Breaking News

ಕಾರ್ಯಕರ್ತರಿಗೆ ಕೋಟಿ ಕೋಟಿ ನಮನ ಸಲ್ಲಿಸಿದ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love

ಕಾರ್ಯಕರ್ತರಿಗೆ ಕೋಟಿ ಕೋಟಿ ನಮನ ಸಲ್ಲಿಸಿದ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ

ಸಹೃದಯಿ, ನಿಷ್ಠಾವಂತ ಕಾರ್ಯಕರ್ತರನ್ನು ಪಡೆದಿರುವುದು ನನ್ನ ಪುಣ್ಯ : ಬಾಲಚಂದ್ರ ಜಾರಕಿಹೊಳಿ
ನಾಗನೂರ ಪಟ್ಟಣದಲ್ಲಿ ಅರಭಾವಿ ಮತಕ್ಷೇತ್ರದ ಕಾರ್ಯಕರ್ತರನ್ನು ಅಭಿನಂದಿಸಿದ ನೂತನ ಶಾಸಕ
ಮೂಡಲಗಿ : ರಾಜ್ಯದ 224 ಕ್ಷೇತ್ರಗಳಲ್ಲಿಯೇ ನಮ್ಮ ಅರಭಾವಿ ಕ್ಷೇತ್ರವು ಬಹು ವಿಶೇಷತೆಗಳಿಂದ ಕೂಡಿದ್ದು, ಯಾವ ಹಳ್ಳಿಗಳಿಗೂ ಪ್ರಚಾರವನ್ನು ಮಾಡದೇ ಪ್ರತಿ ಮತಗಟ್ಟೆಗಳಲ್ಲಿ ಕಾರ್ಯಕರ್ತರು ಮತ್ತು ಮುಖಂಡರು ನನ್ನ ಆಯ್ಕೆಗೆ ಶ್ರಮಿಸಿದ್ದಾರೆ. ಯಾವ ಆಮೀಷಕ್ಕೂ ಒಳಗಾಗದೇ ನಾನು ಮನೆಯಲ್ಲಿದ್ದರೂ ದಾಖಲೆಯ ಮತಗಳ ವಿಜಯಕ್ಕೆ ಕಾರಣೀಕರ್ತರಾಗಿದ್ದಾರೆ. ಇಂತಹ ಕಾರ್ಯಕರ್ತರನ್ನು ಪಡೆದಿರುವುದು ನಾನು ಧನ್ಯನಾಗಿದ್ದೇನೆ ಎಂದು ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಸೋಮವಾರ ಸಂಜೆ ತಾಲೂಕಿನ ನಾಗನೂರ ಪಟ್ಟಣದ ಮಹಾಲಿಂಗೇಶ್ವರ ಮಠದ ಆವರಣದಲ್ಲಿ ಜರುಗಿದ ಅರಭಾವಿ ಮತಕ್ಷೇತ್ರದ ಕಾರ್ಯಕರ್ತರ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ್ಮ ಕಾರ್ಯಕರ್ತರು ಯಾವುದೇ ಜಾತಿ, ಮತ ನೋಡದೇ ತಮ್ಮ ಮನೆಯ ಮಗನಂತೆ ತಿಳಿದುಕೊಂಡು ಸುಮಾರು 71540 ಮತಗಳ ಅಂತರದಿಂದ ಗೆಲ್ಲಿಸಿಕೊಟ್ಟಿದ್ದಾರೆ. ಅದಕ್ಕಾಗಿ ಅವರಿಗೆ ನನ್ನ ಕೋಟಿ ಕೋಟಿ ನಮನಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದರು.
