Breaking News

ಮೋದಿಯವರನ್ನು ಸೋಲಿಸಲು ನಮ್ಮ ವಿರೋಧಿಗಳಿಗೆ ಶತ್ರು ರಾಷ್ಟ್ರಗಳ ಬೆಂಬಲ-* *ಎನ್ಡಿಎ ಅಭ್ಯರ್ಥಿ ಜಗದೀಶ್ ಶೆಟ್ಟರ್*

Spread the love

*ಪ್ರಧಾನಿ ಮೋದಿಯವರಿಂದಾಗಿ ಭಾರತಕ್ಕೆ ವಿಶ್ವ ಮನ್ನಣೆ*

*ಮೋದಿಯವರನ್ನು ಸೋಲಿಸಲು ನಮ್ಮ ವಿರೋಧಿಗಳಿಗೆ ಶತ್ರು ರಾಷ್ಟ್ರಗಳ ಬೆಂಬಲ-*
*ಎನ್ಡಿಎ ಅಭ್ಯರ್ಥಿ ಜಗದೀಶ್ ಶೆಟ್ಟರ್*

*ನಾಗನೂರ ಪಟ್ಟಣದಲ್ಲಿ ಅರಭಾವಿ ಮತಕ್ಷೇತ್ರದ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಶೆಟ್ಟರ್*

*ಶೆಟ್ಟರ್ ಅವರಿಗೆ ಸಾಥ್ ನೀಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ, ಸಂಸತ್ ಸದಸ್ಯೆ ಮಂಗಲ ಅಂಗಡಿ*

