Breaking News

ಕಸ್ತೂರಿ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿ. ಕನ್ನಡ ಉಳಿವಿಗೆ ಪ್ರತಿಯೊಬ್ಬರೂ ಶ್ರಮಿಸಬೇಕು- ಶಾಸಕ ಬಾಲಚಂದ್ರ ಜಾರಕಿಹೊಳಿ*

Spread the love

*ಕನ್ನಡದ ವೈಭವ, ಸಂಭ್ರಮಕ್ಕೆ ಸಾಕ್ಷಿಯಾದ ಮೂಡಲಗಿಯ ಸುವರ್ಣ ಕನ್ನಡ ರಾಜ್ಯೋತ್ಸವ*

*ಕಸ್ತೂರಿ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿ. ಕನ್ನಡ ಉಳಿವಿಗೆ ಪ್ರತಿಯೊಬ್ಬರೂ ಶ್ರಮಿಸಬೇಕು- ಶಾಸಕ ಬಾಲಚಂದ್ರ ಜಾರಕಿಹೊಳಿ*

*ಮೂಡಲಗಿಯಲ್ಲಿಂದು ಅದ್ದೂರಿಯಾಗಿ ನಡೆದ ಸುವರ್ಣ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿಕೆ*

*ಮೂಡಲಗಿ*: ಕನ್ನಡ ನಾಡು, ನುಡಿ, ನೆಲ, ಜಲ ರಕ್ಷಣೆಗಾಗಿ ಎಲ್ಲ ಕನ್ನಡ ಪರ ಸಂಘಟನೆಗಳು ಒಂದಾಗಿ, ಒಗ್ಗಟ್ಟಾಗಿ ಶ್ರಮಿಸಬೇಕು, ಈ ಮೂಲಕ ನಮ್ಮ ಕಸ್ತೂರಿ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಬೇಕು, ನಮ್ಮ ಭಾರತದಲ್ಲಿಯೇ ಕನ್ನಡ ಭಾಷೆಯು ಅತ್ಯಂತ ಸುಂದರ ಹಾಗೂ ಸರಳ ಭಾಷೆಯಾಗಿದೆ ಎಂದು ಶಾಸಕ, ಕೆ.ಎಮ್.ಎಫ್ ನಿರ್ದೇಶಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಶನಿವಾರ ಸಂಜೆ ಪಟ್ಟಣದ ಬಸವರಂಗ ಮಂಟಪದಲ್ಲಿ ಕರ್ನಾಟಕವೆಂದು ನಾಮಕರಣವಾಗಿ ೫೦ ವರ್ಷ ತುಂಬಿದ ಪ್ರಯುಕ್ತ ವಿವಿಧ ಕನ್ನಡಪರ ಸಂಘಟನೆಗಳು ಹಮ್ಮಿಕೊಂಡ ಸುವರ್ಣ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಭಾಷೆಯನ್ನು ಪ್ರೀತಿಸುವುದರ ಜೊತೆಗೆ ಅನ್ಯ ಭಾಷೆಗಳ ಬಗ್ಗೆ ಗೌರವಾಭಿಮಾನ ಬೆಳೆಸಿಕೊಳ್ಳುವಂತೆ ಕನ್ನಡಾಭಿಮಾನಿಗಳಿಗೆ ಕರೆ ನೀಡಿದರು.
ಕರ್ನಾಟಕ ರಾಜ್ಯವೆಂದು ನಾಮಕರಣಗೊಂಡು ಈ ವರ್ಷಕ್ಕೆ ೫೦ ವರ್ಷ ತುಂಬಿದೆ, ಇದಕ್ಕೂ ಮೊದಲು ಮೈಸೂರು ರಾಜ್ಯವಾಗಿತ್ತು, ಡಿ.ದೇವರಾಜು ಅರಸು ಅವರ ಆಳ್ವಿಕೆಯಲ್ಲಿ ಮೈಸೂರು ಹೆಸರಿನ ಬದಲು ಕರ್ನಾಟಕ ಎಂದು ನಾಮಕರಣವಾಯಿತು. ಈ ಸಂಭ್ರಮಕ್ಕೆ ಈಗ ಸುವರ್ಣ ಸಂಭ್ರಮ. ಇಡೀ ವರ್ಷ ರಾಜ್ಯಾದ್ಯಂತ
ಸುವರ್ಣ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ ಎಂದು ಹೇಳಿದರು.