ಎಲ್ಲ 223 ಕ್ಷೇತ್ರಗಳಲ್ಲಿ ಆಯಾ ಪಕ್ಷದ ಅಭ್ಯರ್ಥಿಗಳು ಉರಿಬಿಸಿಲಿನಲ್ಲಿ ಪ್ರಚಾರ ಕಾರ್ಯ ನಡೆಸಿದ್ದಾರೆ. ಸಾಕಷ್ಟು ಶಕ್ತಿ ಮೀರಿ ದುಡಿದಿದ್ದಾರೆ. ಆದರೆ ನಾನು ಈ ಕ್ಷೇತ್ರದಲ್ಲಿ ಕಾರ್ಯಕರ್ತರನ್ನು ನಂಬಿ ಯಾವ ಪ್ರಚಾರವನ್ನು ನಡೆಸಲಿಲ್ಲ. ಕೇವಲ ಮೂಡಲಗಿ ಪಟ್ಟಣಕ್ಕೆ ಚುನಾವಣಾ ಪ್ರಚಾರದ ಬಹಿರಂಗ ಸಭೆಯ ಕೊನೆಯ ದಿನದಂದು ಮಾತ್ರ ತೆರಳಿ ಮತಯಾಚಿಸಿದ್ದೇನೆ. ಅದನ್ನು ಬಿಟ್ಟು ಕ್ಷೇತ್ರದ ಯಾವ ಹಳ್ಳಿಗಳಿಗೂ ಭೇಟಿ ಕೊಡಲಿಲ್ಲ. ಎಲ್ಲವನ್ನು ಪಕ್ಷದ ಕಾರ್ಯಕರ್ತರಿಗೆ ಬಿಟ್ಟಿದ್ದೆ. ಈ ಚುನಾವಣೆಯು ಕೆಲವರಿಗೆ ಸುಲಭವಾಗಿ ಕಂಡಿದ್ದರೂ ಒಳ ಒಳಗೆ ಕೆಲವು ಮಸಲತ್ತುಗಳು ಬೆಳಕಿಗೆ ಬಂದಿವೆ. ಎಲ್ಲಿಂದಲೋ ಕೂತು ಮುಖಂಡರಿಗೆ ಕೆಲ ವಿರೋಧಿಗಳು ಕರೆಗಳನ್ನು ಮಾಡಿದ್ದಾರೆ. ಆದರೂ ಅವುಗಳಿಗೆ ನಮ್ಮ ಕಾರ್ಯಕರ್ತರು ಕಿಂಚಿತ್ತೂ ಬೆಲೆ ಕೊಟ್ಟಿಲ್ಲ. ಪ್ರತಿ ಸಮಾಜಗಳ ಮುಖಂಡರು ಸಾಕಷ್ಟು ದುಡಿದು ನನಗೆ 1.15 ಲಕ್ಷ ಮತಗಳನ್ನು ನೀಡಿದ್ದಾರೆ ಎಂದು ಹೇಳಿದರು.
ಈ ಸಲ ಅತ್ಯಧಿಕ ಮತಗಳು: ಈ ಹಿಂದೆ ನಡೆದ ಯಾವ ಚುನಾವಣೆಯಲ್ಲಿಯೂ ಇಷ್ಟೊಂದು ಮತಗಳನ್ನು ಪಡೆದಿಲ್ಲ. 2013 ರಲ್ಲಿ 99283 ಮತಗಳನ್ನು ಪಡೆದು ಸುಮಾರು 75221 ಮತಗಳ ಅಂತರದಿಂದ ಜಯ ಗಳಿಸಿದ್ದೆ. ಮೇ 10 ರಂದು ನಡೆದ ಚುನಾವಣೆಯಲ್ಲಿ ಹಾಲುಮತ, ಉಪ್ಪಾರ, ವೀರಶೈವ ಲಿಂಗಾಯತ, ರಡ್ಡಿ, ಮುಸ್ಲಿಂ, ಮರಾಠಾ, ಕ್ಷತ್ರೀಯ, ವಿಶ್ವಕರ್ಮ, ತಳವಾರ, ಜೈನ್, ದಲಿತ, ಹೆಳವರ ಸಮುದಾಯ ಸೇರಿದಂತೆ ಇನ್ನುಳಿದ ಎಲ್ಲ ಸಮುದಾಯಗಳು ನನ್ನನ್ನು ಬೆಂಬಲಿಸಿ ಆಶೀರ್ವಾದ ಮಾಡಿದ್ದಾರೆ. ಅವರಿಗೆಲ್ಲ ನಾನು ಎಷ್ಟು ಕೃತಜ್ಞತೆಗಳನ್ನು ಹೇಳಿದರೂ ಸಾಲದು. ಅವರ ಋಣ ನನ್ನ ಮೇಲಿದೆ. ವಿರೋಧ ಪಕ್ಷದಲ್ಲಿ ಕುಳಿತುಕೊಂಡು ಅರಭಾವಿ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶಕ್ತಿಮೀರಿ ಶ್ರಮಿಸುತ್ತೇನೆ ಎಂದು ಅವರು ಹೇಳಿದರು.