*ಮೂಡಲಗಿ*: ವಿಶ್ವನಾಯಕನಾಗಿರುವ ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಠಿ ಆಡಳಿತದಿಂದ ಭಾರತವು ಪ್ರಪಂಚದಲ್ಲಿಯೇ ಬಲಾಢ್ಯ ರಾಷ್ಟ್ರವಾಗುತ್ತಿದ್ದು, ಕ್ಷಿಪ್ರಗತಿಯಲ್ಲಿ ಸಾಗುತ್ತಿರುವ ಭಾರತ ದೇಶದ ಜನಪ್ರೀಯತೆಯನ್ನು ಕುಗ್ಗಿಸಲು ಕೆಲ ವಿರೋಧಿ ರಾಷ್ಟ್ರಗಳು ಕುತಂತ್ರ ನಡೆಸುತ್ತಿದ್ದು, ನರೇಂದ್ರ ಮೋದಿಯವರನ್ನು ಸೋಲಿಸಲು ಚೀನಾ ಸೇರಿದಂತೆ ಕೆಲ ವಿರೋಧಿ ರಾಷ್ಟ್ರಗಳು ಪಿತೂರಿ ನಡೆಸುತ್ತಿವೆ ಎಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಎನ್‍ಡಿಎ ಅಭ್ಯರ್ಥಿ ಜಗದೀಶ ಶೆಟ್ಟರ್ ಆರೋಪಿಸಿದರು.
ತಾಲೂಕಿನ ನಾಗನೂರ ಪಟ್ಟಣದ ಹೊರವಲಯದಲ್ಲಿರುವ ಮಹಾಲಿಂಗೇಶ್ವರ ಬಸವತೀರ್ಥ ಮಠದ ಆವರಣದಲ್ಲಿ ರವಿವಾರ ಸಂಜೆ ಜರುಗಿದ ಅರಭಾವಿ ವಿಧಾನಸಭಾ ಮತಕ್ಷೇತ್ರದ ಬೂತ್‍ಮಟ್ಟದ ಕಾರ್ಯಕರ್ತರ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ನಮ್ಮ ನೆರೆ-ಹೊರೆಯ ಶತ್ರು ರಾಷ್ಟ್ರಗಳು ಮೋದಿಯವರ ವಿರುದ್ಧ ಎಷ್ಟೇ ತಂತ್ರ, ಪಿತೂರಿ ನಡೆಸಿದರೂ ಸತತ 3ನೇ ಬಾರಿಗೆ ಈ ರಾಷ್ಟ್ರದ ಪ್ರಧಾನಿಯಾಗಿ ಮತ್ತೊಮ್ಮೆ ಆಡಳಿತ ನಡೆಸಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದರು.
ಭಾರತವು ಆರ್ಥಿಕ ಪ್ರಗತಿಯಲ್ಲಿ 4ನೇ ಸ್ಥಾನವನ್ನು ಅಲಂಕರಿಸಿದ್ದು, ಮುಂದಿನ ಕೆಲವೇ ವರ್ಷಗಳಲ್ಲಿ ಆರ್ಥಿಕ ಪ್ರಗತಿಯಲ್ಲಿ ನಂ 1 ಸ್ಥಾನ ಗಳಿಸಲಿದೆ. ಪ್ರಧಾನಿಯವರ ಜನಪ್ರಿಯತೆಯನ್ನು ಕುಗ್ಗಿಸಲು ವಿರೋಧಿ ದೇಶಗಳು ಇನ್ನಿಲ್ಲದ ಕಸರತ್ತು ಮಾಡುತ್ತಿವೆ. ಆದರೆ ನಮ್ಮ ದೇಶದ ಜನ ಪ್ರಜ್ಞಾವಂತರಾಗಿದ್ದು, ಇಡೀ ದೇಶವೇ ಮೋದಿಯವರ ಬೆನ್ನಿಗಿದೆ. ಹೀಗಾಗಿ ಈ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಮಿತ್ರ ಪಕ್ಷಗಳು ಒಟ್ಟಾರೆ 400ಕ್ಕೂ ಅಧಿಕ ಸ್ಥಾನಗಳನ್ನು ಗಳಿಸಲಿವೆ. ಕಾಂಗ್ರೇಸ್ ಪಕ್ಷ ದಿವಾಳಿಯತ್ತ ಸಾಗುತ್ತಿದ್ದು, 30 ರಿಂದ 35 ಸ್ಥಾನಗಳನ್ನು ಮಾತ್ರ ಪಡೆಯಲಿದ್ದು, ವಿರೋಧ ಪಕ್ಷವಾಗಲು ಸಹ ಅದು ತನ್ನ ಅರ್ಹತೆಯನ್ನು ಮತ್ತೊಮ್ಮೆ ಕಳೆದುಕೊಳ್ಳಲಿದೆ ಎಂದು ಹೇಳಿದರು.
ಬೆಳಗಾವಿ ಅಭಿವೃದ್ದಿಯಲ್ಲಿ ನಾನು ಕೂಡಾ ಸಾಕಷ್ಟು ಕೊಡುಗೆಯನ್ನು ನೀಡಿದ್ದೇನೆ. ವಿಧಾನಸಭಾ ಅಧ್ಯಕ್ಷನಿದ್ದಾಗ ಸುವರ್ಣ ಸೌಧ ನಿರ್ಮಾಣಕ್ಕೆ ಗುದ್ದಲಿ ಪೂಜೆ ನಡೆಸಿದ್ದು, ಮುಂದೆ ಮುಖ್ಯಮಂತ್ರಿಯಾಗಿದ್ದಾಗ ಇದನ್ನು ಉದ್ಘಾಟಿಸುವ ಭಾಗ್ಯ ನನ್ನದಾಗಿತ್ತು. ಸುಮಾರು 3ದಶಕಗಳಿಂದ ಬೆಳಗಾವಿ ಭಾಗದ ಜನರೊಂದಿಗೆ ನಿಕಟ ಭಾಂದವ್ಯವನ್ನು ಇಟ್ಟುಕೊಂಡಿದ್ದೇನೆ. 