಬ ವರ್ಗಕ್ಕೆ ಆರೋಗ್ಯ ವಿಮೆ ಜಾರಿಗೊಳಿಸಬೇಕು. ಪತ್ರಕರ್ತರ ಪ್ರಾಧಿಕಾರ ಸರಕಾರ ರಚಿಸಬೇಕು, ಪ್ರತಿ ಪತ್ರಕರ್ತರಿಗೆ ನಿವೇಶನ ನೀಡಬೇಕು, ಪ್ರತಿ ತಾಲೂಕಿನಲ್ಲಿ ಪತ್ರಿಕಾ ಭವನ ನಿರ್ಮಾಣ ಮಾಡಬೇಕು. ಉಚಿತ ಟೋಲ್ ಪ್ರವೇಶಕ್ಕೆ ಸರಕಾರ ಆದೇಶ ಹೊರಡಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು.
ಜಿಲ್ಲಾಧ್ಯಕ್ಷ ಲಕ್ಷ್ಮಣ ಕಾಮನ್ನವರ, ಸವದತ್ತಿ ಅಧ್ಯಕ್ಷ ಬಾಲಕೃಷ್ಣ ಮಿರಜಕರ, ರಾಮದುರ್ಗ ಅಧ್ಯಕ್ಷ ಎಂ.ಕೆ.ಯಾದವಾಡ, ಕಿತ್ತೂರು ಅಧ್ಯಕ್ಷ ಎಂ.ಕೆ.ಕರಬಸನ್ನವರ ಇದ್ದರು.