ಅನಾವಶ್ಯಕ ಖರ್ಚುಗಳಿಗೆ ಕಡಿವಾಣ: ಈ ಚುನಾವಣೆಯಲ್ಲಿ ಕೆಲ ಮುಖಂಡರು ನನಗೆ ಮಾರ್ಗದರ್ಶನ ಮಾಡಿದ್ದಾರೆ. ಅನಾವಶ್ಯಕ ಖರ್ಚು ವೆಚ್ಚಗಳ ಬಗ್ಗೆ ಮಾತನಾಡಿದ್ದಾರೆ. ಮುಂದಿನ ದಿನಗಳಲ್ಲಿ ಮಹಿಳೆಯರಿಗೆ ಗೌರವ ಕಾಪಾಡಲು ಶೌಚಾಲಯ ಹಾಗೂ ಒಳಚರಂಡಿ ನಿರ್ಮಾಣಕ್ಕೆ ಆಧ್ಯತೆ ನೀಡುತ್ತೇನೆ. ಇನ್ನು ಮುಂದೆ ಎನ್‍ಎಸ್‍ಎಫ್ ಕಛೇರಿಯಲ್ಲಿ ಭೇಟಿಯನ್ನು ಕಡಿಮೆ ಮಾಡಿ ಆಯಾ ಜಿಲ್ಲಾ ಪಂಚಾಯತಿ ಕ್ಷೇತ್ರಗಳಲ್ಲಿ ಸಂಚರಿಸಿ ಸಾರ್ವಜನಿಕ ಕುಂದು ಕೊರತೆಗಳನ್ನು ವಿಚಾರಿಸುತ್ತೇನೆ. ಅಲ್ಲಿಯೇ ಅಧಿಕಾರಿಗಳನ್ನು ಕರೆಯಿಸಿ ಸ್ಥಳದಲ್ಲಿಯೇ ಸಮಸ್ಯೆಗಳ ಪರಿಹಾರಕ್ಕೆ ಯತ್ನಿಸುತ್ತೇನೆ ಎಂದು ಹೇಳಿದರು.
ಕ್ಷೇತ್ರದ ಬಹುತೇಕ ಮುಖಂಡರು ಹಾಗೂ ಕಾರ್ಯಕರ್ತರು ನಮ್ಮ ಎನ್‍ಎಸ್‍ಎಫ್ ಸಿಬ್ಬಂದಿ ವರ್ಗದವರ ಬಗ್ಗೆ ದೂರುಗಳನ್ನು ನೀಡಿದ್ದಾರೆ. ಸಾರ್ವಜನಿಕರ ಸಮಸ್ಯೆಗಳಿಗೆ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ. ದೂರವಾಣಿ ಕರೆಗಳನ್ನು ಸ್ವೀಕರಿಸುತ್ತಿಲ್ಲ ಎಂಬ ದೂರುಗಳು ಬಂದಿವೆ. ಮುಂದಿನ ದಿನಗಳಲ್ಲಿ ಎಲ್ಲವನ್ನು ಸರಿಪಡಿಸುವ ವ್ಯವಸ್ಥೆಯನ್ನು ಮಾಡುವುದಾಗಿ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ವೇದಿಕೆ ಮೇಲೆಯೇ ಮತದಾರರಿಗೆ ಕೋಟಿ ನಮನ ಸಲ್ಲಿಸಿದ ಬಾಲಚಂದ್ರ ಜಾರಕಿಹೊಳಿ: 6ನೇ ಬಾರಿಗೆ ವಿಧಾನಸಭೆಗೆ ಆರಿಸಿ ಕಳುಹಿಸಿಕೊಟ್ಟ ಕ್ಷೇತ್ರದ ಸಮಸ್ತ ಮತದಾರರಿಗೆ ವೇದಿಕೆಯ ಮೇಲೆಯೇ ತಮ್ಮ ಕಾಲಲ್ಲಿದ್ದ ಪಾದರಕ್ಷೆಗಳನ್ನು ತೆಗೆದು ಶಿಸಾ ನಮಸ್ಕಾರ ಮಾಡಿದ ಅವರು, ನಾನು ಸ್ವಾಮೀಜಿಗಳನ್ನು ಬಿಟ್ಟರೆ ನನ್ನ ಕ್ಷೇತ್ರದ ಜನರಿಗೆ ನಮಿಸಿ ಅವರ ಸಹಕಾರ ಮತ್ತು ಆಶೀರ್ವಾದ ಪಡೆಯುತ್ತಿರುವುದಾಗಿ ಅವರು ತಿಳಿಸಿದರು.