2ಬಾರಿ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಬೆಳಗಾವಿ ನನ್ನ ಕರ್ಮಭೂಮಿ, ನನ್ನನ್ನು ಸಂಸತ್ ಚುನಾವಣೆಯಲ್ಲಿ ಆಯ್ಕೆ ಮಾಡಿ ಕಳುಹಿಸಿದರೇ ಬೆಳಗಾವಿ ಸಮಗ್ರ ಅಭಿವೃದ್ದಿಗೆ ಶ್ರಮಿಸುತ್ತೇನೆ. ಈ ಲೋಕಸಭಾ ಕ್ಷೇತ್ರವು ಬಿಜೆಪಿಯ ಭದ್ರಕೋಟೆಯಾಗಿದ್ದು, ದಿ.ಸುರೇಶ ಅಂಗಡಿ ಅವರ ಮಾದರಿಯಲ್ಲಿ ಕೇಂದ್ರ ಸರ್ಕಾರದ ಯೋಜನೆಗಳನ್ನು ಜಾರಿಗೊಳಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಅವರು ತಿಳಿಸಿದರು.
ಜಾರಕಿಹೊಳಿ ಸಹೋದರರನ್ನು ಕೊಂಡಾಡಿದ ಶೆಟ್ಟರ್: ರಮೇಶ ಜಾರಕಿಹೊಳಿಯವರದ್ದು ನೇರ ನುಡಿಯ ವ್ಯಕ್ತಿತ್ವದ್ದು. ಹಿಡಿದ ಹಠವನ್ನು ಎಂದಿಗೂ ಬಿಡಲಾರರು. ಮನಸ್ಸಿಗೆ ಬಂದದ್ದನ್ನು ನೇರವಾಗಿಯೇ ಹೇಳುವ ಮನಸ್ಸು ಅವರದು. ತನ್ನನ್ನು ನಂಬಿದವರನ್ನು ಎಂದಿಗೂ ಕೈಬಿಡುವವರಲ್ಲ ಎಂದು ಶಾಸಕ ರಮೇಶ ಜಾರಕಿಹೊಳಿ ಅವರನ್ನು ಕೊಂಡಾಡಿದ ಶೆಟ್ಟರ್ ಅವರು, ಇನ್ನು ಅರಭಾವಿ ಶಾಸಕರಾಗಿರುವ ಬಾಲಚಂದ್ರ ಜಾರಕಿಹೊಳಿ ಅವರನ್ನು ಕಿಂಗ್-ಮೇಕರ್ ಎಂದು ಶ್ಲಾಘಿಸಿದರು. ಇವರಿಬ್ಬರೂ ನನ್ನ ರಾಜಕೀಯ ಜೀವನಕ್ಕೆ ಬೆನ್ನೆಲಬಾಗಿ ನಿಂತವರು. ನನಗೆ ದೊಡ್ಡ ಶಕ್ತಿಯನ್ನು ತುಂಬಿದವರು. ಜಾರಕಿಹೊಳಿ ಸಹೋದರರ ನೇತೃತ್ವದಲ್ಲಿ ಗೋಕಾಕ ಮತ್ತು ಅರಭಾವಿ ಕ್ಷೇತ್ರದಲ್ಲಿಯೇ ಕನಿಷ್ಠ ಒಂದೂವರೆ ಲಕ್ಷ ಮತಗಳ ಮುನ್ನಡೆ ಸಾಧಿಸಲಿದ್ದೇನೆ. ಜನರ ಆಶೀರ್ವಾದಿಂದ ಸಂಸತ್ತಿಗೆ ಪ್ರವೇಶಿಸುವ ಆಶಾಭಾವನೆಯನ್ನು ಜಗದೀಶ ಶೆಟ್ಟರ್ ವ್ಯಕ್ತಪಡಿಸಿದರು.
ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮಾತನಾಡಿ, ಜಗದೀಶ ಶೆಟ್ಟರ್ ಅವರು ಸರಳ-ಸಜ್ಜನಿಕೆಯ ರಾಜಕಾರಣಿಯಾಗಿದ್ದು, ಅಭಿವೃದ್ದಿ ಮಾಡುವ ಸಂಕಲ್ಪವನ್ನು ಹೊಂದಿದ್ದಾರೆ. ಶೆಟ್ಟರ್ ನಮ್ಮವರು. ಅವರ ಬೆಳಗಾವಿ ಬೀಗರು. ಕೆಲವರು ಇವರ ವಿಳಾಸವನ್ನು ಕೇಳುತ್ತಿದ್ದಾರೆ. ಬೀಗರಾಗಿರುವ ಅಂಗಡಿಯವರ ಮನೆಯೇ ಇವರ ವಿಳಾಸವಾಗಿದೆ. ಶೆಟ್ಟರ್ ಅವರು ಹೊರಗಿನವರು. ಬೆಳಗಾವಿಯಲ್ಲಿ ಏಕೆ ಸ್ಪರ್ಧೆ ಮಾಡುತ್ತಿದ್ದಾರೆಂದು ಪ್ರಶ್ನಿಸುತ್ತಿದ್ದಾರೆ. ಕಾಂಗ್ರೇಸ್ ನಾಯಕ ರಾಹುಲ್ ಗಾಂಧಿಯವರು ಕೇರಳದಲ್ಲಿ ಸ್ಪರ್ಧೆ ಮಾಡುತ್ತಿಲ್ಲವೇ? ಎಂದು ಪ್ರಶ್ನಿಸಿದ ಅವರು, ಕಾಂಗ್ರೇಸ್‍ನ ಸುಳ್ಳು ಅಪಪ್ರಚಾರಗಳಿಗೆ ಕಿವಿಗೊಡಬೇಡಿ ಎಂದು ಮತದಾರರಿಗೆ ಮನವರಿಕೆ ಮಾಡಿದರು.