ದೇಶದಲ್ಲಿಯೇ ನಮ್ಮ ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ, ನಮ್ಮ ರಾಜ್ಯದಲ್ಲಿ ಕನ್ನಡ ಭಾಷೆಯ ಜೊತೆಗೆ ದೇಶದಲ್ಲಿರುವ ವಿವಿಧ ರಾಜ್ಯಗಳ ಭಾಷೆಗಳನ್ನು ಮಾತನಾಡುವ ಮೂಲಕ ಅನ್ಯ ಭಾಷೆಗಳಿಗೆ ಗೌರವ ನೀಡುತ್ತಿದ್ದಾರೆ, ನಮ್ಮ ರಾಜ್ಯದಲ್ಲಿ ಕನ್ನಡ ಭಾಷೆಯೇ ಸಾರ್ವಭೌಮ, ಕನ್ನಡ ಭಾಷೆಗೆ ಕುತ್ತು ಬಂದಾಗ ಪ್ರತಿಯೊಬ್ಬ ಕನ್ನಡಿಗನು ತನ್ನ ಜೀವವನ್ನು ಒತ್ತೆಯಿಟ್ಟು ಕನ್ನಡವನ್ನು ಕಾಪಾಡಿರುವ ಉದಾಹರಣೆಗಳು ನಮ್ಮ ಮುಂದೆ ಸಾಕಷ್ಟು ಇವೆ, ಭಾರತವು ಹಲವು ಭಾಷೆಗಳ ಸಮಾಗಮವಾಗಿದ್ದರೂ ಕನ್ನಡ ಭಾಷೆಗಿರುವ ಗಮ್ಮತ್ತು, ಗೌರವ ಹೆಚ್ಚುತ್ತಲೇ ಇದೆ, ಇದಕ್ಕೆ ಕನ್ನಡ ಭಾಷೆಗೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ದೊರಕಿರುವುದೇ ನಮಗೆ ದೊಡ್ಡ ಗೌರವವಾಗಿದೆ ಎಂದು ಹೇಳಿದರು.
ಎಲ್ಲರೂ ಒಂದಾಗಿ ವಿವಿಧ ಕನ್ನಡ ಪರ ಸಂಘಟನೆಗಳ ಆಶ್ರಯದಲ್ಲಿ ಮೂಡಲಗಿಯಲ್ಲಿ ಅತ್ಯಂತ ಯಶಸ್ವಿಯಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದ್ದಾರೆ ಎಂದು ಮನಸಾರೆ ಕೊಂಡಾಡಿದ ಅವರು, ಕನ್ನಡ ನಾಡು-ನುಡಿ, ಉಳಿವಿಗೆ ಎಲ್ಲರೂ ಒಗ್ಗಟ್ಟಾಗಿ ದುಡಿಯಬೇಕು. ಇಲ್ಲಿನ ಸಂಘಟನೆಗಳು ವೈಮನಸ್ಸನ್ನು ತೊರೆದು ಕನ್ನಡದ ಕೆಲಸಕ್ಕೆ ಒಗ್ಗಟ್ಟಾಗಿ ದುಡಿಯಬೇಕು, ಅಂದಾಗ ಮಾತ್ರ ನಾವು ಹೆತ್ತ ತಾಯಿಗೆ ಗೌರವ ನೀಡುವಂತಾಗುತ್ತದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿ, ಕನ್ನಡ ಪರ ಸಂಘಟನೆಗಳ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸಮಾರಂಭಕ್ಕೂ ಮುನ್ನ ತಾಯಿ ಭುವನೇಶ್ವರಿ ಭಾವ ಚಿತ್ರಕ್ಕೆ ಪೂಜೆಸಲ್ಲಿಸುವ ಮೂಲಕ ಸುವರ್ಣ ಕನ್ನಡ ರಾಜ್ಯೋತ್ಸವ ಮೆರವಣಿಗೆಗೆ ಚಾಲನೆ ನೀಡಿದರು. ಬೃಹತ್ ಮೆರವಣಿಗೆಯು ಪಟ್ಟಣದ ಎಸ್.ಎಸ್.ಆರ್ ಕಾಲೇಜಿನಿಂದ ಸಭಾಮಂಟಪವರೆಗೆ ಕನ್ನಡ ನಾಡು-ನುಡಿಗೆ ಸಂಬAಧಿಸಿದ ಶಾಲಾ ಬಾಲಕ-ಬಾಲಕಿಯರಿಂದ ವಿವಿಧ ರೂಪಕಗಳು, ವಿವಿಧ ವಾಧ್ಯವೃಂದಗಳು ಕನ್ನಡಾಭಿಮಾನಿಗಳ ಗಮನ ಸೆಳೆಯಿತು. ಅದ್ದೂರಿ ಪ್ರಮಾಣದಲ್ಲಿ ಮೆರವಣಿಗೆ ನಡೆಯಿತು.
ಶಾಸಕ ಬಾಲಚಂದ್ರ ಜಾರಕಿಹೊಳಿ, ಯುವ ಧುರೀಣ ಸರ್ವೋತ್ತಮ ಜಾರಕಿಹೊಳಿ, ಕಸಾಪ ಅಧ್ಯಕ್ಷರಿಗೆ ಮೆರವಣಿಗೆ ಉದ್ದಕ್ಕೂ ಪುಷ್ಪಾರ್ಪಣೆ ಮಾಡುವ ಮೂಲಕ ಅಭಿಮಾನಿಗಳು ತಮ್ಮ ಗೌರವ ಅರ್ಪಿಸಿದರು.