ಪ್ರವಾಹ ಪೀಡಿತರಿಗೆ ಈಗಾಗಲೇ 9 ಸಾವಿರ ಮನೆಗಳನ್ನು ಸಂತ್ರಸ್ತರಿಗೆ ನಿರ್ಮಿಸಿಕೊಡಲಾಗಿದೆ. ಬಾಕಿ ಉಳಿದ ಕೆಲ ಸಂತ್ರಸ್ಥ ಫಲಾನುಭವಿಗಳಿಗೆ ಮುಂದಿನ ದಿನಗಳಲ್ಲಿ ಮನೆಗಳನ್ನು ನಿರ್ಮಿಸಿಕೊಡಲು ಬದ್ಧರಿರುವುದಾಗಿ ಹೇಳಿದರು. ಕೆಲವೇ ದಿನಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಮತಗಟ್ಟೆಗಳಿಗೆ ಬಹುಮಾನಗಳನ್ನು ವಿತರಿಸಲಾಗುವುದು. ಟಾಫ್ 20 ಮತಗಟ್ಟೆಗಳನ್ನು ಗುರುತಿಸಿ ಪ್ರೋತ್ಸಾಹ ನೀಡಲಾಗುವುದು. ಮುಂದಿನ ದಿನಗಳಲ್ಲಿ ಎಲ್ಲ ಸಣ್ಣ ಪುಟ್ಟ ಸಮಾಜಗಳಿಗೂ ರಾಜಕೀಯ ಪ್ರಾಶಸ್ತ್ಯ ನೀಡಲಾಗುವುದು ಎಂದು ಹೇಳಿದರು.
ನಿಷ್ಠಾವಂತರಿಗೆ ಗೌರವ ನೀಡಲು ಮಾಲಾರ್ಪಣೆ ಸ್ವೀಕರಿಸುತ್ತಿಲ್ಲ: ನಿಷ್ಠಾವಂತ ಕಾರ್ಯಕರ್ತರಿಗೆ ಹಾಗೂ ದುಡಿದವರಿಗೆ ಗೌರವ ನೀಡಬೇಕೆನ್ನುವ ಉದ್ಧೇಶದಿಂದ ನಾನು ಈ ಚುನಾವಣೆಯಲ್ಲಿ ಯಾರಿಂದಲೂ ಹೂ-ಹಾರಗಳನ್ನು ಹಾಕಿಸಿಕೊಂಡಿಲ್ಲ. ಒಳ ಒಳಗೆ ವಿರೋಧ ಮಾಡಿದವರು ಮೊದಲು ಬಂದು ಮಾಲಾರ್ಪಣೆ ಮಾಡುತ್ತಿರುವುದರಿಂದ ನಿಷ್ಠಾವಂತರಿಗೆ ಅಸಮಾಧಾನವಾಗುತ್ತಿದೆ. ನಿಷ್ಠಾವಂತರನ್ನು ಗುರುತಿಸಬೇಕಾಗಿದೆ. ನಾವು ಕೂಡ ಹಂತ ಹಂತವಾಗಿ ಬದಲಾವಣೆ ಮಾಡಿಕೊಳ್ಳಬೇಕಾಗಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ವೇದಿಕೆಯಲ್ಲಿ ಘಟಪ್ರಭಾ ಜೆಜಿ ಕೋ ಅಧ್ಯಕ್ಷ ಬಿ.ಆರ್. ಪಾಟೀಲ(ನಾಗನೂರ), ಯುವ ಧುರೀಣ ಸರ್ವೋತ್ತಮ ಜಾರಕಿಹೊಳಿ, ಟಿಎಪಿಸಿಎಂಎಸ್ ಅಧ್ಯಕ್ಷ ಅಶೋಕ ನಾಯಿಕ, ಉಪಾಧ್ಯಕ್ಷ ವಿಠ್ಠಲ ಪಾಟೀಲ, ಜಿಪಂ ಮಾಜಿ ಸದಸ್ಯ ಡಾ.