- ಈ ಅಬ್ಯರ್ಥಿ ಗೆದ್ದರೆ ಒಳ್ಳೆಯದೊ ಅಥವಾ ಸೋತರೆ ಒಳ್ಳೆಯದೋ ನೀವೆ ನೋಡಿ,,,!!
ತುಮಕೂರು : ತುಮಕೂರು ಜಿಲ್ಲೆಯ ಗ್ರಾಮ ಪಂಚಾಯಿತಿ ಚುನಾವಣಾ ಅಭ್ಯರ್ಥಿಯೊಬ್ಬರು ತಮ್ಮ ಚುನಾವಣಾ ಕರಪತ್ರದಲ್ಲಿ ಮುದ್ರಿಸಿರುವ ಅಂಶಗಳು ಸಾಕಷ್ಟು ಚರ್ಚೆಗೆ ಒಳಗಾಗಿದ್ದು, ಚುನಾವಣೆಯಲ್ಲಿ ಗೆದ್ದರೆ ಮಾಡುವ ಕೆಲಸಗಳು ಹಾಗೂ ಸೋತರೆ ಮಾಡುವ ಕೆಲಸಗಳನ್ನು ಸ್ಪಷ್ಟಪಡಿಸಿರುವುದು ಹುಬ್ಬೇರಿಸುವಂತಿವೆ.
ಅಲ್ಲದೇ ಕರಪತ್ರದಲ್ಲಿಯೇ ಗ್ರಾಮದಲ್ಲಿ ನಡೆದಿರುವ ಭ್ರಷ್ಟಾಚಾರದ ಸಂಗತಿಗಳನ್ನು ಹೊರಹಾಕಿದ್ದು ವಿಶೇಷವಾಗಿದೆ. ಜಿಲ್ಲೆಯ ಹೆಬ್ಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕಲ್ಕೆರೆ ಕ್ಷೇತ್ರದ ಗ್ರಾಮ ಪಂಚಾಯಿತಿ ಅಭ್ಯರ್ಥಿಯೊಬ್ಬರು ಹಂಚುತ್ತಿರುವ ಕರಪತ್ರ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಗ್ರಾಮ ಪಂಚಾಯತ್ ಅಭ್ಯರ್ಥಿ ಮತದಾರರಿಗೆ ಅರ್ಥಾತ್, ಸೋತರೂ ಕೆಲಸ ಮಾಡುವುದಾಗಿ ಹೇಳಿರುವ ಈ ಮಹಿಳಾ ಅಭ್ಯರ್ಥಿ ತುಮಕೂರು ತಾಲೂಕಿನ ಹೆಬ್ಬೂರು ಗ್ರಾಪಂ ಕಲ್ಕೆರೆ ಕ್ಷೇತ್ರದಿಂದ ಸ್ಪರ್ಧಿಸಿರುವ ಹೆಚ್.ಗಂಗಮ್ಮ ಅವರೇ ಈ ರೀತಿ ವಿಚಿತ್ರವಾಗಿ ಚುನಾವಣಾ ಪ್ರಚಾರ ಕೈಗೊಂಡಿರುವ ಅಭ್ಯರ್ಥಿ.
ಗೆದ್ದರೆ ಜಮೀನು ದೇವಸ್ಥಾನದ ಖಾತೆಗೆ ಮಾಡಿಸುವುದು ಸೇರಿ, ರಸ್ತೆ ಮಾಡಿಸುವುದು, ಚರಂಡಿ ಮಾಡಿಸುವುದು ಮುಂತಾದ ಸರ್ವೇ ಸಾಮಾನ್ಯ ಭರವಸೆಗಳನ್ನು ನೀಡಿರುವ ಈ ಅಭ್ಯರ್ಥಿ, ಸೋತರೆ ಏನೇನು ಮಾಡಿಸುತ್ತೇನೆ ಎಂದು ಹೇಳಿರುವುದೇ ಈಗ ಹೆಚ್ಚಿನ ಗಮನ ಸೆಳೆದಿದೆ.
ಡಿ.22ರಂದು ನಡೆಯಲಿರುವ ಮೊದಲ ಹಂತದ ಚುನಾವಣೆಯಲ್ಲಿ ಸ್ಪರ್ಧಿಸಿರುವ ಹೆಚ್. ಗಂಗಮ್ಮ, ತಾವೇನಾದರೂ ಈ ಚುನಾವಣೆಯಲ್ಲಿ ಸೋತರೆ ಸರ್ಕಾರಕ್ಕೆ ಸುಳ್ಳು ಮಾಹಿತಿಕೊಟ್ಟು ಮೈತ್ರಿ, ಮನಸ್ವಿನಿ, ವಿಧವಾ ವೇತನಾ ಯೋಜನೆಯಡಿ ಪಿಂಚಣಿ ಪಡೆಯುತ್ತಿರುವ 40 ಕುಟುಂಬಗಳ ಹಣವನ್ನು ನಿಲ್ಲಿಸುವುದಾಗಿ ಹೇಳಿದ್ದಾರೆ.
ಸೋತರೆ ಅನರ್ಹ ಪಡಿತರ ಚೀಟಿ ರದ್ದು ಪಡಿಸುವುದಾಗಿ ಈ ಮೂಲಕ ಪರೋಕ್ಷವಾಗಿ ಇವರು ಬೆದರಿಕೆಯೊಡ್ಡಿರುವಂತಿರುವ ಈ ಮತಯಾಚನೆ ಪತ್ರ ಎಲ್ಲೆಡೆ ವೈರಲ್ ಆಗಿದೆಯಲ್ಲದೆ ಚರ್ಚೆಗೂ ಗ್ರಾಸವಾಗಿದೆ. ಒಟ್ಟಿನಲ್ಲಿ ಈ ಅಭ್ಯರ್ಥಿ ಗೆದ್ದರೆ ಮಾಡಿಸುವ ಕೆಲಸಗಳಿಗಿಂತ ಸೋತರೆ ಮಾಡಿಸುವುದಾಗಿ ಹೇಳಿರುವ ಕೆಲಸಗಳೇ ಭ್ರಷ್ಟಾಚಾರ ನಿರ್ಮೂಲನೆ ದೃಷ್ಟಿಯಿಂದ ಉತ್ತಮವಾದದ್ದು ಅನಿಸುವಂತಿವೆ.
ಆದರೆ ಸೋತ ಮೇಲೂ ಈ ಭರವಸೆಗಳನ್ನು ಈಡೇರಿಸಲು ಸಾಧ್ಯವೇ ಎಂಬುದು ಈಗ ದೊಡ್ಡ ಪ್ರಶ್ನೆ.ಅದಕ್ಕೂ ಉತ್ತರವೆಂಬಂತೆ, ‘ಅಕ್ರಮವಾಗಿದ್ದ 6 ಮನೆಗಳ ಬಿಲ್ಗಳನ್ನು ಈಗಾಗಲೇ ನಿಲ್ಲಿಸಿರುವುದೇ ಇದಕ್ಕೆ ಸಾಕ್ಷಿ’ ಎಂದೂ ಹೇಳಿದ್ದಾರೆ. ಸೋಲು ಮತ್ತು ಗೆಲುವು ಎರಡರ ನಡುವೆ ಚುನಾವಣೆ ಫಲಿತಾಂಶ ನಂತರ ಕಾದು ನೋಡಬೇಕು.