ಅಧ್ಯಕ್ಷತೆಯನ್ನು ಕಸಾಪ ಮೂಡಲಗಿ ತಾಲೂಕಾ ಘಟಕದ ಅಧ್ಯಕ್ಷ ಡಾ.ಸಂಜಯ ಶಿಂಧಿಹಟ್ಟಿ ವಹಿಸಿದ್ದರು.
ಮುಖ್ಯ ಅತಿಗಳಾಗಿ ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ, ಮೂಡಲಗಿ ತಹಶಿಲ್ದಾರ ಮಹಾದೇವ ಸನಮೂರಿ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಸ ಢವಳೇಶ್ವರ, ಮುಖಂಡರಾದ ರವೀಂದ್ರ ಸೋನವಾಲಕರ, ಬಸವಪ್ರಭು ನಿಡಗುಂದಿ, ಸಂತೋಷ ಸೋನವಾಲಕರ, ಸಂತೋಷ ಪಾರ್ಶಿ, ಮಹಾದೇವ ಶೆಕ್ಕಿ, ಡಾ.ಎಸ್.ಎಸ್.ಪಾಟೀಲ, ಮರೆಪ್ಪ ಮರೆಪ್ಪಗೋಳ, ಹಣಮಂತ ಗುಡ್ಲಮನಿ, ಅನ್ವರ ನದಾಫ್, ಈರಪ್ಪ ಬನ್ನೂರ, ಅಜೀಜ ಡಾಂಗೆ, ಸಿ.ಬಿ.ನಿರ್ವಾಣಿ, ರಾಮಣ್ಣ ಹಂದಿಗುಂದ, ರವೀಂದ್ರ ಸಣ್ಣಕ್ಕಿ, ಅನ್ವರ ನದಾಫ್, ಬಸಗೌಡ ಪಾಟೀಲ, ಚಿದಾನಂದ ಶೆಟ್ಟರ, ಶಿವನಿಂಗ ಗೋಕಾಕ, ಹುಸೇನ ಶೇಖ, ಲಾಲಸಾಬ ಸಿದ್ಧಾಪೂರ, ರಾಮು ಝಂಢೇಕುರಬರ, ಸುಭಾಸ ಪಾಟೀಲ, ಪುರಸಭೆ ಸದಸ್ಯರು, ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.


Spread the love

About Fast9 News

Check Also

ನಿವೃತ್ತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕ ಬಿ , ಎ, ವಂಟಮೂರಿಗೆ ಪತ್ನಿ ವಿಯೋಗ

Spread the loveನಿವೃತ್ತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕ ಬಿ , ಎ, ವಂಟಮೂರಿಗೆ ಪತ್ನಿ ವಿಯೋಗ …

Leave a Reply

Your email address will not be published. Required fields are marked *