ರಾಜೇಂದ್ರ ಸಣ್ಣಕ್ಕಿ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಸ ಢವಳೇಶ್ವರ, ನಿರ್ದೇಶಕ ನೀಲಕಂಠ ಕಪ್ಪಲಗುದ್ದಿ, ಸುಭಾಸ ಕುರಬೇಟ, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಅಪ್ಪಯ್ಯ ಬಡ್ನಿಂಗಗೋಳ, ಪ್ರಭಾಶುಗರ ಉಪಾಧ್ಯಕ್ಷ ರಾಮಣ್ಣ ಮಹಾರಡ್ಡಿ, ನಿರ್ದೇಶಕರಾದ ಲಕ್ಷ್ಮಣ ಗಣಪ್ಪಗೋಳ, ಮಾಳಪ್ಪ ಜಾಗನೂರ, ಶಿವಲಿಂಗ ಪೂಜೇರಿ, ಶಿದ್ಲಿಂಗ ಕಂಬಳಿ, ಎಂ.ಆರ್. ಭೋವಿ, ಅರಭಾವಿ ಮಂಡಲ ಬಿಜೆಪಿ ಅಧ್ಯಕ್ಷ ಮಹಾದೇವ ಶೆಕ್ಕಿ, ಮಂಡಲ ವಿಸ್ತಾರಕ ವೆಂಕಟ ಲಾಳೆ, ಅಶೋಕ ಖಂಡ್ರಟ್ಟಿ, ಸಿ.ಎಲ್. ಬೆಳಗಲಿ, ಎಸ್.ಎಲ್. ಹೊಸಮನಿ, ಭೀಮಶಿ ಮಗದುಮ್ಮ, ಡಾ.ಎಸ್.ಎಸ್. ಪಾಟೀಲ, ಮೂಡಲಗಿ ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ, ಬಸವರಾಜ ಮಾಳೇದವರ, ರಂಗಪ್ಪ ಇಟ್ಟನ್ನವರ, ಪರಮೇಶ್ವರ ಹೊಸಮನಿ, ವಿಠ್ಠಲ ಸವದತ್ತಿ, ಗೋವಿಂದ ಕೊಪ್ಪದ, ಸುಭಾಸ ವಂಟಗೋಡಿ, ಅಜ್ಜಪ್ಪ ಗಿರಡ್ಡಿ, ಈರಪ್ಪ ಬನ್ನೂರ, ಮಹಾದೇವಪ್ಪ ಪತ್ತಾರ, ಬಿ.ಡಿ. ಪಾಟೀಲ, ಎಂ.ಎಂ. ಪಾಟೀಲ, ಸುಭಾಸ ಪಾಟೀಲ, ಪುಟ್ಟಣ್ಣ ಪೂಜೇರಿ, ವಸಂತ ತಹಶೀಲ್ದಾರ, ಹನಮಂತ ತೇರದಾಳ, ಶಿವನಗೌಡ ಪಾಟೀಲ, ಲಾಲಸಾಬ ಸಿದ್ದಾಪೂರ, ರಮೇಶ ಸಣ್ಣಕ್ಕಿ, ಸತ್ತೆಪ್ಪ ಕರವಾಡಿ, ಶಂಕರ ಬೆಳಗಲಿ, ಎಚ್.ಡಿ. ಮುಲ್ಲಾ, ದತ್ತು ಕಲಾಲ, ಸೇರಿದಂತೆ ಅರಭಾವಿ ಕ್ಷೇತ್ರದ ಅನೇಕ ಮುಖಂಡರು ಉಪಸ್ಥಿತರಿದ್ದರು. ಪಿ.ಎಲ್. ಬಬಲಿ ಕಾರ್ಯಕ್ರಮ ನಿರೂಪಿಸಿದರು.


Spread the love

About Fast9 News

Check Also

ಸಮಾಜದ ಬದಲಾವಣೆಯಲ್ಲಿ ಶಿಕ್ಷಣವೊಂದೇ ಪ್ರಮುಖ ಅಸ್ತ್ರ: ಶಾಸಕ ಬಾಲಚಂದ್ರ ಜಾರಕಿಹೋಳಿ

Spread the loveಸಮಾಜದ ಬದಲಾವಣೆಯಲ್ಲಿ ಶಿಕ್ಷಣವೊಂದೇ ಪ್ರಮುಖ ಅಸ್ತ್ರ: ಶಾಸಕ ಬಾಲಚಂದ್ರ ಜಾರಕಿಹೋಳಿ ಗೋಕಾಕ- ಹಿಂದುಳಿದ ಹಣಬರ ಸಮಾಜವು ಸಾಮಾಜಿಕವಾಗಿ, …

Leave a Reply

Your email address will not be published. Required fields are marked *