ಈ ಚುನಾವಣೆಯಲ್ಲಿ ಕೆಲವರು ತಮ್ಮ ಸ್ವಾರ್ಥ ಅಧಿಕಾರಕ್ಕಾಗಿ ಜಾತಿಯನ್ನು ಬೆರೆಸುವ ಪ್ರಯತ್ನ ಮಾಡುತ್ತಿದ್ದಾರೆ. ಜಾತಿ ಹೆಸರಿನಲ್ಲಿ ಮತ ಕೇಳುತ್ತಿದ್ದಾರೆ. ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ದರಿದ್ದಾರೆ. ನಮಗೆ ಬೇಕಾಗಿರುವುದು ಸಮರ್ಥ ನಾಯಕತ್ವ. ಹೀಗಾಗಿ ಪ್ರಧಾನಿ ಮೋದಿಯವರ ಜನಪ್ರಿಯ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು. ನರೇಂದ್ರ ಮೋದಿ ಅವರ ಕೈಗಳನ್ನು ಬಲಪಡಿಸಲು ನಮ್ಮ ಮನೆಯ ಮಗನಾಗಿರುವ ಜಗದೀಶ ಶೆಟ್ಟರ್ ಅವರಿಗೆ ಮತ ನೀಡಿ ಆಶೀರ್ವಾದ ಮಾಡಬೇಕು. ಪ್ರಧಾನಿಯವರ ಸಂಪುಟದಲ್ಲಿ ಸಚಿವರಾಗುವ ಅವಕಾಶ ಶೆಟ್ಟರ್ ಅವರಿಗೆ ಒದಗಿಬರಲಿದೆ. ಇದರಿಂದ ನಮ್ಮ ಜಿಲ್ಲೆಯು ಮತ್ತಷ್ಟು ಪ್ರಗತಿ ಕಾಣಲಿದೆ. ಶೆಟ್ಟರ್ ಅವರನ್ನು ವಿರೋಧಿಗಳು ಟೀಕಿಸಿದರೇ ತಕ್ಷಣವೇ ಅಂತವರಿಗೆ ಪ್ರತ್ಯುತ್ತರ ನೀಡುವಂತೆ ಕಾರ್ಯಕರ್ತರಿಗೆ ಕರೆ ನೀಡಿದ ಅವರು ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಅರಭಾವಿಯಿಂದ 55ಸಾವಿರ ಮತ್ತು ಗೋಕಾಕದಿಂದ 58ಸಾವಿರ ಮತಗಳ ಮುನ್ನಡೆ ನೀಡಲಾಗಿದ್ದು, ಮೇ-7ರಂದು ಜರುಗುವ ಚುನಾವಣೆಯಲ್ಲಿ ಇವುಗಳನ್ನೇ ದ್ವೀಗುಣ ಮತಗಳ ಲೀಡ್ ನೀಡುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮತದಾರರಲ್ಲಿ ಕೋರಿಕೊಂಡರು.
ವೇದಿಕೆಯಲ್ಲಿ ಸಂಸದೆ ಮಂಗಲ ಅಂಗಡಿ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಅನಿಲ ಬೆನಕೆ, ಮಾಜಿ ಶಾಸಕ ಸಂಜಯ ಪಾಟೀಲ, ಹಿರಿಯ ಸಹಕಾರಿಗಳಾದ ಬಿ.ಆರ್.ಪಾಟೀಲ(ನಾಗನೂರ), ಬಸಗೌಡ ಪಾಟೀಲ, ಯುವ ಧುರೀಣ ಸರ್ವೋತ್ತಮ ಜಾರಕಿಹೊಳಿ, ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಶ ಪಾಟೀಲ, ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ, ನ್ಯಾಯವಾದಿ ಎಮ್.ಬಿ.ಜಿರಲಿ, ಲಕ್ಷ್ಮಣ ತಪಸಿ, ಅರಭಾವಿ ಮಂಡಲ ಬಿಜೆಪಿ ಅಧ್ಯಕ್ಷ ಮಹಾದೇವ ಶೆಕ್ಕಿ, ಜೆಡಿಎಸ್ ಬ್ಲಾಕ್ ಅಧ್ಯಕ್ಷ ಪ್ರಕಾಶ ಕಾಳಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ಮುತ್ತೆಪ್ಪ ಮನ್ನಾಪೂರ, ಜಿಲ್ಲಾ ಕಾರ್ಯದರ್ಶಿ ಇಂದಿರಾ ಅಂತರಗಟ್ಟಿ, ಚುನಾವಣೆ ಸಂಚಾಲಕ ಗೋವಿಂದ ಕೊಪ್ಪದ, ಪ್ರಭಾರಿ ವಿಜಯ ಗುಡದಾರಿ ಸೇರಿದಂತೆ ಬಿಜೆಪಿ-ಜೆಡಿಎಸ್ ಅನೇಕ ಮುಖಂಡರು, ಅರಭಾವಿ ಕ್ಷೇತ್ರದ ಹಲವಾರು ಧುರೀಣರು, ವಿವಿಧ ಸಮಾಜಗಳ ಮುಖಂಡರು ಉಪಸ್ಥಿತರಿದ್ದರು.


Spread the love

About Fast9 News

Check Also

ನಿವೃತ್ತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕ ಬಿ , ಎ, ವಂಟಮೂರಿಗೆ ಪತ್ನಿ ವಿಯೋಗ

Spread the loveನಿವೃತ್ತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕ ಬಿ , ಎ, ವಂಟಮೂರಿಗೆ ಪತ್ನಿ ವಿಯೋಗ …

Leave a Reply

Your email address will not be published. Required fields are marked *